ADVERTISEMENT

ಬೋವಿ ಜನಾಂಗದ ಮೇಲೆ ದೌರ್ಜನ್ಯ

ಸಂತ್ರಸ್ತರಿಂದ ಮೂಡಾ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 13:14 IST
Last Updated 13 ಜೂನ್ 2019, 13:14 IST

ಮೈಸೂರು: ‘ಹಿನಕಲ್‌ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಜಮೀನನ್ನು ಉಳಿಸುವ ಸಲುವಾಗಿ, ಮೂಡಾ ಬೋವಿ ಜನಾಂಗ ವಾಸ ಮಾಡುತ್ತಿದ್ದ ಪ್ರದೇಶವನ್ನು ತನ್ನದೆಂದು ಯಾವುದೇ ಮುನ್ಸೂಚನೆ, ನೋಟಿಸ್ ನೀಡದೆ, ಏಕಾಏಕಿ ಧ್ವಂಸಗೊಳಿಸಿದ್ದು, ಇದರಿಂದ ಅಲ್ಲಿ ವಾಸವಿದ್ದವರು ಬೀದಿಗೆ ಬಿದ್ದಿದ್ದಾರೆ’ ಎಂದು ಶಿವಯೋಗಿಸಿದ್ಧರಾಮೇಶ್ವರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ನಾಗಾರಾಜ್ ದೂರಿದರು.

‘ಇದು ₹ 4 ಕೋಟಿ ಬೆಲೆಬಾಳುವ ಜಮೀನಾಗಿದ್ದು, ಸ್ಥಳೀಯ ರಾಜಕೀಯ ಮುಖಂಡರು ಪ್ರಭಾವ ಬೀರಿದ್ದರಿಂದ ದೌರ್ಜನ್ಯ ನಡೆದಿದೆ. ಮೂಡಾಆಯುಕ್ತರು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಮೂಡಾ ವ್ಯಾಪ್ತಿಗೆ ಬರುವ ಸೂಕ್ತ ದಾಖಲೆಗಳನ್ನು ವಾರದೊಳಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂತ್ರಸ್ತ ಕೃಷ್ಣಪ್ಪ ಮಾತನಾಡಿ ‘ಹಿನಕಲ್ ಸಮೀಪದ ಸರ್ವೇ ನಂಬರ್ 75ರಲ್ಲಿ ಬೋವಿ ಜನಾಂಗದವರು ವಾಸ ಮಾಡುತ್ತಿದ್ದೇವೆ. ಸರ್ವೇ ನಂಬರ್ 74ರಲ್ಲಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿನಕಲ್ ಪಾಪಣ್ಣ ಅವರ ಜಮೀನನ್ನು ಉಳಿಸಲು ಸರ್ವೇ ನಂಬರ್ 75ರ ಐದು ಗುಂಟೆ ಜಾಗವನ್ನು ಮೂಡಾ ವಶಪಡಿಸಿಕೊಳ್ಳುತ್ತಿರುವುದು ಎಷ್ಟು ಸರಿ ? ನಮ್ಮ ಗ್ರಾಮದ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಜಾಗ ಬಿಟ್ಟು ನಮ್ಮ ಪ್ರದೇಶದ ಮೇಲೆ ಏಕೆ ಮೂಡಾದವರಿಗ ಕಣ್ಣು’ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಮೂಡಾ ಅಧಿಕಾರಿಗಳು ಪೊಲೀಸರನ್ನು ಕರೆದುಕೊಂಡು ಬಂದು, ನಮ್ಮ ಗುಡಿಸಲುಗಳನ್ನು ನಾಶ ಮಾಡಿದ್ದಾರೆ. ತಡೆಯಲು ಹೋದವರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಇದೇ ಸಂದರ್ಭ ದೂರಿದರು.

ಸಂಘದ ಪದಾಧಿಕಾರಿಗಳಾದ ಬಸವರಾಜು, ದೇವರಾಜು, ಗುರುಸ್ವಾಮಿ, ಕರಿಯಪ್ಪ, ಚಿನ್ನಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.