ಮೈಸೂರು: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವುಗಳ ಬೆಳವಣಿಗೆಗೆ ಪೂರಕವಾದ ಅವಕಾಶ ಕಲ್ಪಿಸಬೇಕಿದೆ’ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.
ಇಲ್ಲಿನ ವಿಜಯನಗರದ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಆವರಣದಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ವತಿಯಿಂದ ಗುರುವಾರ ನಡೆದ ಕೈಗಾರಿಕಾ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಆರ್ಥಿಕ ಅಭಿವೃದ್ಧಿಗೆ ಎಂಎಸ್ಎಂಇಗಳು ಪ್ರಮುಖ ಪಾತ್ರವಹಿಸುತ್ತವೆ. ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವ, ತಯಾರಿಸುವ ಮತ್ತು ಪ್ರಕ್ರಿಯೆಗೊಳಿಸುವ ಘಟಕಗಳಾಗಿವೆ. ಜಾಗತಿಕ ಬೇಡಿಕೆ ಪೂರೈಸುವ ಸಾಮರ್ಥ್ಯ ಹೊಂದಿವೆ’ ಎಂದರು.
‘ನಾವೀನ್ಯತೆ ಬೆಳೆಸಲು, ಉದ್ಯಮಶೀಲತೆ ಹೆಚ್ಚಿಸಲು ಮತ್ತು ದೇಶದಾದ್ಯಂತ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಸ್ಟಾರ್ಟಪ್ ಪೂರಕವಾಗಿವೆ’ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಮುಕ್ತಾವಕಾಶ ಕಲ್ಪಿಸಲಾಗುವುದು. ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಅತಿ ಕಡಿಮೆ ಜನ ಸಂಖ್ಯೆ ಇರುವ ರಾಜ್ಯದ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಕೈಗಾರಿಕಾಭಿವೃದ್ದಿ ಪೂರಕವಾದ ವಾತಾವರಣ ಜಿಲ್ಲೆಯಲ್ಲಿ ಇದೆ. ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಿಕೆ ಮಾಡುವ ಮೂಲಕ ಗಡಿ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಸಿಐಐ ಮೈಸೂರು ವಲಯ ಅಧ್ಯಕ್ಷ ನಾಗರಾಜ್ ಗರ್ಗೇಶ್ವರಿ, ಸೋಲೋಮನ್ ಪುಷ್ಪರಾಜ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರಾಧಿಕಾ ದಾಲ್, ಉತ್ಸವ್ ಅಗರ್‌ವಾಲ್, ಸ್ಯಾಮ್ ಚೆರಿಯನ್, ರಬೀಂದ್ರ ಶ್ರೀಕಂಠನ್ ಇದ್ದರು.
ಚಾಮರಾಜನಗರ ಜಿಲ್ಲೆಯಿಂದ ಉದ್ಯೋಗ ಅರಸಿ ಸಾಕಷ್ಟು ಮಂದಿ ಮೈಸೂರು ಸೇರಿದಂತೆ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದು ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿದೆ. ಕೈಗಾರಿಕೋದ್ಯಮಿಗಳು ಇಲ್ಲಿಯೇ ಬಂಡವಾಳ ಹೂಡಿಕೆ ಮಾಡಲು ಮುಂದಾದರೆ ಜಿಲ್ಲಾಡಳಿತದಿಂದ ಅಗತ್ಯ ಪೂರಕ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಕೆಐಎಡಿಬಿಯಿಂದ ಚಾಮರಾಜನಗರದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗಿದೆ. ಗುಂಡ್ಲುಪೇಟೆಯಲ್ಲಿಯೂ ತೋಟಗಾರಿಕೆ ಉತ್ಪನ್ನಗಳು ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗೂ ವಿಫುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವ್ಯಾಪಾರ ವಹಿವಾಟು ಹೆಚ್ಚಿಸಲು ಹೊಸ ಉತ್ಪನ್ನ ಪರಿಚಯಿಸಲು ಮತ್ತು ಉದ್ಯಮದ ಬೆಳವಣಿಗೆಗೆ ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶವನ್ನು ಡಿಸಿ ಶಿಲ್ಪಾನಾಗ್ ಉದ್ಘಾಟಿಸಿದರು. ಶುಕ್ರವಾರವೂ ಕೈಗಾರಿಕಾ ಪ್ರದರ್ಶನ ಇರಲಿದೆ. ಓಜೋನ್ ಜನರೇಟರ್ ಮಮ್ಮ ಮಿಲ್ಸ್ ನ್ಯೂಟ್ರಿಷನ್ ಸೋಲಾರ್ ಗ್ರೀನ್ ಟೆಕ್ನಾಲಾಜೀಸ್ ಬ್ರಶ್ ಟೆಕ್ ಕಾಸ್ಪಿಯನ್ ಸ್ಮಾರ್ಟ್ ಮಾಪ್ ಸ್ವೀಪ್ ಸೇರಿದಂತೆ ವಿವಿಧ ಉದ್ಯಮಗಳು ಉತ್ಪನ್ನ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.