
ಮೈಸೂರು: ‘ವೃತ್ತಿನಿರತ ಸಂಗೀತ ಕಲಾವಿದರನ್ನು ಶಾಲಾ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರಾಗಿ ನೇಮಿಸಬೇಕು’ ಎಂದು ಸಂಗೀತ ವಿದ್ವಾಂಸ ಪ್ರೊ.ಸಿ.ಎ.ಶ್ರೀಧರ ಒತ್ತಾಯಿಸಿದರು.
ಕರ್ನಾಟಕ ಗಾನಕಲಾ ಪರಿಷತ್ತು ನಗರದಲ್ಲಿ ಬುಧವಾರದಿಂದ ಆಯೋಜಿಸಿರುವ ರಾಜ್ಯ ಸಂಗೀತ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಕರ್ನಾಟಕ ಶಾಸ್ತ್ರೀಯ ಸಂಗೀತ ಬೆಳವಣಿಗೆಗೆ ಸರ್ಕಾರ ಪ್ರಾಧಿಕಾರ ರಚಿಸಬೇಕು’ ಎಂದು ಪ್ರತಿಪಾದಿಸಿದರು.
‘ಮುಜರಾಯಿ ಇಲಾಖೆಯ ದೇಗುಲಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸಂಗೀತ ಕಛೇರಿ ಆಯೋಜಿಸಬೇಕು. ಕಲಾವಿದರ ಗೌರವಧನ ಹೆಚ್ಚಿಸಬೇಕು. ಆಕಾಶವಾಣಿಯಲ್ಲಿ ನಿಲಯ ಕಲಾವಿದರ ನೇಮಕ ಮಾಡಬೇಕು. ಸಾಂಪ್ರದಾಯಿಕ ಮೈಸೂರು ವೀಣೆ, ತಂಬೂರಿ ತಯಾರಕರನ್ನು ಪ್ರೋತ್ಸಾಹಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಸರ್ಕಾರದ ಸಾಂಸ್ಕೃತಿಕ ಉತ್ಸವಗಳಲ್ಲಿ ಹೊರರಾಜ್ಯ ಹಾಗೂ ನಾಡಿನ ಸಂಗೀತಗಾರರ ನಡುವೆ ತಾರತಮ್ಯ ಮಾಡದೇ ಸಮಾನ ವೇದಿಕೆ ನೀಡಬೇಕು’ ಎಂದರು.
‘ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿಲ್ಲ’
ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಆರ್.ಕೆ.ಪದ್ಮನಾಭ ‘ಶಾಸ್ತ್ರೀಯ ಸಂಗೀತ ಕ್ಷೇತ್ರದ ಒಬ್ಬರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರವೊಂದು ಇದೆಯೊ ಇಲ್ಲವೊ ಎಂಬುದೇ ಆಯ್ಕೆ ಸಮಿತಿಗೆ ಗೊತ್ತಿಲ್ಲ’ ಎಂದರು. ‘ಪರಿಷತ್ತಿನ ಸಮ್ಮೇಳನಕ್ಕೆ ಅನುದಾನ ನೀಡಬೇಕು’ ಎಂದೂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.