ಜಾರಿ ನಿರ್ದೇಶನಾಲಯ
ಮೈಸೂರು: ಮುಡಾ ನಿವೇಶನಗಳ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಒಟ್ಟು 631 ನಿವೇಶನಗಳ ಮಾಹಿತಿ ಕೋರಿ ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದೆ.
ಡಿ. 16ರಂದು ಇ.ಡಿ. ಬೆಂಗಳೂರು ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕಣ್ಣನ್ ಅವರು ಪತ್ರ ಬರೆದಿದ್ದು, ತನಿಖೆಗೆ ಅವಶ್ಯವಾಗಿರುವ ಎಲ್ಲ ಮಾಹಿತಿಯನ್ನು ಜರೂರಾಗಿ ಒದಗಿಸಬೇಕೆಂದು ಸೂಚಿಸಿದ್ದಾರೆ. ಈ ಪತ್ರ ಈಗ ಮಾಧ್ಯಮಗಳಿಗೆ ದೊರೆತಿದೆ.
ಮುಡಾ ವ್ಯಾಪ್ತಿಯ 631 ನಿವೇಶನಗಳ ಪಟ್ಟಿಯನ್ನು ಸರ್ವೆ ಸಂಖ್ಯೆ ಸಮೇತ ಇ.ಡಿ. ನೀಡಿದೆ. ದಟ್ಟಗಳ್ಳಿ, ಕೆಸರೆ 1ರಿಂದ ಮೂರನೇ ಹಂತ, ಜೆ.ಪಿ. ನಗರ, ವಿಜಯನಗರ, ಹಂಚ್ಯ–ಸಾತಗಳ್ಳಿ, ಹೆಬ್ಬಾಳ, ಶ್ರೀರಾಂಪುರ, ವಸಂತನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಮಾಲೀಕರು, ಅವರ ವಿಳಾಸ, ನಿವೇಶನ ಮಂಜೂರಾದ ದಿನ, ನಿವೇಶನದ ವಿಸ್ತೀರ್ಣದ ಮಾಹಿತಿಯನ್ನು ಅಧಿಕಾರಿಗಳು ಕೋರಿದ್ದಾರೆ. ಕೆಲವು ಬಡಾವಣೆಗಳ ನಕ್ಷೆಯನ್ನೂ ನೀಡುವಂತೆ ಸೂಚಿಸಿದ್ದಾರೆ.
ಈ ನಿವೇಶನಗಳಲ್ಲಿ ಕೆಲವು 50: 50 ಅನುಪಾತದಲ್ಲಿ ಹಂಚಿಕೆಯಾಗಿದ್ದರೆ, ಇನ್ನೂ ಕೆಲವು ನಿವೇಶನಗಳ ವಿಸ್ತೀರ್ಣ ಬದಲಿಸಿ ಹಂಚಲಾಗಿದೆ ಎನ್ನಲಾಗಿದೆ.
ಹೊಸತೇನಲ್ಲ:
‘ಮುಡಾ ವಿಚಾರಣೆ ಆರಂಭವಾದ ಬಳಿಕ ಇ.ಡಿ.ಯಿಂದ ಹಲವು ಪತ್ರಗಳು ಬಂದಿವೆ. ಅವರು ಕೇಳಿದ ಎಲ್ಲ ಮಾಹಿತಿಯನ್ನೂ ಒದಗಿಸುತ್ತಿದ್ದೇವೆ. ತನಿಖೆ ನಡೆದಿರುವ ಕಾರಣ ಹೆಚ್ಚೇನು ಹೇಳಲಾಗದು’ ಎಂದು ಮುಡಾದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಕ್ಲೀನ್‌ಚಿಟ್ ನೀಡಲು ಸಿದ್ಧತೆ– ಅಶೋಕ
ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ. ಕ್ಲೀನ್‌ಚಿಟ್ ನೀಡಲು ಸಿದ್ಧತೆ ಮಾಡಿಕೊಂಡಿರುವಂತಿದೆ’ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ ಶನಿವಾರ ದೂರಿದರು.
ಸುದ್ದಿಗೋಷ್ಠಿಯಲ್ಲಿ ಅವರು, ‘ಈ ಪ್ರಕರಣದಲ್ಲಿ ಮಧ್ಯವರ್ತಿಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಆದರೆ, ಲೋಕಾಯುಕ್ತ ಪೊಲೀಸರು ಏನೂ ಮಾಡಿಲ್ಲ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದೇವೆ’ ಎಂದರು.
ದರೋಡೆ ರಾಜ್ಯ:
‘ಕರ್ನಾಟಕ ದರೋಡೆ ರಾಜ್ಯವಾಗಿ ಬದಲಾಗಿದೆ. ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಜನರ ರಕ್ಷಣೆ ಮಾಡುವವರೇ ಇಲ್ಲ’ ಎಂದರು.
‘ಬೀದರ್‌ನಲ್ಲಿ ಬ್ಯಾಂಕ್‌ನ ಹಣ ದರೋಡೆ ಮತ್ತು ಸಿಬ್ಬಂದಿ ಕೊಲೆ ನಡೆದಿದೆ. ಮಂಗಳೂರಿನಲ್ಲಿ ಹಾಲಿವುಡ್ ಸಿನಿಮಾ ಶೈಲಿಯಲ್ಲಿ ₹ 15 ಕೋಟಿ ಹಣ ಲೂಟಿಯಾಗಿದೆ. ಪೊಲೀಸರ ಬಗ್ಗೆ ಯಾರಿಗೂ ಭಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೊಲೀಸ್ ಅಧಿಕಾರಿಗಳ ಮೇಲೆ ಎಷ್ಟು ಹಿಡಿತ ಇದೆ, ರಾಜ್ಯದ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದರು.
‘ಕಳ್ಳರು ಬೇರೆ ರಾಜ್ಯಗಳಿಂದ ಬಂದು ದರೋಡೆ ಮಾಡಿಕೊಂಡು ಬಸ್ಸು, ರೈಲಿನಲ್ಲಿ ಹೋಗುತ್ತಿದ್ದಾರೆ. ಪೊಲೀಸರ ಕೈಯಲ್ಲಿ ಪಿಸ್ತೂಲ್ ಇಲ್ಲ. ಆದರೆ, ದರೋಡೆ ಮಾಡುವವರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ’ ಎಂದರು.
‘ಲವ್ ಜಿಹಾದ್, ಕೋಮುಗಲಭೆ, ಹಸುಗಳ ಕೆಚ್ಚಲು ಕತ್ತರಿಸಿದ್ದು ಮುಂತಾದ ಘಟನೆಗಳಲ್ಲಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಅಧಿಕಾರಿಗಳು ಸಾಯುತ್ತಿದ್ದಾರೆ. ಗೃಹ ಇಲಾಖೆಯ ಸಭೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿಲ್ಲ. ಡಿ.ಕೆ. ಶಿವಕುಮಾರ್-ಸತೀಶ ಜಾರಕಿಹೊಳಿ ಗಲಾಟೆ, ಸಿ.ಎಂ ಬದಲಾವಣೆ ಮೊದಲಾದ ರಾಜಕೀಯದಲ್ಲೇ ಸರ್ಕಾರ ಮುಳುಗಿದೆ’ ಎಂದು ದೂರಿದರು.
‘ಶ್ವೇತಪತ್ರ ಬಿಡುಗಡೆ ಮಾಡಿ’:
‘ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದಾರೆ ಎಂದು ಶ್ವೇತಪತ್ರ ಬಿಡುಗಡೆ ಮಾಡಲಿ’ ಎಂದು ಅಶೋಕ ಆಗ್ರಹಿಸಿದರು.
‘ಬಿಜೆಪಿ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ, ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂದು ಕೂಡ ತಿಳಿಸಲಿ’ ಎಂದು ಆಗ್ರಹಿಸಿದರು.
ಸಿಎಂ ರಾಜೀನಾಮೆಗೆ ವಿಜಯೇಂದ್ರ ಆಗ್ರಹ
ಬೆಂಗಳೂರು: ಮೈಸೂರು 'ಮುಡಾ'ದಲ್ಲಿ ನಡೆದಿರುವುದು ಸಾವಿರಾರು ಕೋಟಿ ರೂಪಾಯಿ ಹಗರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಮುಡಾ ಹಗರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯ ₹300 ಕೋಟಿಗೂ ಹೆಚ್ಚು ಬೆಲೆಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಖ್ಯಮಂತ್ರಿ ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದರು.
ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದೆ. ಸರ್ಕಾರ ಮತ್ತು ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಕರಣವನ್ನು ಬಯಲಿಗೆ ಎಳೆದ ಸ್ನೇಹಮಯಿ ಕೃಷ್ಣ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿತ್ತು. ಅವರ ಮೇಲೆ ಆರೋಪ ಹೊರಿಸಿ, ಅವರನ್ನು ಬಂಧಿಸುವ ಹಂತಕ್ಕೂ ಹೋಗಿತ್ತು. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟ ರಾಜ್ಯಪಾಲರ ಮೇಲೂ ಅಪವಾದ ಹೊರಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಈಗ ಇ.ಡಿ. ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯ ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದರು.
ಕರ್ನಾಟಕ ದರೋಡೆಕೋರರ ಸ್ವರ್ಗ ಆಗಿರುವುದರಿಂದ ಹೂಡಿಕೆದಾರರು ಮುಂದೆ ಬರುತ್ತಿಲ್ಲ. ಇದು ಪಶ್ಚಿಮ ಬಂಗಾಳದಂತೆಯೇ ಆಗುತ್ತಿದೆಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.