ADVERTISEMENT

ದಿವಾನ್ ಪೂರ್ಣಯ್ಯ ಕಾಲುವೆ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:08 IST
Last Updated 3 ಸೆಪ್ಟೆಂಬರ್ 2022, 16:08 IST

ಮೈಸೂರು: ಮಳೆ ಬಂದಾಗ ನಗರದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ಜಲಾವೃತವಾಗಿ ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸುವುದಕ್ಕಾಗಿ ದಿವಾನ್‌ ಪೂರ್ಣಯ್ಯ ಕಾಲುವೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಗ್ರಾಹಕರ ಪರಿಷತ್ (ಮೈಗ್ರಾಪ) ಒತ್ತಾಯಿಸಿದೆ.

ಈ ವಿಷಯ ಕುರಿತು ಪರಿಷತ್‌ನ ಪ್ರಮುಖರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ಮಳೆಯಾದಾಗ ನಗರದ ಹಲವೆಡೆ ಹಾಗೂ ಬೋಗಾದಿ, ಕೆ.ಹೆಮ್ಮನಹಳ್ಳಿ, ಆನಂದನಗರ, ಪರಸಯ್ಯನಹುಂಡಿ ಸಮೀಪದ ಅರ್ಪಿತ ನಗರ, ಹುಯಿಲಾಳು, ಮಾಣಿಕ್ಯಪುರ, ಸಾಹುಕಾರ್ ಹುಂಡಿ ಹಾಗೂ ಮೂಗನಹುಂಡಿ ಭಾಗದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದಿರುವುದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಪರಿಷತ್ತಿನ ಪ್ರಮುಖರು ಒತ್ತಾಯಿಸಿದರು.

ADVERTISEMENT

‘ಇದಕ್ಕಾಗಿ ಕಾರ್ಯಯೋಜನೆ ರೂಪಿಸಲು ಪರಿಣತರು ಒಳಗೊಂಡಂತೆ ಉನ್ನತಮಟ್ಟದ ಸಮಿತಿ ರಚಿಸಬೇಕು’ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕಾಲುವೆಗಳ ಒತ್ತುವರಿಯಾಗಿದ್ದರೆ ಪರಿಶೀಲಿಸಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯು ಕ್ರಮ ವಹಿಸಲಿದೆ. ಜೋರಾಗಿ ಮಳೆಯಾದಾಗ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಮೈಗ್ರಾಪದ ಶೋಭಾ ಸಾಂಬಶಿವನ್, ಅಶ್ವಿನಿ ರಾಜನ್, ಎಸ್. ಶೈಲಜೇಶ, ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಯು.ಎನ್.ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.