ADVERTISEMENT

ಮಿಶ್ರ ಬೇಸಾಯದಿಂದ ಆರ್ಥಿಕ ಬಲ

ವಾಣಿಜ್ಯ ಬೆಳೆ, ಕುಕ್ಕುಟೋದ್ಯಮದಿಂದ ಯಶಸ್ಸು ಗಳಿಸಿದ ಮಹದೇವ್

ಎಚ್.ಎಸ್.ಸಚ್ಚಿತ್
Published 22 ಮೇ 2019, 19:56 IST
Last Updated 22 ಮೇ 2019, 19:56 IST
ಕೋಳಿ ಗೊಬ್ಬರ ಬಳಸಿ ಬೆಳೆದ ಬಾಳೆ ತೋಟ
ಕೋಳಿ ಗೊಬ್ಬರ ಬಳಸಿ ಬೆಳೆದ ಬಾಳೆ ತೋಟ   

ಹುಣಸೂರು: ಸರ್ಕಾರಿ ನೌಕರಿಗೆ ಹೋಗುವ ಎಲ್ಲಾ ಅರ್ಹತೆ ಇದ್ದರೂ ಕೃಷಿ ಕಾಯಕವನ್ನೇ ಅವಲಂಬಿಸಿದ ಪದವೀಧರ ಗೌರಿಪುರ ಮಹದೇವ್ ಅವರ ಸಾಧನೆ ಗ್ರಾಮದ ಯುವಕರಿಗೆ ಮಾದರಿಯಾಗಿದೆ.

15 ವರ್ಷಗಳ ಹಿಂದೆ ಪದವೀಧರರಾಗಿ ಹೊರ ಬಂದ ಇವರು, ಇತರ ಯುವಕರಂತೆ ಅಂಕಪಟ್ಟಿ ಹಿಡಿದುಕೊಂಡು ಉದ್ಯೋಗಕ್ಕೆ ಅಲೆಯಲಿಲ್ಲ. ಕೃಷಿಯನ್ನು ನೆಚ್ಚಿಕೊಂಡು ಗ್ರಾಮದಲ್ಲೇ ನೆಲೆಸಿದರು. ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಮಿಶ್ರ ಬೇಸಾಯದಿಂದ ಯಶಸ್ಸು ಸಾಧಿಸಿ ಆರ್ಥಿಕವಾಗಿ ಸಬಲರಾಗಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಜತೆಗೆ ಕೋಳಿ ಸಾಕಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಇವರ ಫಾರಂನಲ್ಲಿ ಎಂಟು ಸಾವಿರ ಕೋಳಿಗಳಿವೆ. ಕಳೆದ ಹತ್ತು ವರ್ಷಗಳಿಂದ ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ.

ADVERTISEMENT

ಆರು ಬ್ಯಾಚ್‌ಗಳಲ್ಲಿ ಕೋಳಿ ಸಾಕಣಿಕೆ ನಡೆಸುತ್ತಿರುವ ಇವರು ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೃಷಿಯೊಂದಿಗೆ ಕೋಳಿ ಸಾಕಾಣಿಕೆಯಿಂದ ವಾರ್ಷಿಕ ₹ 5 ಲಕ್ಷ ಆಸುಪಾಸು ಸಂಪಾದನೆ ಆಗುತ್ತಿದೆ ಎನ್ನುತ್ತಾರೆ.

ಕೋಳಿ ಸಾಕಣಿಕೆಗೆ ಪ್ರತಿ ಬ್ಯಾಚ್‌ಗೂ ₹ 10 ರಿಂದ 15 ಸಾವಿರ ಖರ್ಚು ಬರಲಿದ್ದು, ಈ ಖರ್ಚನ್ನು ಕೊಳಿ ಗೊಬ್ಬರ ಮಾರಾಟದಿಂದ ತುಂಬಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಬಾಳೆ ತೋಟಕ್ಕೆ ಕೋಳಿ ಗೊಬ್ಬರ ಬಳಸುತ್ತಿದ್ದಾರೆ. 1 ಗುಂಟೆಯಲ್ಲಿ ಕನಕಾಂಬರ ಹೂ ಬೆಳೆದಿದ್ದು, ನಿತ್ಯ 2 ರಿಂದ 3 ಕೆ.ಜಿ. ಹೂ ಮೈಸೂರು ಮಾರುಕಟ್ಟೆಗೆ ಕಳುಹಿಸಿ ₹ 750 ರಿಂದ 1000 ಸಂಪಾದಿಸುತ್ತಿದ್ದಾರೆ.

ಮಿಶ್ರ ಬೇಸಾಯ: ಮಹದೇವ್‌ ಮಿಶ್ರ ಬೇಸಾಯದಲ್ಲಿ ಅಪಾರ ನಂಬಿಕೆ ಹೊಂದಿದ್ದು, ಇರುವ ಭೂಮಿಯಲ್ಲೇ ಬಾಳೆ, ಮೆಣಸು, ಅಡಿಕೆ, ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಮಿಶ್ರ ಬೇಸಾಯ ಪದ್ಧತಿಯಿಂದ ರೈತ ಸಾಲದ ಹೊರೆಯಿಂದ ಮುಕ್ತನಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮಾರುಕಟ್ಟೆಯಲ್ಲಿ ಒಂದು ಬೆಳೆಗೆ ಬೆಲೆ ಕುಸಿದರೂ ಮತ್ತೊಂದು ಬೆಳೆಯಿಂದ ಲಾಭ ಪಡೆಯಬಹುದು. ನೀರಾವರಿ ವ್ಯವಸ್ಥೆ ಹೊಂದಿರುವ ರೈತ ಮಿಶ್ರ ಬೇಸಾಯಕ್ಕೆ ಒತ್ತು ನೀಡುವುದು ಒಳಿತು ಎನ್ನುವರು.

ಎಂಟು ವರ್ಷಗಳ ಹಿಂದೆ ಬರ ಪರಿಸ್ಥಿತಿಯಿಂದ ಮಹದೇವ್‌ ಅವರು ಅಡಿಕೆ ಮರಗಳನ್ನು ಕತ್ತರಿಸಿ ಹಾಕಿದ್ದರು. ಹೀಗಿದ್ದರೂ ಕಳೆದ ಸಾಲಿನಲ್ಲಿ ಮತ್ತೆ ಅಡಿಕೆ ಸಸಿ ನಾಟಿ ಮಾಡಿ ತೋಟ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಕೃಷಿಯಿಂದ ಯಾರಿಗೂ ನಷ್ಟ ಇಲ್ಲ. ನಾವೇ ಮಾಡಿಕೊಳ್ಳುವ ತಪ್ಪುಗಳಿಂದಾಗಿ ಸಾಲದ ಹೊರೆ ಹೆಚ್ಚಾಗಿ ಅತಂತ್ರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ರೈತ ಎಚ್ಚರಿಕೆಯಿಂದ ತನ್ನ ಸಂಪಾದನೆಗೆ ತಕ್ಕಷ್ಟು ಖರ್ಚು ಮಾಡಿದಲ್ಲಿ ಸಾಲವೂ ಇರುವುದಿಲ್ಲ’ ಎಂಬುದು ಮಹದೇವ್‌ ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.