ADVERTISEMENT

ಮೈಸೂರು: ವಿದ್ಯುತ್‌ ದೀಪಾಲಂಕಾರ 2 ದಿನ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 15:35 IST
Last Updated 10 ಅಕ್ಟೋಬರ್ 2022, 15:35 IST
   

ಮೈಸೂರು: ‘ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಿಗೆ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಅ.12ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಸೆಸ್ಕ್‌ ನಿರ್ದೇಶಕ ಜಯವಿಭವಸ್ವಾಮಿ ಹಾಗೂ ದಸರಾ ವಿದ್ಯುತ್ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಟಿ.ರಮೇಶ್ ತಿಳಿಸಿದ್ದಾರೆ.

‘ಸಂಜೆ 6.30‌ರಿಂದ ರಾತ್ರಿ 10.30ರವರೆಗೆ ಮಾತ್ರ ಇರಲಿದೆ. ದೀಪಾಲಂಕಾರ ಮುಂದುವರಿಕೆಯಿಂದ ನಗರವು ಝಗಮಗಿಸಿವುದರೊಂದಿಗೆ ವ್ಯಾಪಾರ–ವಹಿವಾಟು ಕೂಡ ವೃದ್ಧಿಗೊಳ್ಳಲಿದೆ’ ಎಂದು ಹೇಳಿದ್ದಾರೆ.

ದಸರಾ ನಿಮಿತ್ತ ಮಾಡಿರುವ ದೀಪಾಲಂಕಾರವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಆದಾಗ್ಯೂ ಮುಂದುವರಿಸುವಂತೆ ಬೇಡಿಕೆ ಬಂದಿರುವುದರಿಂದ ಸೆಸ್ಕ್ ಸ್ಪಂದಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ.

ADVERTISEMENT

‘ಈ ವರ್ಷ ವಿಶೇಷ ವಿನ್ಯಾಸದೊಂದಿಗೆ ಮಾಡಿರುವ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರು ಸೇರಿದಂತೆ ಎಲ್ಲ ಸಚಿವರು, ಶಾಸಕರು ಮೊದಲಾದ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರರಿಗೂ ಇಷ್ಟವಾಗಿದೆ. ಇದಕ್ಕಾಗಿ ಶ್ರಮಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.

‘ಸೆಸ್ಕ್‌ ಸಿಬ್ಬಂದಿ ದಿನವಿಡೀ ಕಾರ್ಯನಿರ್ವಹಿಸಿ ದೀಪಾಲಂಕಾರದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡಿದ್ದಾರೆ. ವಿದ್ಯುತ್‌ ದೀಪಾಲಂಕಾರ ಮುಂದುವರಿಕೆಯಿಂದ ನಿಗಮಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ. ಆದರೂ, ಎಲ್ಲರ ಒತ್ತಾಸೆಯ ಮೇರೆಗೆ ನಗರದ ಹೃದಯಭಾಗ ಹಾಗೂ ಮುಖ್ಯ ಸ್ಥಳಗಳಲ್ಲಿ 2 ದಿನಗಳವರೆಗೆ ಮುಂದುವರಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.