ADVERTISEMENT

ಮೈಸೂರು: ಕಣ್ಮರೆಯಾಗಲಿವೆಯೇ ಪಾರಂಪರಿಕ ಮೆಟ್ಟಿಲು?

ಹಂಪಿ ಮಾದರಿಯ ಮಂಟಪಗಳ ನಿರ್ಮಾಣಕ್ಕೆ ಪ್ರಸ್ತಾವ

ಕೆ.ಎಸ್.ಗಿರೀಶ್
Published 19 ನವೆಂಬರ್ 2021, 8:20 IST
Last Updated 19 ನವೆಂಬರ್ 2021, 8:20 IST
ಚಾಮುಂಡಿಬೆಟ್ಟದ ಮೆಟ್ಟಿಲುಗಳ ಬಳಿ ನಿರ್ಮಾಣವಾಗಲಿರುವ ಗೋಪುರದ ನೀಲನಕ್ಷೆ
ಚಾಮುಂಡಿಬೆಟ್ಟದ ಮೆಟ್ಟಿಲುಗಳ ಬಳಿ ನಿರ್ಮಾಣವಾಗಲಿರುವ ಗೋಪುರದ ನೀಲನಕ್ಷೆ   

ಮೈಸೂರು: ತೀರ್ಥಕ್ಷೇತ್ರಗಳ ಪುನಶ್ಚೇತನ, ಅಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆ (ಪ್ರಸಾದ)ಯಡಿ ರಾಜ್ಯಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೆ ಚಾಮುಂಡಿಬೆಟ್ಟದ ಪಾರಂಪರಿಕ ಮೆಟ್ಟಿಲುಗಳು ಕಣ್ಮರೆಯಾಗಲಿವೆ. ಅವುಗಳ ಜಾಗದಲ್ಲಿ ಹೊಸ ವಿನ್ಯಾಸದ ಮೆಟ್ಟಿಲುಗಳು ಬರಲಿವೆ. ಆದರೆ ಎಷ್ಟು ಪ್ರಮಾಣದಲ್ಲಿ ಮೆಟ್ಟಿಲುಗಳ ಬದಲಾವಣೆಯಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಪ್ರಸ್ತಾವದಲ್ಲಿ ಇಲ್ಲ

ಮೆಟ್ಟಿಲಿನ ಆರಂಭ ಸ್ಥಳದಲ್ಲಿರುವ ಚಿಕ್ಕ ಗೋಪುರವನ್ನು ತೆರವುಗೊಳಿಸಿ ಹಂಪಿಯ ವಿಜಯನಗರ ಶೈಲಿಯಲ್ಲಿ ಬೃಹತ್ ಗೋಪುರವನ್ನು ನಿರ್ಮಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಮಂಟಪಗಳನ್ನು ಕಟ್ಟಿ, ಮೆಟ್ಟಿಲುಗಳನ್ನು ಮರುವಿನ್ಯಾಸ ಮಾಡಲಾಗುತ್ತದೆ. ಬಹುತೇಕ ಕಡೆ ಬದಲಾವಣೆಯನ್ನೂ ಮಾಡಲಾಗುತ್ತದೆ ಎಂಬ ಅಂಶ ಪ್ರಸ್ತಾವದಲ್ಲಿದೆ.

ದೊಡ್ಡದೇವರಾಜ ಒಡೆಯರ್ ಅವರು 1659ರಲ್ಲಿ ಬೆಟ್ಟಕ್ಕೆ ನಿರ್ಮಿಸಿದ ಸಾವಿರ ಮೆಟ್ಟಿಲುಗಳು ಪಾರಂಪರಿಕವಾದವು. 1909ರಲ್ಲಿ ಬಿ.ಎಲ್‌.ರೈಸ್ ಪುತ್ರ ಹೆರಾಲ್ಡ್ ಡೆಕ್ಲಸ್ ರೈಸ್ ಬೆಟ್ಟಕ್ಕೆ ರಸ್ತೆ ನಿರ್ಮಿಸುವವರೆಗೂ ಎಲ್ಲರೂ ಇದೇ ಮೆಟ್ಟಿಲುಗಳ ಮೂಲಕವೇ ಬೆಟ್ಟ ತಲುಪುತ್ತಿದ್ದರು.

ADVERTISEMENT

‘ಹಿಂದಿನ ರಾಜ, ಮಹಾರಾಜರ ಭಾವನಾತ್ಮಕ ಹೆಜ್ಜೆಗುರುತುಗಳುಳ್ಳ ಮೆಟ್ಟಿಲುಗಳನ್ನು ಒಡೆಯುವುದಾಗಲಿ, ಬದಲಾಯಿಸುವುದಾಗಲಿ ಮಾಡಬಾರದು’ ಎಂದು ಪ್ರತಿ ಶುಕ್ರವಾರ ಬೆಟ್ಟವನ್ನು ಮೆಟ್ಟಿಲ ಮೂಲಕ ಹತ್ತಿ ದೇವರ ದರ್ಶನ ಪಡೆಯುವ ಅಗ್ರಹಾರದ ಭಕ್ತೆ ಕೌಸಲ್ಯಾ ಹೇಳುತ್ತಾರೆ.

‘ಮೆಟ್ಟಿಲುಗಳ ಅಕ್ಕಪಕ್ಕ ಅಲ್ಲಲ್ಲಿ ವಿಶ್ರಾಂತಿ ತಾಣಗಳ ಅಗತ್ಯವೇ ಇಲ್ಲ. ಒಂದೆರಡು ನಿಮಿಷ ದಣಿವಾರಿಸಿಕೊಳ್ಳುವುದಕ್ಕೆ ಕುಳಿತುಕೊಳ್ಳಲು ಸಾಕಷ್ಟು ಬಂಡೆಗಳು, ಕಲ್ಲುಗಳು, ಮರಗಳಿವೆ. ವಿಶ್ರಾಂತಿ ತಾಣ ನಿರ್ಮಿಸಿದರೆ ಮತ್ತೆ ಮರಗಳನ್ನು ತೆಗೆಯಬೇಕಾಗುತ್ತದೆ’ ಎಂದು ಭಕ್ತೆ ವನಜಾಕ್ಷಿ ಹೇಳುತ್ತಾರೆ.

ಹೊರಗಡೆಯ ಕಲ್ಲುಗಳಿಲ್ಲ!

‘ಹೊರಗಡೆಯಿಂದ ಯಾವುದೇ ಕಲ್ಲುಗಳನ್ನು ತಾರದೇ ಬೆಟ್ಟದಲ್ಲೇ ಇದ್ದ ಬಂಡೆಗಳನ್ನೇ ಕೆತ್ತಿ ಮೆಟ್ಟಿಲುಗಳನ್ನು ನಿರ್ಮಿಸಿರುವುದು ಚಾಮುಂಡಿಬೆಟ್ಟದ ವೈಶಿಷ್ಟ್ಯ. ಈ ಬಂಡೆಗಳನ್ನು ಒಡೆಯದೇ ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಅವುಗಳನ್ನು ತೆಗೆಯುವುದೂ ಒಂದೇ ಬೆಟ್ಟವನ್ನು ಒಡೆಯುವುದೂ ಒಂದೇ. ಮೆಟ್ಟಿಲುಗಳನ್ನು ಇರುವ ಹಾಗೆಯೇ ಬಿಡಬೇಕು’ ಎಂಬುದು ಭಕ್ತರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.