
ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯಲ್ಲಿ ‘ಭ್ರಮರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ’ದ ಅಂಗವಾಗಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಜ.22ರಿಂದ 31ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಪ್ರಚಾರಸಾಮಗ್ರಿ (ಪೋಸ್ಟರ್)ಯನ್ನು ತಿ.ನರಸೀಪುರ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬುಧವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
‘ಇತಿಹಾಸ ಪ್ರಸಿದ್ಧ ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪ್ರವಾಸಿಗರು ಹಾಗೂ ಯಾತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅದರಲ್ಲೂ ಜಾತ್ರೆಯಲ್ಲಿ ಭಕ್ತರ ಪ್ರಮಾಣ ಜಾಸ್ತಿ ಇರುತ್ತದೆ. ವಿಜೃಂಭಣೆಯಿಂದ ಜರುಗುವ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಜ.28ರಂದು ಭ್ರಹ್ಮರಥೋತ್ಸವ, 31ರಂದು ತೆಪ್ಪೋತ್ಸವ ಹಾಗೂ ಫೆ.4ರಂದು ಗಿರಿಪ್ರದಕ್ಷಿಣೆ ಜರುಗಲಿದೆ. ಫೆ.6ರಂದು ಮಹಾಭಿಷೇಕದೊಂದಿಗೆ ಜಾತ್ರೆಯು ಸಂಪನ್ನಗೊಳ್ಳಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ. ಸಿಇಒ ಎಸ್.ಯುಕೇಶ್‌ಕುಮಾರ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ತಲಕಾಡು ವೈದ್ಯನಾಥೇಶ್ವರ ಸಮೂಹ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಲೋಕೇಶ್, ಮಾದೇಶ್, ಶಾಂತರಾಜು ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.