ADVERTISEMENT

ಅಕ್ಕನಿಗೆ ಚಿಗುರು ಆಶ್ರಮ; ತಮ್ಮನಿಗೆ ಬಾಲಮಂದಿರ ಆಸರೆ

ಸಂಕಷ್ಟದಲ್ಲಿದ್ದ ಆಲನಹಳ್ಳಿಯ ಮಕ್ಕಳು ಮೈಸೂರಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:04 IST
Last Updated 2 ಮಾರ್ಚ್ 2020, 19:04 IST
ಆಲನಹಳ್ಳಿಯಿಂದ ಆಕಾಶ್, ಅನುಷಾರನ್ನು ಮೈಸೂರಿಗೆ ಕರೆ ತರಲಾಯಿತು
ಆಲನಹಳ್ಳಿಯಿಂದ ಆಕಾಶ್, ಅನುಷಾರನ್ನು ಮೈಸೂರಿಗೆ ಕರೆ ತರಲಾಯಿತು   

ಎಚ್.ಡಿ.ಕೋಟೆ/ಮೈಸೂರು: ತಂದೆ–ತಾಯಿಯನ್ನು ಕಳೆದುಕೊಂಡು, ಪಾರ್ಶ್ವವಾಯು ಪೀಡಿತ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದಿದ್ದ ಬಾಲಕನಿಗೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಸೋಮವಾರ ನೆರವು ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಮಂಜುಳಾ–ಕುಮಾರ್ ದಂಪತಿಯ ಮಕ್ಕಳಾದ ಆಕಾಶ್(15), ಅನುಷಾ (17) ಇಬ್ಬರಿಗೂ ಮೈಸೂರಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಕೈ–ಕಾಲಿನ ಸ್ವಾಧೀನ ಕಳೆದುಕೊಂಡು, ಬುದ್ದಿಮಾಂದ್ಯಳಾಗಿರುವ ಅನುಷಾಳನ್ನು ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ‘ಚಿಗುರು’ ಆಶ್ರಮಕ್ಕೆ ದಾಖಲಿಸಲಾಗಿದೆ. ಆಕಾಶ್‌ನನ್ನು ವಿಜಯನಗರದಲ್ಲಿನ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂದರ್ಭ ಅಕ್ಕ–ತಮ್ಮನ ಸೋದರ ಮಾವ ಮಹೇಶ್‌ ಉಪಸ್ಥಿತರಿದ್ದರು.

ADVERTISEMENT

‘ಸೆರೆಬ್ರಲ್‌ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಅನುಷಾಳಿಗೆ, ತಾತ್ಕಾಲಿಕವಾಗಿ ಚಿಗುರು ಆಶ್ರಯ ಕೇಂದ್ರದಲ್ಲಿ ಆಶ್ರಯ ಕೊಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಕೇಂದ್ರಕ್ಕೆ ದಾಖಲಿಸಲಾಗುವುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ದಿವಾಕರ್ ತಿಳಿಸಿದರು.

‘ಮೈಸೂರಿನ ವಿಜಯನಗರದಲ್ಲಿರುವ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಆಕಾಶ್‌ಗೆ ಆಶ್ರಯ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದು ಬಾಲಮಂದಿರದ ಆಪ್ತ ಸಮಾಲೋಚಕಿ ಸ್ವಾತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆಲನಹಳ್ಳಿ ಸಮೀಪದಲ್ಲಿರುವ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿಯಲ್ಲಿ ಓದುತ್ತಿದ್ದಾಗ, ತಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಇದಾದ ಎರಡು ತಿಂಗಳಲ್ಲೇ ತಾಯಿಯೂ ಅಸುನೀಗಿದ್ದರು. ಅಕ್ಕನ ಆರೈಕೆ ಹಾಗೂ ಮನೆಯ ನಿರ್ವಹಣೆಗೆಂದು ಶಾಲೆ ಬಿಟ್ಟಿದ್ದ ಆಕಾಶ್, ಕೂಲಿ ಮಾಡುತ್ತಿದ್ದ.

ಬಾಲಕನ ಸಂಕಷ್ಟದ ಕುರಿತಂತೆ ‘ಅಕ್ಕನ ಆರೈಕೆಗಾಗಿ ಶಾಲೆ ತೊರೆದ ತಮ್ಮ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಫೆ.27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಗೆ ವ್ಯಾಪಕ ಸ್ಪಂದನೆ ದೊರೆತಿತ್ತು. ಹಲವು ಸಂಘ–ಸಂಸ್ಥೆಗಳು, ವ್ಯಕ್ತಿಗಳು ನೆರವು ನೀಡಲು ಮುಂದೆ ಬಂದಿದ್ದರು.

**

ಒಂದು ವಾರ ಬಾಲಮಂದಿರದಲ್ಲಿದ್ದು ನೋಡುತ್ತೇನೆ. ಪರಿಸರ ಹೊಂದಿಕೆಯಾದರೆ ಇಲ್ಲಿಯೇ ಮುಂದುವರಿಯುತ್ತೇನೆ.
-ಆಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.