ADVERTISEMENT

ಕುಖ್ಯಾತ ಕೊಲೆ ಆರೋಪಿ ಬಂಧನ

4 ಕೊಲೆ, ಒಂದು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:31 IST
Last Updated 25 ಏಪ್ರಿಲ್ 2019, 20:31 IST
.
.   

ಮೈಸೂರು: ನಗರದಲ್ಲಿ ನಡೆದ 4 ಕೊಲೆ ಪ್ರಕರಣಗಳು ಹಾಗೂ 1 ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಅತೀಕ್ ಅಹಮ್ಮದ್ ಷರೀಫ್ ಅಲಿಯಾಸ್ ಟಿಂಬರ್ ಅತೀಕ್‌ (39)ನನ್ನು ಬರೋಬ್ಬರಿ 5 ವರ್ಷಗಳ ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತೀಕ್‌ನನ್ನು ಬಂಧಿಸಲು ನಗರದ ಪೊಲೀಸರು ಹರಸಾಹಸಪಟ್ಟಿದ್ದರು. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಪ್ರತಿಬಾರಿಯೂ ಈತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಆದರೆ, ಈ ಬಾರಿ ನಗರ ಅಪರಾಧ ವಿಭಾಗ ಹಾಗೂ ಕುವೆಂಪುನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.

ಈತನ ಮೇಲೆ ನಗರದಲ್ಲಿ ಈವರೆಗೆ ನಡೆದ ಮತೀಯ ಹಿನ್ನೆಲೆಯ ಗಂಭೀರ ಕೊಲೆ ಪ್ರಕರಣಗಳು ಇವೆ. ಈತ ದ್ವೇಷ ಮತ್ತು ಮತೀಯ ಕಾರಣಕ್ಕೆ ಕೊಲೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈತನ ಬಂಧನವು ನಗರದಲ್ಲಿ ಈ ಹಿಂದೆ ನಡೆದ ಅನೇಕ ಅಪರಾಧ ಪ್ರಕರಣಗಳ ತನಿಖೆಗೆ ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.‌

ADVERTISEMENT

ಈತನ ಮೇಲಿರುವ ಆರೋಪಗಳೇನು?: ನಗರದ ರಾಜೀವ್‌ನಗರದಲ್ಲಿ ಸಲೂನ್ ಅಂಗಡಿ ನಡೆಸುತ್ತಿದ್ದ ಶಶಿಕುಮಾರ್ ಎಂಬಾತನನ್ನು 2008ರಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ. ನಂತರ, 2009ರ ಜೂನ್ 9ರಂದು ಫೈಲೈಟ್‌ ವೃತ್ತದ ಬಳಿ ರಮೇಶ್, ಕಳೆದ ನವೆಂಬರ್‌ನಲ್ಲಿ ಅಶೋಕ ರಸ್ತೆಯಲ್ಲಿ ರಮೇಶ್‌ ಎಂಬಾ ತನನ್ನೂ ಕೊಲೆ ಮಾಡಿದ್ದ. ಜತೆಗೆ, 2016ರಲ್ಲಿ ನಗರವನ್ನು ಬೆಚ್ಚಿಬೀಳಿಸಿದ್ದ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ. 2009ರಲ್ಲಿ ಗಿರಿಧರ್ ಎಂಬುವವರ ಕೊಲೆಗೂ ಯತ್ನಿಸಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಸಿಸಿಬಿ ಎಸಿಪಿ ವಿ.ಮರಿಯಪ್ಪ, ಕುವೆಂಪುನಗರದ ಇನ್‌ಸ್ಪೆಕ್ಟರ್ ಜಿ.ಸಿ.ರಾಜು ಹಾಗೂ ಸಿಬ್ಬಂದಿ ನಿರಂಜನ್, ರಾಜು ಇದ್ದರು. ಇವರಿಗೆ ಡಿಸಿಪಿ ಎಂ.ಮುತ್ತುರಾಜ್ ಮಾರ್ಗದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.