ಸುತ್ತೂರು (ಮೈಸೂರು ಜಿಲ್ಲೆ): ‘ಮುಡಾ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಮ್ಮ ವಿರುದ್ಧ ಏನಾದರೂ ಸಾಕ್ಷಿ ಇದ್ದರೆ ತೋರಿಸಲಿ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸವಾಲು ಹಾಕಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಇಡಿಗೆ ಯಾವ ಸಾಕ್ಷಿಯೂ ಸಿಕ್ಕಿಲ್ಲ’ ಎಂದರು.
‘ನಮ್ಮ ನಿವೇಶನದ ವಿಚಾರವೇ ಬೇರೆ. ಮುಡಾ ಹಗರಣವೇ ಬೇರೆ. ಮುಡಾದವರು ನಮ್ಮ ಜಮೀನನ್ನು ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಇದಕ್ಕೆ ಬದಲಿಯಾಗಿ ನಿವೇಶನ ಕೊಟ್ಟಿದ್ದರು. ಹಿಂದೆ ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವೆಂದು ರೈತರಿಗೆ 50:50 ಅನುಪಾತದಲ್ಲಿ ನಿವೇಶನ ಕೊಟ್ಟು ಹಗರಣ ಮಾಡಿದ್ದಾರೆ. ಆಗಿನ ಮುಡಾ ಸದಸ್ಯರೂ ಭಾಗಿಯಾಗಿದ್ದಾರೆ. ಇದಕ್ಕೂ– ನಮಗೆ ನೀಡಿದ್ದ 14 ನಿವೇಶಗಳಿಗೂ ಸಂಬಂಧವಿಲ್ಲ’ ಎಂದು ಹೇಳಿದರು.
‘14 ನಿವೇಶನಗಳಲ್ಲಿ ಕಾನೂನು ಬಾಹಿರ ಕ್ರಮವಾಗಿಲ್ಲ ಎಂಬುದು ಇ.ಡಿಗೂ ಗೊತ್ತಿದೆ. ಕೇಂದ್ರದವರು, ಕರ್ನಾಟಕ ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರು ಇ.ಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿಯ ತಾಳಕ್ಕೆ ಇಡಿ ಕುಣಿಯುತ್ತಿದೆ. ಅಂತಿಮವಾಗಿ ಸತ್ಯ, ನ್ಯಾಯ ಇರುವವರಿಗೆ ಗೆಲುವು ಸಿಗುತ್ತದೆ’ ಎಂದರು.
ಆರೋಪ ಮುಕ್ತರಾಗಿ ಬರುತ್ತಾರೆ: ‘ಮುಡಾ ನಿವೇಶನವ ವಿಷಯದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬೇರೆಯವರ ಆಸ್ತಿಗಳನ್ನು ಇಡಿ ಜಪ್ತಿ ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ನಮ್ಮ ಕುಟುಂಬದ ಹೆಸರಿನಲ್ಲಿರುವ ಯಾವ ಆಸ್ತಿಗಳನ್ನೂ ಜಪ್ತಿ ಮಾಡಿಲ್ಲ. ಮುಡಾ ಹಗರಣದಲ್ಲಿ ಭಾಗಿಯಾದವರ ಆಸ್ತಿಗಳನ್ನು ಮಾತ್ರವೇ ಇ.ಡಿ ವಶಕ್ಕೆ ಪಡೆಯುತ್ತಿದೆ’ ಎಂದರು.
‘ತಂದೆಗೆ ಇ.ಡಿಯಿಂದ ನೋಟಿಸ್ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಐದು ವರ್ಷ ಅವರೇ ಸಿಎಂ: ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ದೊಡ್ಡ ನಾಯಕರಿಗೆ ಬಿಟ್ಟಿದ್ದು. ಆದರೆ, ಸಿದ್ದರಾಮಯ್ಯ ಅಧಿಕಾರದ ಅವಧಿ ಪೂರ್ಣಗೊಳಿಸುತ್ತಾರೆ. ಅವರ ಅಧಿಕಾರಕ್ಕೆ ಕುತ್ತೇನೂ ಬಂದಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿದೆ. ರಾಜೀನಾಮೆ ಕೊಡಿ ಎಂದು ಯಾರೂ ಕೇಳಿಲ್ಲ’ ಎಂದು ಹೇಳಿದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ತಂದೆ ಪರವಾಗಿದ್ದಾರೆ. ಪಕ್ಷದ ಎಲ್ಲ ಶಾಸಕರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಹೀಗಿರುವಾಗ, ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ಹೇಳಿದರು.
‘ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿಯವರು ಏನೇನೋ ಹುಟ್ಟು ಹಾಕುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಹಿಂದೂ ಮೂಲಭೂತವಾದಿಗಳು ನಿಜವಾದ ಉಗ್ರರು: ‘ನನಗೆ ದೇವರ ಬಗ್ಗೆ ನಂಬಿಕೆ ಇದೆ. ಆದರೆ, ತಂದೆಗಿಲ್ಲ. ಆದರೂ ನಾವು ಒಂದೇ ಮನೆಯಲ್ಲಿರುತ್ತೇವೆ. ನಾನು ಪೂಜೆ ಮಾಡುತ್ತೇನೆ; ಅವರು ಮಾಡುವುದಿಲ್ಲ. ಯಾರ‍್ಯಾರಿಗೆ ನಂಬಿಕೆ ಇರುತ್ತದೆಯೋ ಅವರು ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡುತ್ತಾರೆ. ಎಲ್ಲರಿಗೂ ಒಂದೇ ರೀತಿಯ ನಂಬಿಕೆ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ’ ಎಂದರು.
‘ಕುಂಭಮೇಳ ಟೀಕಿಸುವವರು ಅಯೋಗ್ಯರು’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಹಾಗೆ ಹೇಳುವವರೇ ಅಯೋಗ್ಯರು’ ಎಂದರು.
‘ನಂಬಿಕೆ ಇರುವವರು ಹೋಗಲಿ, ಇಲ್ಲದಿರುವವರು ಹೋಗುವುದು ಬೇಡ ಎಂದಷ್ಟೇ ನಾವು ಹೇಳಿದ್ದೇವೆ. ಅವರವರ ನಂಬಿಕೆಯ ಪ್ರಕಾರ ಬದುಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದನ್ನು ಗೌರವಿಸಬೇಕು. ಹಿಂದೂ ಧರ್ಮದಲ್ಲಿ ಒಂದೇ ರೀತಿಯ ನಂಬಿಕೆ ಇದೆಯಾ? ಹಲವು ರೀತಿಯ ನಂಬಿಕೆ ಇವೆ. ನಾಸ್ತಿಕರು ಕೂಡ ಹಿಂದೂ ಧರ್ಮದಲ್ಲಿದ್ದಾರೆ. ನಾಸ್ತಿಕತೆ ಒಂದು ದರ್ಶನ ಆಗಿತ್ತು. ಅದನ್ನು ಫಿಲಾಸಫಿ ಮಟ್ಟಕ್ಕೆ ಏರಿಸಿದ್ದು ಹಿಂದೂ ಧರ್ಮ. ಅಷ್ಟೊಂದು ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿದೆ. ಆದರೆ, ಕೆಲವರು ಅದನ್ನು ಸಂಕುಚಿತಗೊಳಿಸುತ್ತಿದ್ದಾರೆ’ ಎಂದು ಹೇಳಿದರು.
‘ಬೇರೆ ನಂಬಿಕೆ ಇದೆ ಎಂದಾಕ್ಷಣ ಅದು ತಾಲಿಬಾನಿ ಮನಸ್ಥಿತಿ ಅಂತಲ್ಲ. ತಾಲಿಬಾನಿಗಳು ಭಯೋತ್ಪಾದಕರು. ಒಂದೇ ನಂಬಿಕೆ ಹೇರಲು ಪ್ರಯತ್ನಪಡುವವರು. ಹಿಂದೂ ಮೂಲಭೂತವಾದಿಗಳು ನಿಜವಾದ ಉಗ್ರರು’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.