ADVERTISEMENT

ಮೈಸೂರು ನಗರದೊಳಗೆ 2 ಫ್ಲೈಓವರ್‌: ಯದುವೀರ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:29 IST
Last Updated 5 ನವೆಂಬರ್ 2025, 7:29 IST
<div class="paragraphs"><p>ಸಂಸದ ಯದುವೀರ್‌</p></div>

ಸಂಸದ ಯದುವೀರ್‌

   

ಮೈಸೂರು: ‘ನಗರದೊಳಗೆ ಎರಡು ಫ್ಲೈಓವರ್ ನಿರ್ಮಾಣ ಪ್ರಸ್ತಾವಕ್ಕೆ ನಮ್ಮ ವಿರೋಧವಿದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಫ್ಲೈಓವರ್‌ ನಿರ್ಮಿಸಲು ಉದ್ದೇಶಿಸಲಾದ ಜೆಎಲ್‌ಬಿ ಹಾಗೂ ವಿನೋಬಾ ರಸ್ತೆ ಪಾರಂಪರಿಕ ರಸ್ತೆಗಳಾಗಿವೆ. ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜನಾಭಿಪ್ರಾಯವನ್ನೇ ಪಡೆಯದೇ ಈ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಪಿಆರ್ ಸಿದ್ಧಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ತೀವ್ರ ವಿರೋಧವಿದೆ’ ಎಂದು ಹೇಳಿದರು.

‘ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಿದರೆ ಬದಿಯಲ್ಲಿರುವ ನೂರಾರು ಮರಗಳ ಹನನ ಆಗಲಿದೆ. ಆದ್ದರಿಂದ ಆ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಿಸಬಾರದು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳುಗೆಡವಬಾರದು. ಪಾರಂಪರಿಕ ನಗರದ ಗುರುತನ್ನು ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಟರ್ ಮೈಸೂರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳಬೇಕು’ ಎಂದರು.

‘ಫ್ಲೈ ಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಮುಂಬೈ ಮಾದರಿಯಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಮೆಟ್ರೊ ರೈಲು ನಿರ್ಮಾಣ ಮಾಡಲಿ. ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಿ. ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಸ್ಥಳೀಯರಿಗೆ ಅನುಕೂಲ ಆಗುವಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಿ’ ಎಂದು ಹೇಳಿದರು.

‘ವಿರೋಧದ ನಡುವೆ ಫ್ಲೈಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ’ ಎಂದು ತಿಳಿಸಿದರು.

‘ಗ್ರೇಟರ್ ಮೈಸೂರು ಮಾಡುವುದರಿಂದ ಒಳಿತಾಗಲಿದೆ. ಆದರೆ, ಅದಕ್ಕೆ ತಕ್ಕಂತೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಬಾರದು’ ಎಂದರು.

ಅರಸು ಹೋಲದ ಪ್ರತಿಮೆ:

‘ಮೈಸೂರಿನ ಸಿದ್ಧಾರ್ಥನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆ ದೇವರಾಜ ಅರಸು ಅವರನ್ನು ಹೋಲುತ್ತಿಲ್ಲ. ಈ ಬಗ್ಗೆ ಅವರ ಪುತ್ರಿ ಭಾರತಿ ಅರಸು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾವರಣಕ್ಕೂ ಮುನ್ನ ಸಂಬಂಧಿಸಿದವರು ಪರಿಶೀಲನೆ ನಡೆಸಬೇಕಿತ್ತು. ಅನಾವರಣ ಬಳಿಕ ಎಲ್ಲರ ಗಮನಕ್ಕೆ ಬಂದಿದೆ. ಹೀಗಾಗಿ, ಪ್ರತಿಮೆಯ ವಿಷಯದಲ್ಲಿ ಆಗಿರುವ ಲೋಪ, ತಪ್ಪನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.