ADVERTISEMENT

ಮೈಸೂರು: 8.28 ಎಕರೆ ಜಮೀನು ಎಂಡಿಎ ವಶಕ್ಕೆ

ವಿಜಯನಗರ ನಾಲ್ಕನೇ ಹಂತದಲ್ಲಿ ಕಾರ್ಯಾಚರಣೆ; ಪೊಲೀಸರ ಸಾಥ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:33 IST
Last Updated 23 ಜೂನ್ 2025, 15:33 IST
ವಿಜಯನಗರ ನಾಲ್ಕನೇ ಹಂತದಲ್ಲಿ  ಎಂಡಿಎಗೆ ಸೇರಿದ ಜಾಗದ ಒತ್ತುವರಿಯನ್ನು ಸೋಮವಾರ ತೆರವುಗೊಳಿಸಲಾಯಿತು          
ವಿಜಯನಗರ ನಾಲ್ಕನೇ ಹಂತದಲ್ಲಿ  ಎಂಡಿಎಗೆ ಸೇರಿದ ಜಾಗದ ಒತ್ತುವರಿಯನ್ನು ಸೋಮವಾರ ತೆರವುಗೊಳಿಸಲಾಯಿತು             

ಮೈಸೂರು: ವಿಜಯನಗರ ನಾಲ್ಕನೇ ಹಂತ ವ್ಯಾಪ್ತಿಯ ಬಸವನಹಳ್ಳಿಯಲ್ಲಿ 8 ಎಕರೆ 28 ಗುಂಟೆ ಜಾಗವನ್ನು ಸೋಮವಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಮರು ವಶಕ್ಕೆ ಪಡೆದರು.

ಎಂಡಿಎ ಅಸ್ತಿತ್ವಕ್ಕೆ ಬಂದ ತರುವಾಯ ನಡೆದಿರುವ ಮೊದಲ ಕಾರ್ಯಾಚರಣೆ ಇದಾಗಿದೆ. ಹೀಗೆ ವಶಪಡಿಸಿಕೊಳ್ಳಲಾದ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ₹150 ಕೋಟಿ ಎಂದು ಅಂದಾಜಿಸಲಾಗಿದೆ.

ಎಂಡಿಎ ಅಧಿಕಾರಿಗಳು ಹಾಗೂ ಪೊಲೀಸರನ್ನು ಒಳಗೊಂಡ ತಂಡವು ಬೆಳಿಗ್ಗೆ 6ರ ಸುಮಾರಿಗೆ ಬಸವನಹಳ್ಳಿಯಲ್ಲಿ ಕಾರ್ಯಾಚರಣೆ ಆರಂಭಿಸಿತು. ಈ ಜಾಗದಲ್ಲಿ ನಿರ್ಮಾಣಗೊಂಡಿದ್ದ ಮನೆ, ಶೆಡ್‌ಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದ್ದು, ಖಾಸಗಿಯಾಗಿ ಹಾಕಿಕೊಂಡಿದ್ದ ತಂತಿಬೇಲಿಯನ್ನು ಕಿತ್ತೊಗೆಯಲಾಯಿತು. ಬೆಳಿಗ್ಗೆ 11ರವರೆಗೂ ಕಾರ್ಯಾಚರಣೆ ನಡೆಯಿತು.

ADVERTISEMENT

ಬಸವನಹಳ್ಳಿ ಸರ್ವೆ ಸಂಖ್ಯೆ 108 ಹಾಗೂ 109ರಲ್ಲಿನ ಈ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲು ಮುಡಾ 1991ರಲ್ಲಿ ಭೂಸ್ವಾಧೀನ ಆದೇಶ ಹೊರಡಿಸಿತ್ತು. 1992ರಲ್ಲಿ ಅಂತಿಮ ಆದೇಶ ಹೊರಬಿದ್ದಿದ್ದು, 1994ರಲ್ಲಿ ಪ್ರತಿ ಎಕರೆಗೆ ₹4.55 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಕೆಲವರು ಪರಿಹಾರ ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿತ್ತು.

ಭೂಸ್ವಾಧೀನ ವಿರೋಧಿಸಿ ಜಮೀನಿನ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈಚೆಗೆ ಹೈಕೋರ್ಟ್‌ ಎಂಡಿಎ ಪರ ಆದೇಶ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡವು ಕಾರ್ಯಾಚರಣೆ ಮೂಲಕ ಜಮೀನು ವಶಕ್ಕೆ ಪಡೆದಿದ್ದು, ಮಂಗಳವಾರದಿಂದಲೇ ಪೂರ್ತಿ ಜಾಗಕ್ಕೆ ಬೇಲಿ ಹಾಕುವ ಕಾರ್ಯ ಆರಂಭ ಆಗಲಿದೆ ಎಂದು ಮುಡಾ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಥಳೀಯರ ವಿರೋಧ:

ಉದ್ದೇಶಿತ ಜಾಗದಲ್ಲಿ ಈಗಾಗಲೇ ಹಲವರು ಮನೆ, ಶೆಡ್‌ಗಳನ್ನು ಕಟ್ಟಿಕೊಂಡಿದ್ದು, ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು.

‘ಪ್ರಕರಣವು ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಅಧಿಕಾರಿಗಳು ನಮ್ಮನ್ನು ತೆರವುಗೊಳಿಸುವುದು ಸರಿಯಲ್ಲ. ನಮಗೆ ಈಗಿನ ಮಾರುಕಟ್ಟೆ ಪ್ರಕಾರ ಸಲ್ಲಬೇಕಾದ ಪರಿಹಾರ, ಭೂ ಸಂತ್ರಸ್ತರಿಗೆ ನಿವೇಶನ, ಉದ್ಯೋಗ ನೀಡಿ. ಅಲ್ಲಿಯವರೆಗೆ ತೆರವಿಗೆ ಅವಕಾಶ ನೀಡುವುದಿಲ್ಲ’ ಎಂದು ಪ್ರತಿರೋಧ ತೋರಿದರು.

ಮಹಿಳೆಯರೂ ಸೇರಿದಂತೆ ಪ್ರತಿರೋಧ ತೋರಿದ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಅತಿಕ್ರಮಣ ತೆರವು ವಿರೋಧಿಸಿದ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದರು    
ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿದ್ದ ಜಮೀನಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಬುಧವಾರದಿಂದಲೇ ತಂತಿಬೇಲಿ ಹಾಕುವ ಕಾರ್ಯ ನಡೆಯಲಿದೆ
ಕೆ.ಆರ್‌. ರಕ್ಷಿತ್‌ ಎಂಡಿಎ ಆಯುಕ್ತ

ಹೊಸ ಬಡಾವಣೆ ನಿರ್ಮಾಣ?

ಆದಾಯ ಕ್ರೋ‌ಢೀಕರಣಕ್ಕೆ ಮುಂದಾಗಿರುವ ಎಂಡಿಎ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ. ಇದರ ಜೊತೆಗೆ ಪ್ರಾಧಿಕಾರಕ್ಕೆ ಸೇರಿದ ಜಾಗಗಳನ್ನು ಗುರುತಿಸಿ ಅವುಗಳಲ್ಲಿ ಹೊಸ ಬಡಾವಣೆಗಳ ನಿರ್ಮಾಣ ಹಾಗೂ ನಿವೇಶನಗಳ ಹಂಚಿಕೆಗೆ ಈಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಮೊದಲ ಕಾರ್ಯಾಚರಣೆ ಆರಂಭ ಆಗಲಿದೆ. ಈಗ ವಶಪಡಿಸಿಕೊಳ್ಳಲಾದ ಜಮೀನು ರಿಂಗ್‌ ರಸ್ತೆಗೆ ಹೊಂದಿಕೊಂಡಂತೆ ಇದ್ದು ಇಲ್ಲಿ ಬಡಾವಣೆ ನಿರ್ಮಾಣಕ್ಕೆ ಯೋಜಿಸಲಾಗುತ್ತಿದೆ. ಹಾಗಾದಲ್ಲಿ ಎಂಡಿಎಗೆ ನೂರಾರು ಕೋಟಿ ಆದಾಯ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.