ADVERTISEMENT

ಎಸಿಬಿಗೆ ದೂರು ನೀಡಲು ಸೂಚನೆ

ಮುಡಾ ನಿವೇಶನ ಗೋಲ್‌ಮಾಲ್‌ ಪ್ರಕರಣ: ಸಾಬೀತಾದರೆ ಕಠಿಣ ಕ್ರಮ–ಎಚ್‌.ವಿ.ರಾಜೀವ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:32 IST
Last Updated 22 ನವೆಂಬರ್ 2020, 4:32 IST
ಪತ್ರಿಕಾಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್‌ ಹಾಗೂ ಆಯುಕ್ತ ಡಿ.ಬಿ.ನಟೇಶ್‌
ಪತ್ರಿಕಾಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್‌ ಹಾಗೂ ಆಯುಕ್ತ ಡಿ.ಬಿ.ನಟೇಶ್‌   

‌ಮೈಸೂರು: ಈಚೆಗೆ ಬೆಳಕಿಗೆ ಬಂದ ನಿವೇಶನದ ಗೋಲ್‌ಮಾಲ್‌ ಪ್ರಕರಣಹಾಗೂಮಂಜೂರಾದ ಏಳು ನಿವೇಶನಗಳನ್ನು ಒಂದೇ ದಿನ ಮೈಸೂರು ನಗರ ಪ್ರಾಧಿಕಾರಕ್ಕೆ (ಮುಡಾ) ಹಿಂದಿರುಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡುವಂತೆ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್ ಅವರು ಆಯುಕ್ತ ಡಿ.ಬಿ.ನಟೇಶ್‌ ಅವರಿಗೆ ಸೂಚನೆ ನೀಡಿದ್ದಾರೆ.

‘ವ್ಯಕ್ತಿಯೊಬ್ಬರು ಕಾನೂನು ಬಾಹಿರ ವಾಗಿ ನಿವೇಶನ ಪಡೆದಿರುವಪ್ರಕರಣ ನನ್ನ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿ, ಪ್ರಾಧಿಕಾರಕ್ಕೆ ಉಂಟಾಗಿದ್ದ ನಷ್ಟವನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಹೀಗೆಯೇ, ಏಳು ನಿವೇಶನಗಳನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಿದ್ದು, ಸಂಬಂಧಿಸಿದವರಿಗೆ ವಾಪಸ್‌ ಹಣ ನೀಡಲಾಗಿದೆ. ಏಕೆ ಹಿಂದಿರುಗಿಸಲಾಗಿದೆ? ಆ ನಿವೇಶನಗಳ ಪರಿಸ್ಥಿತಿ ಈಗ ಏನಾಗಿದೆ, ಬದಲಿ ನಿವೇಶನ ನೀಡಲಾಗಿದೆಯೇ? ಮಂಜೂರಾಗಿ ರದ್ದಾದ ನಿವೇಶನಗಳು ಯಾರ ಪಾಲಾದವು, ಬೇರೆಯವರಿಗೆ ಮಂಜೂರು ಮಾಡಲಾಗಿದೆಯೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಡಾ’ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆಯೇ? ಈಚೆಗೆ ಬೆಳಕಿಗೆ ಬಂದ ಪ್ರಕರಣದಲ್ಲಿ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಪತ್ನಿಗೆ ಖಾತೆ ವರ್ಗಾವಣೆ, ಕ್ರಯಪತ್ರ ಮಾಡಿಕೊಡಲು ಒಂದೇ ದಿನದಲ್ಲಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ, ‘ಈ ಸಂಬಂಧ ಕ್ರಮ ವಹಿಸಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ‍ಪ್ರಕರಣದ ಬಗ್ಗೆ ಎಸಿಬಿಯಿಂದಲೇ ತನಿಖೆ ನಡೆಯಲಿ. ಯಾರ ಷಡ್ಯಂತ್ರವಿದೆ ಎಂಬುದು ಗೊತ್ತಾಗಲಿ. ನೌಕರರು ಶಾಮೀಲಾಗಿರುವುದು ಸಾಬೀತಾದರೆ ಖಂಡಿತ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತ ಡಿ.ಬಿ.ನಟೇಶ್‌, ‘ಏಳು ಪ್ರಕರಣಗಳಲ್ಲಿ ನಿವೇಶನ ವಾಪಸ್‌ ಪಡೆದು, ಹಣ ಹಿಂದಿ ರುಗಿಸಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. 15 ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದರು.

ಈಚೆಗಿನ ಪ್ರಕರಣದ ಹಿನ್ನೆಲೆ: ನಿವೃತ್ತ ಐಎಫ್‌ಎಸ್‌ ಅಧಿಕಾರಿಯೊಬ್ಬರು ವಿಜಯನಗರ 4ನೇ ಹಂತದ 2ನೇ ಫೇಸ್‌ನಲ್ಲಿ 1994ರಲ್ಲಿ ತಮಗೆ ಮಂಜೂರಾಗಿದ್ದ ನಿವೇಶನವೊಂದನ್ನು ಬೇಡವೆಂದು 2002ರಲ್ಲಿ ಹಿಂದಿರುಗಿಸಿದ್ದರು. ಅವರು ಪಾವತಿಸಿದ್ದ ಮುಂಗಡ ಹಣವನ್ನುಪ್ರಾಧಿಕಾರವು2006ರಲ್ಲಿ ಮರು ಪಾವತಿಸಿತ್ತು. ಈಚೆಗೆ (ಆ.13) ಆ ಅಧಿಕಾರಿ ಪತ್ನಿಯು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿ, ಪತಿ ನಿಧನರಾಗಿದ್ದು, ತಮಗೆ ಪೌತಿ ಖಾತೆ ಮಾಡಿ ಕ್ರಯ ಪತ್ರ ನೀಡುವಂತೆ ಮನವಿ ಸಲ್ಲಿಸಿದ್ದರು.

ಪ್ರಾಧಿಕಾರವು ದಂಡ ಶುಲ್ಕ ಹಾಗೂ ನಿವೇಶನ ದರ ಪಾವತಿಸಿಕೊಂಡು ಸೆ.21ರಂದು ಪೌತಿ ಖಾತೆ ವರ್ಗಾವಣೆ ಮಾಡಿಕೊಟ್ಟಿದೆ. ಅಲ್ಲದೇ, ಕ್ರಯ ಪತ್ರ ನೀಡಿದೆ. ಬಳಿಕ ವ್ಯಕ್ತಿಯೊಬ್ಬರು ಅಧ್ಯಕ್ಷರಿಗೆ ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.ಆಗದಾಖಲೆ ಪರಿಶೀಲಿಸಿದಾಗ ಗೋಲ್‌ಮಾಲ್‌ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಾಧಿಕಾರವು ಅಧಿಕಾರಿಯ ಪತ್ನಿಗೆ ನೋಟಿಸ್‌ ನೀಡಿ ದಾಖಲೆಗಳು ಹಾಗೂ ನಿವೇಶನ ವಾಪಸ್‌ ಪಡೆದಿದೆ. ಕ್ರಯ ಪತ್ರ ರದ್ದುಗೊಳಿಸಲಾಗಿದೆ.

ಮೂಲ ಮಂಜೂರಾತಿದಾರರಿಂದ ನಿವೇಶನ ಹಿಂಪಡೆದು, ಹಣ ಮರುಪಾವತಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಕಡತಗಳಲ್ಲಿ ಯಾವುದೇ ಟಿಪ್ಪಣಿ ದಾಖಲಾಗಿಲ್ಲ. ಹೀಗಾಗಿ, ಈ ಗೊಂದಲ ಉಂಟಾಗಿದೆ. ಗೊತ್ತಾದ ಮೇಲೆ ನಿವೇಶನದ ಹಕ್ಕನ್ನು ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.