ADVERTISEMENT

ಮಾಂಸಕ್ಕೆ ಹೆಚ್ಚಿದ ಬೇಡಿಕೆ

ಮತ್ತಷ್ಟು ದುಬಾರಿಯಾದ ತರಕಾರಿ ಧಾರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:14 IST
Last Updated 9 ಏಪ್ರಿಲ್ 2019, 13:14 IST

ಮೈಸೂರು: ಯುಗಾದಿಯ ನಂತರ ವರ್ಷದ ತೊಡಕಿನ ಆಚರಣೆಗೆ ನಗರದಲ್ಲಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಸುಮಾರು ನೂರಕ್ಕೂ ಅಧಿಕ ಮಂದಿ ಸಾಲುಗಟ್ಟಿ ನಿಂತು ಮಾಂಸ ಖರೀದಿಸುತ್ತಿದ್ದ ದೃಶ್ಯಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಹೆಚ್ಚಿನ ಬೇಡಿಕೆಯ ಲಾಭ ಪಡೆದ ಕೆಲವರು ದರ ಏರಿಸಿ ಲಾಭ ಮಾಡಿಕೊಂಡರು.

ಮಾಂಸದ ದರ ಒಂದೊಂದು ಕಡೆ ಒಂದೊಂದು ರೀತಿ ಇತ್ತು. ಸಾಮಾನ್ಯವಾಗಿ ‘ಗುಡ್ಡೆ ಮಾಂಸ’ ಬಹುತೇಕ ಕಡೆ ಕೆ.ಜಿಗೆ ₹ 450ಕ್ಕೆ ಮಾರಾಟವಾದರೆ, ಅಂಗಡಿಗಳಲ್ಲಿ ಕೆ.ಜಿ ಮಾಂಸ ₹ 480 ಇತ್ತು. ಕೆಲವೆಡೆ ದರದಲ್ಲಿ ವ್ಯತ್ಯಾಸ ಇತ್ತು.

ಸೋಮವಾರ ಬೇಡಿಕೆ ಕಡಿಮೆ ಇತ್ತು. ಭಾನುವಾರ ತಮ್ಮ ಬಂಧುಗಳ ಮನೆಗೆ ಹೋಗಿದ್ದವರು, ದೇವಸ್ಥಾನಗಳಿಗೆ ತೆರಳಿದ್ದವರು ಮಂಗಳವಾರ ವರ್ಷದ ತೊಡಕನ್ನು ಆಚರಿಸುತ್ತಾರೆ. ಹೀಗಾಗಿ, ಮಂಗಳವಾರವೂ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.

ADVERTISEMENT

ಕಳೆದೊಂದು ವಾರದಿಂದ ಗ್ರಾಮಾಂತರ ‍ಪ್ರದೇಶಗಳಲ್ಲಿ ಕುರಿ, ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ರೈತರು ಇದರಿಂದ ಅಲ್ಪ ಪ್ರಮಾಣದ ಲಾಭ ಗಳಿಸುವಂತಾಗಿದೆ.

ಒಂದೆಡೆ ಮಾಂಸಕ್ಕೆ ಬೇಡಿಕೆ ಹೆಚ್ಚಿ ದರ ಏರಿಕೆಯಾಗಿದ್ದರೆ, ಮತ್ತೊಂದಡೆ ತರಕಾರಿಗಳ ದರವೂ ಕಳೆದ ವಾರಕ್ಕಿಂತ ದುಬಾರಿಯಾಗಿದೆ. ಮಳೆ ಬೀಳದ ಕಾರಣ ತರಕಾರಿಗಳ ಇಳುವರಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಬೀನ್ಸ್‌ ಆವಕದ ಪ್ರಮಾಣದ ಒಂದು ದಿನಕ್ಕೆ 170 ಕ್ವಿಂಟಲ್‌ ಇದ್ದದ್ದು ಇದೀಗ 142 ಕ್ವಿಂಟಲ್‌ಗೆ ಕುಸಿದಿದೆ. ಇದರಿಂದ ಸಗಟು ಬೆಲೆಯು ಏಪ್ರಿಲ್ 2 ಮತ್ತು 3ರಂದು ಕೆ.ಜಿಗೆ ₹ 60ನ್ನು ತಲುಪಿತ್ತು. ಚಿಲ್ಲರೆ ಬೆಲೆ ₹ 100ರ ಗಡಿ ದಾಟಿತ್ತು. ಸದ್ಯ, ಸಗಟು ಬೆಲೆಯು ₹ 50 ಇದೆ.

ಇದೇ ರೀತಿ 42 ಕ್ವಿಂಟಲ್‌ನಿಂದ 35 ಕ್ವಿಂಟಲ್‌ಗೆ ದಪ್ಪಮೆಣಸಿನಕಾಯಿಯ ಆವಕದ ಪ್ರಮಾಣ ಕುಸಿದಿದ್ದು, ಇದರ ಸಗಟು ದರ ₹ 44ರಿಂದ ₹ 52ಕ್ಕೆ ಹೆಚ್ಚಿದೆ. ಏಪ್ರಿಲ್ 3ರಂದು ₹ 58 ತಲುಪಿತ್ತು. ಚಿಲ್ಲರೆ ದರ ₹ 80ರ ಆಸುಪಾಸಿನಲ್ಲಿದೆ.

ಕೋಳಿಮೊಟ್ಟೆ ದರ ಸ್ಥಿರ, ಕೋಳಿ ಮಾಂಸ ಕೊಂಚ ಏರಿಕೆ

ಈ ವಾರ ಕೋಳಿ ಮೊಟ್ಟೆ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರ ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.37 ‌ಇತ್ತು. ಅದು ಈಗ ₹ 3.47 ಆಗಿದೆ. ನಿರಂತರವಾದ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮೊಟ್ಟೆ ಉತ್ಪಾದಕರು ಕೊಂಚ ನಿರಾಳರಾಗುವಂತಾಗಿದೆ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 11; 15


ಬೀನ್ಸ್ ; 45; 50


ಕ್ಯಾರೆಟ್; 22; 25


ಎಲೆಕೋಸು; 13; 14


ದಪ್ಪಮೆಣಸಿನಕಾಯಿ; 44; 52


ಬದನೆ ; 20; 20


ನುಗ್ಗೆಕಾಯಿ; 12; 16


ಹಸಿಮೆಣಸಿನಕಾಯಿ; 40; 40


ಈರುಳ್ಳಿ; 09; 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.