ADVERTISEMENT

ಪರಂಪರೆ ಅರಿವು ನೀಡಿದ ‘ಮ್ಯೂಸಿಯಂ ಬಂಡಿ’

ಪುರಾತತ್ವ ಇಲಾಖೆ ಆಯೋಜನೆ l 130ಕ್ಕೂ ಹೆಚ್ಚು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:14 IST
Last Updated 18 ಮೇ 2025, 14:14 IST
<div class="paragraphs"><p>ಮೈಸೂರಿನ ‘ವೆಲ್ಲಿಂಗ್ಟನ್ ಮ್ಯೂಸಿಯಂ’ನಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಮ್ಯೂಸಿಯಂ ಆನ್‌ ವ್ಹೀಲ್ಸ್‌’ ಕಾರ್ಯಕ್ರಮಕ್ಕೆ ಆಯುಕ್ತ ಎ. ದೇವರಾಜು ಅವರು ಚಾಲನೆ ನೀಡಿದರು. </p></div>

ಮೈಸೂರಿನ ‘ವೆಲ್ಲಿಂಗ್ಟನ್ ಮ್ಯೂಸಿಯಂ’ನಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಮ್ಯೂಸಿಯಂ ಆನ್‌ ವ್ಹೀಲ್ಸ್‌’ ಕಾರ್ಯಕ್ರಮಕ್ಕೆ ಆಯುಕ್ತ ಎ. ದೇವರಾಜು ಅವರು ಚಾಲನೆ ನೀಡಿದರು.

   

ಮೈಸೂರು: ನಗರವಲ್ಲದೇ ಮಂಡ್ಯ, ಹಾಸನ ಸೇರಿದಂತೆ ನೆರೆ ಜಿಲ್ಲೆಗಳಿಂದ ಬಂದಿದ್ದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾಗರಿಕರು ನಗರದ ವೈವಿಧ್ಯಮಯ ವಸ್ತುಸಂಗ್ರಹಾಲಯಗಳನ್ನು ನೋಡಿ ಅಚ್ಚರಿಪಟ್ಟರು.

ಇಲ್ಲಿನ ವೆಲ್ಲಿಂಗ್ಟನ್ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಭಾನುವಾರ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಪ್ರಯುಕ್ತ ಆಯೋಜಿಸಿದ್ದ ‘ಮ್ಯೂಸಿಯಂ ಆನ್ ವ್ಹೀಲ್ಸ್’ಗೆ ಆಯುಕ್ತ ಎ.ದೇವರಾಜು ಚಾಲನೆ ನೀಡಿದರು.

ADVERTISEMENT

ಎರಡು ಬಸ್‌ಗಳಲ್ಲಿ ‘ಮಾರ್ಗದರ್ಶಕ’ರೊಂದಿಗೆ ಪ್ರಯಾಣಿಸಿದ ನಾಗರಿಕರು ವಸ್ತುಸಂಗ್ರಹಾಲಯಗಳಲ್ಲಿನ ಐತಿಹಾಸಿಕ ವಸ್ತುಗಳನ್ನು ನೋಡಿ ಪುಳಕಗೊಂಡರು. ತಿಳಿವನ್ನೂ ಹೆಚ್ಚಿಸಿಕೊಂಡರು.

ಮೊದಲಿಗೆ ಕಿ.ಶ.1799ರಲ್ಲಿ ಆರ್ಥರ್ ವೆಲ್ಲೆಸ್ಲಿಗಾಗಿ ನಿರ್ಮಿಸಿದ ‘ವೆಲ್ಲಿಂಗ್ಟನ್‌’ ಬಂಗಲೆಯ ಸೌಂದರ್ಯವನ್ನು ಕಣ್ತುಂಬಿಕೊಂಡ ನಾಗರಿಕರು, ‘ಕಲಾ ಗ್ಯಾಲರಿ’ಯಲ್ಲಿದ್ದ ‘ಚಿಕಣಿ’, ‘ಗಂಜೀಫಾ’, ‘ಮೈಸೂರು’– ‘ತಂಜಾವೂರು’ ಚಿತ್ರಕಲೆ ಸೇರಿದಂತೆ ವಿವಿಧ ಶೈಲಿಗಳ ಕಲಾಕೃತಿಗಳನ್ನು ನೋಡಿ ಸಂತೋಷಗೊಂಡರು. 

ನಂತರ ಸಿದ್ಧಾರ್ಥನಗರದಲ್ಲಿರುವ ‌‌ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿ (ಆರ್‌ಎಂಎನ್‌ಎಚ್‌) ಜೀವವೈವಿಧ್ಯ, ವಿಜ್ಞಾನ, ಜೀವವಿಕಾಸದ ಮಾಹಿತಿಗಳನ್ನು ಅರಿತರು. ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ದೇಶದ ರೈಲ್ವೆ ವಿಕಾಸವನ್ನು ಕಣ್ತುಂಬಿಕೊಂಡರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ‘ನಗುವನಹಳ್ಳಿ’ಯಲ್ಲಿ ಸ್ಥಾಪಿತವಾದ ‘ಪಯಣ’ ಕಾರು ವಸ್ತುಸಂಗ್ರಹಾಲಯದಲ್ಲಿ ಹಳೆಯ ವಿಂಟೇಜ್‌ ಕಾರು ವೀಕ್ಷಿಸಿ ಸಂತಸಪಟ್ಟರು.  

ಪರಂಪರೆ ತೋರುವ ಶಾಲೆಗಳು: ಚಾಲನೆ ನೀಡಿದ ಆಯುಕ್ತ ಎ.ದೇವರಾಜು ಮಾತನಾಡಿ, ‘ವಸ್ತು ಸಂಗ್ರಹಾಲಯಗಳು ನಮ್ಮ ಪರಂಪರೆ ಹಾಗೂ ಸಂಸ್ಕೃತಿ ತೋರುವ ಶಾಲೆಗಳು. ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ಉಳಿಸುವ ಕೆಲಸ ಮಾಡುತ್ತಿದೆ’ ಎಂದರು.

‘ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ’ ಈ ಬಾರಿಯ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಧ್ಯೇಯವಾಗಿದ್ದು, ವಿದ್ಯಾರ್ಥಿಗಳು, ಯುವಕರಲ್ಲಿ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ 8 ವರ್ಷದಿಂದ ಪ್ರತಿ ವರ್ಷವೂ ಮ್ಯೂಸಿಯಂ ಆನ್‌ ವ್ಹೀಲ್ಸ್‌ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ಇಲಾಖೆಯ ಉಪ ನಿರ್ದೇಶಕಿ ಸಿ.ಎನ್‌.ಮಂಜುಳಾ, ಎಂಜಿನಿಯರ್ ಟಿ.ತಾರಕೇಶ, ಸಹಾಯಕ ನಿರ್ದೇಶಕ ಸುನೀಲ್‌ ಕುಮಾರ್‌, ಸಿಬ್ಬಂದಿ ಡಿ.ಮಂಜುನಾಥ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.