ADVERTISEMENT

ಸದ್ದು ಮಾಡುತ್ತಿದೆ ಮೈಸೂರಿನ ವಿಮಾನ ನಿಲ್ದಾಣ

ಕೆ.ಓಂಕಾರ ಮೂರ್ತಿ
Published 13 ಡಿಸೆಂಬರ್ 2019, 19:45 IST
Last Updated 13 ಡಿಸೆಂಬರ್ 2019, 19:45 IST
ಮಂಡಕಳ್ಳಿ ವಿಮಾನ ನಿಲ್ದಾಣ
ಮಂಡಕಳ್ಳಿ ವಿಮಾನ ನಿಲ್ದಾಣ   

ಯಾವುದೇ ನಗರದ ಬೆಳವಣಿಗೆ ಅಲ್ಲಿನ ಮೂಲಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣ, ಪ್ರವಾಸೋದ್ಯಮ, ಉದ್ಯಮ, ರಿಯಲ್‌ ಎಸ್ಟೇಟ್‌, ವಹಿವಾಟು, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ಮಹತ್ವ ಸಿಕ್ಕಂತೆ ಆ ನಗರಿಗೊಂದು ಐಡೆಂಟಿಟಿ ಸಿಗುತ್ತದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳು ಕೂಡ ಮಹತ್ವದ ಪಾತ್ರ ವಹಿಸುತ್ತವೆ. ಅದಕ್ಕೊಂದು ಉದಾಹರಣೆ ಮೈಸೂರಿನ ವಿಮಾನ ನಿಲ್ದಾಣ.

ಒಂದೆರಡು ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಮಂಡಕಳ್ಳಿ ವಿಮಾನ ನಿಲ್ದಾಣ ಈಗ ಮೈಸೂರು ನಗರಿಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಪ್ರವಾಸೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರೂ ಸರಿಯಾಗಿ ವಿಮಾನಯಾನ ಸೌಲಭ್ಯ ಇಲ್ಲದಿರುವ ಕೊರತೆಯನ್ನು ಎದುರಿಸುತಿತ್ತು. ವಿಮಾನ ನಿಲ್ದಾಣ ಕಟ್ಟಡ ಹಾಗೂ ಇತರ ವ್ಯವಸ್ಥೆ ಇದ್ದರೂ ಹಲವು ವರ್ಷ ವಿಮಾನ ಸೇವೆಯೇ ಇರಲಿಲ್ಲ. ಆರಂಭವಾಗುತ್ತಿದ್ದ ಸಂಪರ್ಕ ಕೆಲವೇ ತಿಂಗಳಲ್ಲಿ ಸ್ಥಗಿತಗೊಂಡಿದ್ದೂ ಉಂಟು.

ADVERTISEMENT

ರಾಜ್ಯ ರಾಜ್ಯಧಾನಿ ಬೆಂಗಳೂರು ಸನಿಹವೆಂದೋ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮಾಡಿಕೊಂಡು ಒಂದೆರಡು ಗಂಟೆಗಳಲ್ಲಿ ಮೈಸೂರು ತಲುಪಬಹುದೆಂದೋ ಹಾಗಾಗಿರಬಹುದು. ಆದರೆ, ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆ ಮೈಸೂರು ವಿಮಾನ ನಿಲ್ದಾಣದ ದಿಕ್ಕು ಬದಲಾಯಿಸಿದೆ. ಉದ್ಯಮಿಗಳ ಸತತ ಒತ್ತಡ, ಸಂಸದ ಪ್ರತಾಪಸಿಂಹ ಅವರ ಪ್ರಯತ್ನ ಹಾಗೂ ವಿಮಾನ ನಿಲ್ದಾಣದ ಈಗಿನ ನಿರ್ದೇಶಕ ಆರ್‌.ಮಂಜುನಾಥ್‌ ಅವರ ಮುಂದಾಲೋಚನೆಯ ಫಲವಾಗಿ ಈ ವಿಮಾನ ನಿಲ್ದಾಣವೀಗ ಸದಾ ಬ್ಯುಸಿ. ಆರೇಳು ತಿಂಗಳಲ್ಲಿ ಈ ಬೆಳವಣಿಗೆ ಆಗಿದೆ. ವರ್ಷದ ಹಿಂದೆ ಚೆನ್ನೈಗೆ ಮಾತ್ರ ಸಂಪರ್ಕ ಇತ್ತು.

ಸದ್ಯ 12 ಟ್ರಿಪ್‌ಗಳಲ್ಲಿ ಆರು ವಿಮಾನಗಳು ಹಾರಾಟ ನಡೆಸುತ್ತಿವೆ. ಹೈದರಾಬಾದ್ ಮತ್ತು ಚೆನ್ನೈಗೆ ತಲಾ ಎರಡು ವಿಮಾನ, ಗೋವಾ, ಬೆಂಗಳೂರಿಗೆ ಒಂದೊಂದು ವಿಮಾನ ಸಂಪರ್ಕ ಕಲ್ಪಿಸುತ್ತಿವೆ. ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಲಭ್ಯವಾಗುತ್ತಿದೆ. ಪ್ರತಿ ವಿಮಾನ ಬಂದಿಳಿದಾಗ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯವೂ ಇದೆ. ಕೊಚ್ಚಿನ್‌ಗೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕಲಬುರ್ಗಿ, ಶಿರಡಿ, ತಿರುಪತಿ, ಬೆಳಗಾವಿ, ಮಂಗಳೂರಿಗೂ ಸಂಪರ್ಕ ಕಲ್ಪಿಸಲು ಪ್ರಯತ್ನಗಳು ನಡೆಯುತ್ತಿವೆ. ಮುಂಬೈ, ನವದೆಹಲಿ, ಕೊಯಮತ್ತೂರು, ತಿರುವನಂತಪುರಕ್ಕೆ ಸೇವೆ ಕಲ್ಪಿಸುವಂತೆ ಉದ್ಯಮಿಗಳು ಒತ್ತಡ ಹಾಕುತ್ತಿದ್ದಾರೆ.

‘ವಿಮಾನ ನಿಲ್ದಾಣವು ಮತ್ತಷ್ಟು ಅಭಿವೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಿಗಳಿಗೆ ಸಂ‍ಪರ್ಕ ಕಲ್ಪಿಸಲಾಗುತ್ತದೆ. ಈಗ ನಿಯಮಿತ ಸಂಪರ್ಕ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ವಾಣಿಜ್ಯ ವಹಿವಾಟಿಗೂ ನೆರವಾಗುತ್ತಿದೆ’ ಎಂದು ಹೇಳುತ್ತಾರೆ ಆರ್‌.ಮಂಜುನಾಥ್‌.

ವಿಮಾನ ನಿಲ್ದಾಣ ವಿಸ್ತರಣೆ ಜೊತೆಗೆ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಸಾಧ್ಯವಾದರೆ ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ, ಐಟಿ, ಬಿಟಿ ಕಂಪನಿಗಳಿಗೆ ಉತ್ತೇಜನ ದೊರೆಯಲಿದೆ ಎಂಬುದು ಅವರ ಅಭಿಪ್ರಾಯ.

ಜೊತೆಗೆ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೂ ಯೋಜನೆ ಸಿದ್ಧಗೊಂಡಿದೆ. ಅದಕ್ಕಾಗಿ ಕೇಂದ್ರ ಸರ್ಕಾರ 700 ಕೋಟಿ ರೂಪಾಯಿ ನೀಡುತ್ತಿದೆ. ಅಲ್ಲದೇ, 280 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ ನಿರ್ಮಿಸಿ ಅದರ ಮೇಲೆ ರನ್‌ವೇ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ಇರುವ ರನ್‌ವೇ ಉದ್ದ 1,740 ಮೀ. ಅದನ್ನು 2,750 ಮೀ.ಗೆ ವಿಸ್ತರಿಸಬೇಕಿದೆ.

‘ರನ್‌ವೇ ವಿಸ್ತರಣೆಗೊಂಡರೆ ದೊಡ್ಡ ವಿಮಾನಗಳು ಕೂಡ ಬಂದಿಳಿಯಬಹುದು. ಆಗ ಉದ್ಯೋಗಾವಕಾಶಗಳು ಹೆಚ್ಚುತ್ತದೆ. ಸಾಫ್ಟ್‌ವೇರ್‌ ಕಂಪನಿಗಳು ಬರಲಿದ್ದು, ಐಟಿ ಉದ್ಯಮವೂ ಬೆಳೆಯುತ್ತದೆ’ ಎಂಬ ಆಶಾವಾದ ಉದ್ಯಮಿಗಳದ್ದು.

ಯಾವುದೇ ನಗರದ ಬೆಳವಣಿಗೆಗೆ ಸಮರ್ಪಕ ಸಂಪರ್ಕ ವ್ಯವಸ್ಥೆಯೂ ಮುಖ್ಯ. ಈ ನಿಟ್ಟಿನಲ್ಲಿ ಅರಮನೆಗಳ ನಗರಿಗೆ ಉತ್ತಮ ಸಂಪರ್ಕ ಲಭ್ಯವಾಗುತ್ತಿದೆ. ವಿವಿಧ ನಗರಿಗಳಿಗೆ ರೈಲ್ವೆ ಸಂಪರ್ಕವೂ ಹೆಚ್ಚುತ್ತಿದೆ. ಜೊತೆಗೆ ಮೈಸೂರು–ಬೆಂಗಳೂರು ನಡುವೆ ದಶಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮೈಸೂರು ನಗರ ಮತ್ತಷ್ಟು ಪ್ರಗತಿ ಕಾಣುವುದು ನಿಚ್ಚಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.