ADVERTISEMENT

ವೀರರು, ಶೂರರು ಕುದುರೆ ಏರಿ ಬರ್ತಾರೆ, ಕತ್ತೆಯನ್ನಲ್ಲ: ಸಂಸದ ಪ್ರತಾಪ ಸಿಂಹ

ಸಿದ್ದರಾಮಯ್ಯ ವಿರುದ್ಧ ಪ್ರತಾಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:10 IST
Last Updated 15 ಜೂನ್ 2022, 5:10 IST
ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ವೀರರು, ಶೂರರು ಕುದುರೆಯನ್ನೋ ಅಥವಾ ಆನೆಯನ್ನೋ ಏರಿ ಬರುತ್ತಾರೆ. ಕತ್ತೆಯನ್ನೇರಿ ಬರುವುದಿಲ್ಲ.
- ಮೈಸೂರು ಅಭಿವೃದ್ಧಿ ವಿಷಯದಲ್ಲಿ ಸಂಸದ ಪ್ರತಾಪ ಸಿಂಹ ಅವರು ಬಹಿರಂಗ ಚರ್ಚೆಗೆ ಬರಲಿ; ಕೆಪಿಸಿಸಿ ವಕ್ತಾರ ಎಂ‌. ಲಕ್ಷ್ಮಣ ಅವರನ್ನು ಕಳುಹಿಸುತ್ತೇನೆ ಎಂಬ ವಿಧಾನಸಭೆ ವಿರೋಧಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಸದ ಪ್ರತಾಪ ಸಿಂಹ ಮೇಲಿನಂತೆ ತಿರುಗೇಟು ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಈಗ ಖಾಲಿ ಕುಳಿತಿರುವ ಡಾ.ಎಚ್.ಸಿ.‌ ಮಹಾದೇವಪ್ಪ ಅವರ ಪಂಥಾಹ್ವಾನ ಸ್ವೀಕರಿಸಿದ್ದೇನೆ. ಚರ್ಚೆಗೆ ಸಿದ್ಧವಿದ್ದೇನೆ' ಎಂದು ಹೇಳಿದರು.

ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಜಾಗ, ಸಮಯ ನಿಗದಿಪಡಿಸಿ 48 ಗಂಟೆಗಳ ಮುನ್ನ ನನಗೆ ತಿಳಿಸಲಿ. ನಾನು ಏಕಾಂಗಿಯಾಗಿ ಬರುತ್ತೇನೆ. ಮಾಧ್ಯಮದವರ ಎದುರು ಚರ್ಚಿಸೋಣ. ಕಾಂಗ್ರೆಸ್ ವಕ್ತಾರರೊಬ್ಬರನ್ನು ಕಳುಹಿಸುತ್ತೇವೆ ಎನ್ನುವ ಸಿದ್ದರಾಮಯ್ಯ ಅವರಿಗೆ ಬಾಯಿ ಬಿದ್ದು ಹೋಗಿದೆಯೇ? ಮಹಾದೇವಪ್ಪ ಅವರಿಗೆ ಮಾತು ಬರುವುದಿಲ್ಲವೇ? ಅರ್ಧ ಗಂಟೆ ಸಮಯ ಮಾಡಿಕೊಳ್ಳಲಿ. ನಾನೂ ಒಬ್ಬ ಜನಪ್ರತಿನಿಧಿ. ನನ್ನ ಜೊತೆ ಚರ್ಚೆಗೆ ಅರ್ಧ ಗಂಟೆ ಸಮಯ ಮಾಡಿಕೊಳ್ಳಲಿ. ಏಕೆ ಬರುವುದಿಲ್ಲ? ನಿಮಗೆ ಸ್ವಾಭಿಮಾನ, ಅಹಂ ಅಡ್ಡಿ ಬರುತ್ತಿದೆಯೇ? ಎಂದು ಸಿದ್ದರಾಮಯ್ಯ ಅವರನ್ನು ಕೇಳಿದರು.

ADVERTISEMENT

ನೇರವಾಗಿ ಅವರೇ ಬರಲಿ. ಯುದ್ಧ ಮಾಡೋಣ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲಾಗದವರನ್ನು ಕಳುಹಿಸಿದರೆ ನಾನೂ ತಾಲ್ಲೂಕು ವಕ್ತಾರರನ್ನು ಕಳುಹಿಸುತ್ತೇನೆ. ಚರ್ಚೆಗೆ ಬರಲಿ, ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲೆಸೆದರು.

ಸಿದ್ದರಾಮಯ್ಯ ಅವರು ತಾಲ್ಲೂಕು ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು‌,‌ ಅವರು ಆರ್ಥಿಕ ತಜ್ಞರಲ್ಲ ಎಂದು ನಾನು ಹೇಳಿದರೆ ಅದು ಇಡೀ ವಕೀಲ ಸಮುದಾಯಕ್ಕೆ ಮಾಡುವ ಅವಮಾನ ಹೇಗಾಗುತ್ತದೆ? ಎಂದು ಕೇಳಿದರು.

ಹಿಂದೆ ಮುಖ್ಯಮಂತ್ರಿಗಳಾಗಿ ಬಜೆಟ್ ಮಂಡನೆ ಮಾಡಿದವರು ತಾವು ಆರ್ಥಿಕ ತಜ್ಞ ಎಂದು ಸಿದ್ದರಾಮಯ್ಯ ಅವರಂತೆ ಎಂದಿಗೂ ಕೊಚ್ಚಿಕೊಳ್ಳುತ್ತಿಲ್ಲ. ಅವರೊಬ್ಬ ಮಾತ್ರ ಜಂಭದ ಕೋಳಿಯಂತೆ ಕೊಚ್ಚಿ ಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತಪ್ಪು ಮಾಡಿಲ್ಲವಾದರೆ ಹೆದರಬೇಕೇಕೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‌ತಪ್ಪು ಮಾಡಿಲ್ಲವಾದರೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹೆದರಬೇಕೇಕೆ? ಎಂದು ಸಂಸದ ಪ್ರತಾಪ‌ ಸಿಂಹ ಕೇಳಿದರು.

ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಇಡಿ ತನಿಖೆಗೆ ಕರೆದಿದೆ.ತನಿಖೆಯನ್ನು ಕಾಂಗ್ರೆಸ್ ನಾಯಕರು ಎದುರಿಸಲಿ. ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗಲೂ ವಿಚಾರಣೆ ಎದುರಿಸಿದ್ದರು. ಅಮಿತ್ ಶಾ ಅವರನ್ನು ಕೂಡ ಒಂದು ಪ್ರಕರಣದಲ್ಲಿ ಕಾಂಗ್ರೆಸ್ ಫಿಟ್ ಮಾಡಿತ್ತು. ಅದನ್ನೆಲ್ಲಾ ಎದುರಿಸಿ ನ್ಯಾಯಾಲಯದಲ್ಲಿ ಗೆದ್ದು ಬಂದರು. ಇವರು ತಪ್ಪು ಮಾಡಿಲ್ಲಾ ಎನ್ನುವುದಾದರೆ ಅದನ್ನ ತನಿಖೆಯಲ್ಲಿ ಹೇಳಿ ಬರಲಿ ಎಂದರು.

ಈ ನೆಲದ ಕಾನೂನಿಗೆ ಯಾರೂ ದೊಡ್ಡವರಲ್ಲ; ಯಾರೂ ಚಿಕ್ಕವರಲ್ಲ. ಎಲ್ಲರೂ ಗೌರವ ಕೊಡಬೇಕಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.