ADVERTISEMENT

ಪ್ರತ್ಯೇಕ ಪ್ರಕರಣ: ಇಬ್ಬರ ಹತ್ಯೆ

ಹಾಡುಹಗಲೇ ಗೃಹಿಣಿ ಹತ್ಯೆಗೈದು ಚಿನ್ನದ ಸರ ದೋಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:30 IST
Last Updated 4 ಫೆಬ್ರುವರಿ 2020, 9:30 IST
ಕಲಾವತಿ(40)
ಕಲಾವತಿ(40)   

ಮೈಸೂರು /ಪಿರಿಯಾಪಟ್ಟಣ: ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಪಿರಿಯಾಪಟ್ಟಣದ ಕಲಾವತಿ (40) ಹಾಗೂ ಕಡಕೊಳದ ಕೆ.ಎಂ.ದೊಡ್ಡಿ ಗ್ರಾಮದ ನಿವಾಸಿ ಸೋಮಣ್ಣ (45) ಕೊಲೆಯಾದವರು.

ಪಿರಿಯಾಪಟ್ಟಣದ ಕೋಟೆ ಬ್ರಾಹ್ಮಣರ ಬೀದಿಯಲ್ಲಿ ವಾಸವಿದ್ದ ಕೆ.ಪಿ.ಇಂದ್ರೇಶ್‌ ಅವರ ಪತ್ನಿ ಕಲಾವತಿ ಅವರನ್ನು ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮಾತ್ರ ಅಪಹರಿಸಿದ್ದು, ಮನೆಯ ಬೀರು ಸೇರಿದಂತೆ ಇತರೆಡೆ ಇಟ್ಟಿದ್ದ ವಸ್ತುಗಳೆಲ್ಲ ಹಾಗೆಯೇ ಇವೆ.

ಪತಿ ಇಂದ್ರೇಶ್ ಅವರು ಬೆಳಿಗ್ಗೆ 7 ಗಂಟೆಗೆ ಅಡುಗೆ ಎಣ್ಣೆ ವ್ಯಾಪಾರಕ್ಕೆಂದು ಎಂದಿನಂತೆ ಹೊರ ಹೋಗಿದ್ದರು. ಇಬ್ಬರು ಮಕ್ಕಳು ಬೆಳಿಗ್ಗೆ 9 ಗಂಟೆಗೆ ಶಾಲೆಗೆ ತೆರಳಿದರು. 10.30ರವರೆಗೂ ಕಲಾವತಿ ಸಂಬಂಧಿಕರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. 11.30ಕ್ಕೆ ಪತಿ ಮನೆಗೆ ಬರುವಷ್ಟರಲ್ಲಿ ಇವರು ಕೊಲೆಯಾಗಿದ್ದರು.

ADVERTISEMENT

ದುಷ್ಕರ್ಮಿಗಳು ಮನೆಯ ಹಿಂಬಾಗಿಲ ಮೂಲಕ ಬಂದಿದ್ದಾರೆ. ಇಲ್ಲಿ ಬಾಗಿಲನ್ನು ಒಡೆದಿಲ್ಲ. ಮುಂಬಾಗಿಲಿಗೆ ಒಳಗಿಂದ ಡೋರ್‌ ಲಾಕ್‌ ಹಾಕಲಾಗಿತ್ತು. ಬೇರೊಂದು ಕೀ ಬಳಸಿ ಪತಿ ಬಾಗಿಲು ತೆರೆದಾಗ ರಕ್ತದ ಮಡುವಿನಲ್ಲಿ ಕಲಾವತಿ ಬಿದ್ದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕೊಲೆಗೆ ದರೋಡೆಕೋರರೇ ಕಾರಣ ಎಂದು ಆರೋಪಿಸಿದ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಈಚೆಗೆ 5 ಮನೆಗಳವು ಪ್ರಕರಣಗಳು ನಡೆದರೂ, ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿಲ್ಲ. ಗಸ್ತು ವ್ಯವಸ್ಥೆಯನ್ನು ಬಲಪಡಿಸಿಲ್ಲ ಎಂದು ದೂರಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಕೆಲಕಾಲ ಸಾರ್ವಜನಿಕರು ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು.

ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್‌ಪಿ ಸುಂದರ್‌ರಾಜ್ ಮತ್ತು ಸಿಪಿಐ ಪ್ರದೀಪ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬರಬೇಕು ಎಂದು ಪಟ್ಟು ಹಿಡಿದರು. ಬಳಿಕ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡಕೊಳದಲ್ಲಿ ಕೂಲಿ ಕಾರ್ಮಿಕ ಕೊಲೆ

ಮೈಸೂರು ತಾಲ್ಲೂಕಿನ ಕೆ.ಎಂ.ಹುಂಡಿ ನಿವಾಸಿ ಸೋಮಣ್ಣ (45) ಅವರನ್ನು ದುಷ್ಕರ್ಮಿಗಳು ಕಡಕೊಳದಲ್ಲಿ ಕೊಲೆ ಮಾಡಿದ್ದಾರೆ.

ಇವರು ಪತ್ನಿ ಹಾಗೂ ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇವರ ಮೃತದೇಹ ಅಂಗಡಿಯೊಂದರ ಬಳಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ದುಷ್ಕರ್ಮಿಗಳು ತಲೆ ಮತ್ತು ಕಿವಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.