ADVERTISEMENT

ತುಂತುರು ಮಳೆಯಲ್ಲಿ ಸ್ವಾತಂತ್ರ್ಯೋತ್ಸವ ವೈಭವ

ನಗರದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ; ಪಂಜಿನ ಕವಾಯತು ಮೈದಾನದಲ್ಲಿ ಉಕ್ಕಿಹರಿದ ದೇಶಪ್ರೇಮ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2018, 12:15 IST
Last Updated 15 ಆಗಸ್ಟ್ 2018, 12:15 IST
ಪಂಜಿನ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಥಸಂಚನದಲ್ಲಿ ಪಾಲ್ಗೊಂಡ ಪೊಲೀಸ್‌ ತಂಡ
ಪಂಜಿನ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಥಸಂಚನದಲ್ಲಿ ಪಾಲ್ಗೊಂಡ ಪೊಲೀಸ್‌ ತಂಡ   

ಮೈಸೂರು: ಏಕತೆಯ ಸಂದೇಶ ಸಾರಿದ ನೃತ್ಯರೂಪಕ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ, ನೋಡುಗರ ಎದೆಯಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಆಕರ್ಷಕ ಪಥಸಂಚಲನ, ನಡುನಡುವೆ ತುಂತುರು ಮಳೆಯ ಸಿಂಚನ...

ಜಿಲ್ಲಾಡಳಿತ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು.

ಸುಮಾರು ಎರಡು ಗಂಟೆಯ ಕಾರ್ಯಕ್ರಮ ಮೋಡ ಮುಸುಕಿದ ವಾತಾವರಣದಲ್ಲೇ ನಡೆಯಿತು. ಆಗಿಂದಾಗ್ಗೆ ಮಳೆ ಹನಿಯ ಸಿಂಚನವಾದರೂ ಸಮಾರಂಭಕ್ಕೆ ಅಡ್ಡಿಯಾಗಲಿಲ್ಲ. ತಣ್ಣನೆಯ ಗಾಳಿ ಸಂಭ್ರಮದ ಕಳೆಯನ್ನು ಹೆಚ್ಚಿಸಿತು.

ADVERTISEMENT

ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಪೊಲೀಸ್‌ ಬ್ಯಾಂಡ್‌ ತಂಡದವರು ರಾಷ್ಟ್ರಗೀತೆ ನುಡಿಸಿದರು. ಸಚಿವರು ಬಳಿಕ ತೆರೆದ ಜೀಪಿನಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.

ಆಕರ್ಷಕ ಪಥಸಂಚಲನ: ಕರ್ನಾಟಕ ರಾಜ್ಯ ಪೊಲೀಸ್‌ ಮತ್ತು ಸಶಸ್ತ್ರ ಮೀಸಲು ಪಡೆಯ ತಂಡಗಳು ಒಳಗೊಂಡಂತೆ ಒಟ್ಟು 30 ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.

ಕೆ.ಎ.ಆರ್‌.ಪಿ., ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ನಗರ ಪೊಲೀಸ್‌ ಪಡೆ, ರೈಲ್ವೆ ರಕ್ಷಣಾ ದಳ, ಕರ್ನಾಟಕ ಪೊಲೀಸ್‌ ಅಕಾಡೆಮಿ, ಗೃಹರಕ್ಷಕ ದಳ, ಮಹಿಳಾ ಪೊಲೀಸ್‌ ಪಡೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆಯ ತಂಡಗಳ ಸದಸ್ಯರು ಶಿಸ್ತಿನಿಂದ ಹೆಜ್ಜೆ ಹಾಕಿದರು.

ಸ್ಕೌಟ್ಸ್‌ ಮತ್ತು ಭಾರತ ಸೇವಾ ದಳದ ತಂಡಗಳು, ನಗರದ ಕೆಲವು ಆಯ್ದ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಕರುಣಾಮಯಿ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಪಥಸಂಚಲನದಲ್ಲಿ ಹೆಜ್ಜೆಯಿಟ್ಟಾಗ ಜೋರಾದ ಚಪ್ಪಾಳೆ ಕೇಳಿಬಂತು.

ಸಾಂಸ್ಕೃತಿಕ ವೈಭವ: ನಗರದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಗಣ್ಯರು, ಅತಿಥಿಗಳು ಹಾಗೂ ಸಮಾರಂಭದಲ್ಲಿ ಸೇರಿದ್ದ ಸಾರ್ವಜನಿಕರ ಮನಗೆದ್ದರು. 2,100 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ರೋಟರಿ ಬೃಂದಾವನ ಶಾಲೆಯ 450 ವಿದ್ಯಾರ್ಥಿಗಳು ‘ಗಂಡು ಮೆಟ್ಟಿದ ನಾಡು, ಇದು ಗಂಡುಗಲಿಗಳ ಬೀಡು’ ಹಾಡಿಗೆ ನೃತ್ಯರೂಪಕ ಪ್ರದರ್ಶಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಶೌರ್ಯವನ್ನು ಮತ್ತೆ ನೆನಪಿಸುವಂತೆ ಮಾಡಿದರು.

ಮೈಸೂರು ಉತ್ತರ ವಲಯದ ಸರ್ಕಾರ ಶಾಲೆಗಳ ಒಕ್ಕೂಟದಿಂದ 650 ವಿದ್ಯಾರ್ಥಿಗಳು ‘ಭಾರತೀಯರು ನಾವು ಭಾರತೀಯರು’ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಬಿಳಿ ಬಣ್ಣದ ಉಡುಪು ತೊಟ್ಟಿದ್ದ ವಿದ್ಯಾರ್ಥಿಗಳು ಮೈದಾನದ ಬಹುಪಾಲು ಆವರಿಸಿಕೊಂಡು ನೋಡುಗರ ಮನಗೆದ್ದರು.

ಗಾಯತ್ರಿಪುಂನ ಸೇಂಟ್‌ ಆಂಥೋಣಿ ಶಾಲೆಯ 350 ವಿದ್ಯಾರ್ಥಿಗಳು ಮತ್ತು ಲಷ್ಕರ್‌ ಮೊಹಲ್ಲಾದ ಗುಡ್‌ ಶೆಫರ್ಡ್‌ ಕಾನ್ವೆಂಟಿನ 700 ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಇತರ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು.

ರೋಟರಿ ಬೃಂದಾವನ ಶಾಲೆಯ ವಿದ್ಯಾರ್ಥಿಗಳು ‘ಭೂಮಿ ತಾಯಿಯೇ ನಿನಗೆ ವಂದನೆ’ ಪರಿಸರ ಗೀತೆಯ ಮೂಲಕ ಎಲ್ಲರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.