ADVERTISEMENT

ಮುದ್ದುಬೀರನಹುಂಡಿ: ಕಾರ್ಮಿಕರೇ ಗ್ರಾಮದ ಹೆಮ್ಮೆ

ತಿ.ನರಸೀಪುರ ವ್ಯಾಪ್ತಿಯ ಈ ಗ್ರಾಮದಲ್ಲಿ ಎಲ್ಲ ವೃತ್ತಿಯ ಕಾರ್ಮಿಕರೂ ಇರುವುದು ವಿಶೇಷ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:30 IST
Last Updated 25 ಏಪ್ರಿಲ್ 2019, 20:30 IST
ಮುದ್ದುಬೀರನಹುಂಡಿ ಗ್ರಾಮದ ಶಾಲೆ
ಮುದ್ದುಬೀರನಹುಂಡಿ ಗ್ರಾಮದ ಶಾಲೆ   

ತಿ.ನರಸೀಪುರ: ಪಟ್ಟಣದ ಪುರಸಭಾ ವ್ಯಾಪ್ತಿಗೆ ಸೇರಿರುವ ಮುದ್ದುಬೀರನಹುಂಡಿ ಗ್ರಾಮ ತನ್ನದೇ ಆದ ವಿಶೇಷಗಳೊಂದಿಗೆ ಇತರ ಗ್ರಾಮಗಳಿಗೆ ಮಾದರಿಯಾಗಿದೆ.

ಯಾರಾದರೂ ಮನೆ ಕಟ್ಟಲು ಹೊರಟರೆ ಅವರಿಗೆ ಬೇಕಾದ ಎಲ್ಲಾ ವೃತ್ತಿಯ ಕಾರ್ಮಿಕರು ಇಲ್ಲಿ ಸಿಗುತ್ತಾರೆ. ಇಲ್ಲಿನ ಕಾರ್ಮಿಕರಿಗೆ ಉತ್ತಮ ಬೇಡಿಕೆಯೂ ಇದೆ. ಇದು ಈ ಊರಿನ ಹೆಮ್ಮೆಯ ವಿಚಾರ.

ಈ ಹಿಂದೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ಗ್ರಾಮ ಎರಡು ವರ್ಷಗಳಿಂದ ಪುರಸಭಾ ವ್ಯಾಪ್ತಿಗೆ ಸೇರಿದೆ. ಈ ಊರಿಗೆ ಬಸ್ ವ್ಯವಸ್ಥೆ ಇಲ್ಲ. ಹಿಂದೆ ಊರಿನ ಜನ ಸೈಕಲ್‌ಗಳಲ್ಲಿ ಅಥವಾ ನಡೆದುಕೊಂಡು ಪಟ್ಟಣಕ್ಕೆ ಬರುತ್ತಿದ್ದರು. ಈಗಲೂ ಬಸ್ ಸೌಲಭ್ಯವಿಲ್ಲ. ಆದರೆ, ರಸ್ತೆಗಳನ್ನು ಅಭಿವೃದ್ಧಿ ಮಾಡಿರುವುದರಿಂದ ಜನರ ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಇನ್ನೂ ಹಲವರು ಸೈಕಲ್ ತುಳಿದೇ ಪಟ್ಟಣಕ್ಕೆ ಬರುತ್ತಾರೆ.

ADVERTISEMENT

ಗ್ರಾಮದಲ್ಲಿ ಸುಮಾರು 250 ಕುಟುಂಬಗಳಿವೆ. ಅನೇಕರು ಕೃಷಿ ಜೊತೆಗೆ ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಮನೆ ಕಟ್ಟಲು ಪಾಯ ತೆಗೆಯುವುದರಿಂದ ಹಿಡಿದು ಪೇಂಟರ್‌ ವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುವ ಕಾರ್ಮಿಕರು ಈ ಗ್ರಾಮದಲ್ಲಿ ಲಭ್ಯ.

‘ನಮ್ಮ ಗ್ರಾಮದಲ್ಲಿ ಬಹುತೇಕರು ಶ್ರಮಜೀವಿಗಳು. ಯಾರೂ ಸುಮ್ಮನೆ ಕೂರುವುದಿಲ್ಲ. ಕೃಷಿಯ ಜತೆಗೆ ಬೇರೆ ವೃತ್ತಿಗಳಲ್ಲೂ ತೊಡಗಿ ದುಡಿಮೆಗೆ ಹೆಚ್ಚು ಒತ್ತು ನೀಡಿದ್ದಾರೆ. ಇದು ನಿಜಕ್ಕೂ ನಮ್ಮ ಹೆಮ್ಮೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಪುಟ್ಟನಂಜೇಗೌಡ.

ಸುಮಾರು 50 ರಿಂದ 60 ಮಂದಿ ಪೇಂಟರ್‌ ಇದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾರೆ ಕೆಲಸ ಕಾರ್ಮಿಕರು ಸಿಗುತ್ತಾರೆ. ಇದಲ್ಲದೇ, ಮೋಟಾರ್ ರಿವೈಡಿಂಗ್, ಪ್ಲಂಬಿಂಗ್, ಬಾರ್ ಬೈಂಡಿಂಗ್ (ಕಬ್ಬಿಣ ಕಟ್ಟುವುದು), ಎಲೆಕ್ಟ್ರಿಕಲ್, ಟೈಲ್ಸ್ ಅಳವಡಿಕೆ ಮಾಡುವ ಕಾರ್ಮಿಕರು ಇಲ್ಲಿದ್ದಾರೆ. ಕೆಲವರು ಪಟ್ಟಣದ ಅಂಗಡಿಗಳಲ್ಲೂ ದುಡಿಯುತ್ತಿದ್ದಾರೆ. ಜತೆಗೆ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ.

ಹಲವರು ಬೆಳಿಗ್ಗೆ ಎದ್ದು ಹಾಲು ಕರೆದು ಪಟ್ಟಣದ ಮನೆ ಮನೆಗೆ ಹಂಚುತ್ತಾರೆ. ಬಳಿಕ ತಮ್ಮ ಇತರೆ ಕೆಲಸಕ್ಕೆಂದು ಪಟ್ಟಣಕ್ಕೆ ಹೊರಡುತ್ತಾರೆ.

‘ನಮ್ಮ ತಂದೆಯವರು ಮೊದಲು ಪೇಂಟಿಂಗ್‌ ಕೆಲಸ ಮಾಡುತ್ತಿದ್ದರು. ನಂತರ ಅನೇಕರು ಈ ಕೆಲಸ ಕಲಿತು ಪಟ್ಟಣ ಮಾತ್ರವಲ್ಲದೇ ನಗರ ಪ್ರದೇಶಗಳಿಗೂ ಹೋಗಿ ಕಾಯಕದಲ್ಲಿ ತೊಡಗಿದ್ದಾರೆ’ ಎಂದು ಹೇಳುತ್ತಾರೆ ಪೇಂಟರ್ ನಂಜೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.