
ಮೈಸೂರು: ‘ಪ್ರಜಾಪ್ರಭುತ್ವ ಪ್ರಕ್ರಿಯೆ ಮೂಲಕ ಗ್ರೇಟರ್ ಮೈಸೂರು ಯೋಜನೆ ಜಾರಿಯಾಗುತ್ತಿಲ್ಲ. ತ್ವರಿತವಾಗಿ ಜಾರಿ ಮಾಡಬೇಕೆಂದು ನಗರದ ಭವಿಷ್ಯ ಹಾಳುಮಾಡಬಾರದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಮೈಸೂರು ಚಾಪ್ಟರ್‌ನಿಂದ ಇಲ್ಲಿನ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಗ್ರೇಟರ್ ಮೈಸೂರು–ವೇ ಫಾರ್ವಡ್’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
‘ಬೆಳೆಯುತ್ತಿರುವ ಮೈಸೂರಿಗೆ ಈ ಯೋಜನೆ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯೋಜನೆಯ ಸ್ವರೂಪವನ್ನು ನಿರ್ಧರಿಸಬೇಕಿರುವುದು ಇಲ್ಲಿನ ಜನರು. ಅವರಿಗೆ ಧ್ವನಿಯಾಗಬೇಕಾದ ಪಾಲಿಕೆ ಸದಸ್ಯರು. ಹಾಗಾಗಿ ಯೋಜನೆ ಜಾರಿಗೂ ಮುನ್ನ ಪಾಲಿಕೆ ಚುನಾವಣೆ ನಡೆಯುವುದು ಅಗತ್ಯ’ ಎಂದು ಆಗ್ರಹಿಸಿದರು.
‘ಇಲ್ಲಿನ ಜನಸಂಖ್ಯೆ ಬೆಳೆಯುವ ಅಂಕಿ–ಅಂಶಕ್ಕೆ ಅನುಗುಣವಾಗಿ ನಿರಂತರ ಅಭಿವೃದ್ಧಿಯನ್ನು ಮಾಡಬೇಕು. ಎಲ್ಲೆಲ್ಲಿ ಏನೇನು ಅಗತ್ಯ ಎಂಬುದನ್ನು ಯೋಜಿತವಾಗಿ ರೂಪಿಸುವುದು, ಇತರ ಮಾಹಿತಿಗಳನ್ನು ಸಂಗ್ರಹಿಸುವುದು ಅಗತ್ಯ. ಜನರಲ್ಲಿ ಜಾಗೃತಿಯೂ ಮೂಡಬೇಕು. ಯೋಜನೆಯು ಸಮರ್ಪಕ ಹಾಗೂ ಜೈವಿಕ ಸ್ವರೂಪದಲ್ಲಿ ಸಾಗಬೇಕು. ತಡವೂ ಆಗಬಾರದು’ ಎಂದರು.
‘ಸ್ವಾತಂತ್ರ್ಯಕ್ಕೂ ಮುನ್ನ ಇಲ್ಲಿನ ಅಭಿವೃದ್ಧಿಯು ಭವಿಷ್ಯದ ಮುನ್ನೋಟವನ್ನು ಹೊಂದಿತ್ತು. ಆದರೆ ಸ್ವಾತಂತ್ರೋತ್ತರದಲ್ಲಿ ಕೇವಲ ಸಮಸ್ಯೆಗಳಿಗೆ ಉತ್ತರವಾಗಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಇನ್ನು ಮುಂದಾದರೂ ಇದು ನಿಲ್ಲಬೇಕು. ರಾಜ್ಯ ಸರ್ಕಾರವು ಸಂವಿಧಾನದ 74ನೇ ತಿದ್ದುಪಡಿಯನ್ನು ಗಮನದಲ್ಲಿರಿಸಿಕೊಂಡು ಪ್ರಜಾಪ್ರಭುತ್ವ ಪ್ರಕ್ರಿಯೆ ಮೂಲಕ ಯೋಜನೆ ಜಾರಿ ಮಾಡಲಿ’ ಎಂದು ಒತ್ತಾಯಿಸಿದರು.
ಒಡೆಯರ್ ಸೆಂಟರ್ ಆಫ್ ಆರ್ಕಿಟೆಕ್ಚರ್‌ನ ಉಪನ್ಯಾಸಕ ನೆಲ್ಸನ್ ಜೋ ವಿಜೈ ಪಯಾಸ್ ಅವರು ಪ್ರಾತ್ಯಕ್ಷಿತೆ ಮೂಲಕ, ಭವಿಷ್ಯದ ಮೈಸೂರು ಹೇಗೆ ರೂಪುಗೊಳ್ಳಬೇಕು. ಸಾರ್ವನಿಕರು, ವಿಷಯ ತಜ್ಞರ ಪಾತ್ರವೇನು, ಅದಕ್ಕಾಗಿ ಏನೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕಿದೆ. ನಗರ ವಿಸ್ತರಣೆ ವೇಳೆ ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು.
‘ಪ್ರತಿಯೊಂದು ನಗರಕ್ಕೂ ತನ್ನದೇ ಆದ ಮೂಲ ಗುಣಗಳಿರುತ್ತವೆ. ಅದರ ಆಧಾರದಲ್ಲಿಯೇ ಆ ನಗರ ಬೆಳವಣಿಗೆಯಾಗಿರುತ್ತದೆ. ವಿಸ್ತರಣೆಗೂ ಮುನ್ನ ನಗರವನ್ನು ಅರ್ಥ ಮಾಡಿಕೊಳ್ಳಬೇಕು. ಯೋಜನೆ ಎಂದರೆ ಕೇವಲ ನಕ್ಷೆಯನ್ನು ಸಿದ್ಧಪಡಿಸುವುದಲ್ಲ. ವ್ಯವಸ್ಥೆಯ ಆಲೋಚನೆಗಳು, ಸಾಮರ್ಥ್ಯ ತಿಳಿದುಕೊಳ್ಳಬೇಕು. ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಆಧಾರ ಸಹಿತ ಸಂವಾದಗಳು, ನಿಖರ ದತ್ತಾಂಶ ಸಂಗ್ರಹ ಮಾಡುವುದಲ್ಲದೇ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಮೈಸೂರಿನ ಪರಂಪರೆ, ಅಸ್ಮಿತೆಯನ್ನು ಉಳಿಸಿಕೊಂಡು ಯೋಜನೆ ಸಿದ್ಧಪಡಿಸಬೇಕು’ ಎಂದು ಅವರು ಸಲಹೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಪಾಲಿಕೆ ಉಪ ಆಯುಕ್ತ (ಕಂದಾಯ) ಜಿ.ಎಸ್.ಸೋಮಶೇಖರ್, ನರೆಡ್ಕೊ ಮೈಸೂರು ಚಾಪ್ಟರ್ ಅಧ್ಯಕ್ಷ ಎಂ.ಡಿ.ರಾಘವೇಂದ್ರ ಪ್ರಸಾದ್, ಕಾರ್ಯಾಧ್ಯಕ್ಷ ವಿ.ಸಿ.ರವಿಕುಮಾರ್, ಉಪಾಧ್ಯಕ್ಷ ಎ.ಪಿ.ನಾಗೇಶ್, ಕಾರ್ಯದರ್ಶಿ ಎಸ್.ಎಚ್.ಜಗದೀಶ್, ಪಿ.ಎಸ್.ಗಗನ್‌ದೀಪ್, ನರೆಡ್ಕೊ ಜಿಸಿ ಸದಸ್ಯರಾದ ದಿವ್ಯೇಶ್, ಮಾ.ವಿ. ರಾಮಪ್ರಸಾದ್ ಇದ್ದರು.
‘ರಾಜರು ರೂಪಿಸಿದ ಮಾದರಿ ಅನುಸರಿಸಿ’
‘ದೇಶಕ್ಕೆ ಮಾದರಿಯಾಗಿರುವ ಮೈಸೂರು ಸಂಸ್ಥಾನದ ರಾಜರು ರೂಪಿಸಿದ ನಗರ ಯೋಜನೆ ಮಾದರಿಯಲ್ಲಿಯೇ ಗ್ರೇಟರ್ ಮೈಸೂರು ನಿರ್ಮಾಣವಾಗಬೇಕು’ ಎಂದು ವಿಚಾರಸಂಕಿರಣದಲ್ಲಿ ಪಾಲ್ಗೊಂಡ ವಿವಿಧ ಕ್ಷೇತ್ರಗಳ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಹಿಂದಿನ ಮಹಾರಾಜರ ದೂರದೃಷ್ಟಿಯ ಫಲವಾಗಿ ನಮಗೆ ಸ್ವಚ್ಛ ಮೈಸೂರು ವಿಶಾಲ ರಸ್ತೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ವ್ಯವಸ್ಥಿತವಾಗಿ ದೊರೆಯುತ್ತಿವೆ. ಮುಂದುವರಿದ ನಗರಗಳಲ್ಲಿ ಉಂಟಾಗಿರುವಂತೆ ತೀವ್ರವಾದ ವಾಯುಮಾಲಿನ್ಯ ಜಲಮಾಲಿನ್ಯವಿಲ್ಲ. ಹಾಗಾಗಿ ಇದೇ ಮಾದರಿಯಲ್ಲಿ ನಗರವನ್ನು ವಿಸ್ತರಣೆ ಮಾಡಬೇಕಿದೆ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.