ಮೈಸೂರಿನ ಕಡಕೊಳದ ಕೈಗಾರಿಕಾ ಪ್ರದೇಶದ ಒಂದು ನೋಟ-
ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರು: ಜಿಲ್ಲೆಯಲ್ಲಿ ಉದ್ದೇಶಿತ ‘ಚಿತ್ರನಗರಿ’ (ಫಿಲಂ ಸಿಟಿ) ನಿರ್ಮಾಣಕ್ಕೆ ಒದಗಿಸಲಾಗಿರುವ ಜಾಗವೂ ಒಳಗೊಂಡಿರುವ ಕೈಗಾರಿಕಾ ಪ್ರದೇಶಗಳನ್ನು ‘ವಿಶೇಷ ಹೂಡಿಕೆ ಪ್ರದೇಶ’ (ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ರೀಜನ್– ಎಸ್ಐಆರ್)ಗಳೆಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ‘ಇದು ಉದ್ಯಮಸ್ನೇಹಿ ಬದಲಾವಣೆಯಾಗಿದೆ’ ಎಂದು ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ಬೃಹತ್, ಮೆಗಾ ಹಾಗೂ ಸೂಪರ್‌ಮೆಗಾ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು, ನಿಯಂತ್ರಿಸಲು ಮತ್ತು ನಿರ್ವಹಿಸಲು ವಿಶೇಷ ಹೂಡಿಕೆ ಪ್ರದೇಶ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯನ್ನು ಅಧಿಸೂಚಿತ ಎಸ್‌ಆರ್‌ಐಗಳನ್ನು ನಿರ್ವಹಿಸಲು ‘ಅತ್ಯುನ್ನತ ಪ್ರಾಧಿಕಾರ’ವನ್ನಾಗಿ ನೇಮಿಸಲಾಗಿದೆ.
ಸರ್ಕಾರವು, ಈ ಎಸ್‌ಆರ್‌ಐಗಳಿಗೆ ಕೆಐಎಡಿಬಿಯನ್ನು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಎಂದು ಆದೇಶಿಸಿದೆ. ಇದು ಸ್ಥಳೀಯ ಆಡಳಿತಕ್ಕಾಗಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಆ ಪ್ರದೇಶಗಳಿಗೆ ತೆರಿಗೆಗಳ ಮೌಲ್ಯಮಾಪನ, ನಿಗದಿ ಮತ್ತು ವಸೂಲಿಗಾಗಿ ನಿರ್ಧಾರ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತದೆ. ಇದೇ ಏ.1ರಿಂದ ಜಾರಿಗೆ ಬರುವಂತೆ ‘ಎಸ್ಐಆರ್’ಗಳಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧಿಕಾರ ನೀಡಲಾಗಿದೆ.
ಮಾಹಿತಿ ನೀಡಲಾಗಿದೆ: ವಿಶೇಷ ಹೂಡಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಘಟಕಗಳು, ನಿವೇಶನಗಳ ಚಾಲ್ತಿಯಲ್ಲಿರುವ ತೆರಿಗೆಯನ್ನು ಕೆಐಎಡಿಬಿ ಸಂಗ್ರಹಿಸುತ್ತದೆ ಎಂದು ಆಯಾ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿದೆ ಎಂದು ಕೆಐಎಡಿಬಿ ಮಾಹಿತಿ ನೀಡಿದೆ.
‘ಈ ಹೊಸ ವ್ಯವಸ್ಥೆಯಿಂದಾಗಿ ಸ್ಥಳೀಯ ಸಂಸ್ಥೆಗಳ ಗೊಡವೆಯಿಂದ ಕೈಗಾರಿಕೆಗಳು ದೂರಾಗಲಿವೆ. ಮಂಡಳಿಯೇ ನೇರವಾಗಿ ನಿರ್ವಹಿಸುವುದರಿಂದಾಗಿ ತೆರಿಗೆ ಪಾವತಿಯ ಸಂದರ್ಭದಲ್ಲಿ ಆಗುತ್ತಿದ್ದ ಗೊಂದಲ, ತಾಪತ್ರಯಗಳು ತಪ್ಪಲಿವೆ. ಆಯಾ ಪ್ರದೇಶದಲ್ಲಿ ಸಂಗ್ರಹವಾಗುವ ತೆರಿಗೆಯ ಹಣವನ್ನು ಆಯಾ ಪ್ರದೇಶದ ಅಭಿವೃದ್ಧಿಗೇ ಬಳಸಲು ಅನುಕೂಲ ಆಗುತ್ತದೆ’ ಎಂಬ ಮಾತುಗಳು ಉದ್ಯಮಿಗಳಿಂದ ಕೇಳಿಬಂದಿವೆ. ‘ಅಲ್ಲದೇ, ಹಲವು ವರ್ಷಗಳ ಹೋರಾಟಕ್ಕೆ ಸರ್ಕಾರ ಕೊನೆಗೂ ಸ್ಪಂದಿಸಿದೆ’ ಎಂಬ ಹರ್ಷವೂ ಅವರದಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ‘ಮೂರು ದಶಕಗಳಿಂದ ಇದ್ದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಹೋರಾಟಕ್ಕೆ ದೊರೆತ ಫಲವೆಂಬಂತೆ ಹೊಸ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ಅನುಕೂಲವಾಗಲಿದೆ’ ಎಂದು ಹೇಳಿದರು.
ಬಹಳ ಅನುಕೂಲವಾಗಲಿದೆ: ‘ನಾವು ಹಿಂದೆ, ವ್ಯಾಪ್ತಿಯ ಗ್ರಾಮ ಪಂಚಾಯಿತಿ ಹಾಗೂ ಹೂಟಗಳ್ಳಿ ನಗರಸಭೆಗೆ ಆಸ್ತಿ ತೆರಿಗೆ ಕಟ್ಟುತ್ತಿದ್ದೆವು. ಕೆಐಎಡಿಬಿಗೆ ಎಕರೆಗೆ ₹ 15ಸಾವಿರದಂತೆ ನಿರ್ವಹಣೆ ತೆರಿಗೆಯನ್ನೂ ಪಾವತಿಸುತ್ತಿದ್ದೆವು. ಆದರೂ ನಮ್ಮ ಕೈಗಾರಿಕಾ ಪ್ರದೇಶಗಳಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆ ಇದೆ. ತೆರಿಗೆ ದುಬಾರಿಯೂ ಆಗಿತ್ತು’ ಎಂದು ಮಾಹಿತಿ ನೀಡಿದರು.
‘ಇನ್ನು ಮುಂದೆ ಆಸ್ತಿ ತೆರಿಗೆಯನ್ನು ಕೆಐಎಡಿಬಿಗೇ ತುಂಬಬೇಕಾಗುತ್ತದೆ. ನಿರ್ವಹಣೆ ಶುಲ್ಕ ಕಟ್ಟಬೇಕಾದ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗೂ ಹೋಲಿಸಿದರೆ ತೆರಿಗೆ ಪ್ರಮಾಣ ಕಡಿಮೆ ಆಗಲಿದೆ. ಹೀಗೆ ಸಂಗ್ರಹವಾದ ಹಣದಲ್ಲಿ ಶೇ 70ರಷ್ಟನ್ನು ಆಯಾ ಪ್ರದೇಶದ ನಿರ್ವಹಣೆಗೇ ಬಳಸಬಹುದಾಗಿದೆ. ಇದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಶೇ 30ರಷ್ಟು ಮಂಡಳಿಗೆ ದೊರೆಯುತ್ತದೆ. ಖಾತೆ ಮೊದಲಾದ ವ್ಯವಹಾರವೇನಿದ್ದರೂ ಕೆಐಎಡಿಬಿ ಜೊತೆಯಲ್ಲೇ ಇರುತ್ತದೆ. ಪ್ರಾಧಿಕಾರದಲ್ಲಿ ಕೈಗಾರಿಕೋದ್ಯಮಿಗಳ ಪ್ರತಿನಿಧಿತ್ವವೂ ಇರುವುದರಿಂದ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.
ಮೈಸೂರಿನಲ್ಲಿ ಒಟ್ಟು 6,500 ಎಕರೆ ಪ್ರದೇಶದಲ್ಲಿ 2,500 ಕೈಗಾರಿಕೆಗಳಿವೆ. 2ಸಾವಿರಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಇಲ್ಲಿ ತಯಾರು ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಕೈಗಾರಿಕಾ ಸಂಸ್ಥೆಗಳಿವೆ. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳಿವೆ.
ಸರ್ಕಾರದ ಈ ಹೊಸ ಆದೇಶದಿಂದ ಸ್ಥಳೀಯ ಸಂಸ್ಥೆಯ ಹಸ್ತಕ್ಷೇಪ ಹಾಗೂ ಕಿರಿಕಿರಿ ಮೊದಲಾದವುಗಳು ತಪ್ಪುವುದರಿಂದ ಕೈಗಾರಿಕೆಗಳು ಬರುವುದಕ್ಕೆ ಹಾಗೂ ಹೂಡಿಕೆ ಹೆಚ್ಚುವುದಕ್ಕೆ ಸಹಕಾರಿಯಾಗಲಿದೆಸುರೇಶ್ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ ಮೈಸೂರು ಕೈಗಾರಿಕೆಗಳ ಸಂಘ
ಅಧಿಸೂಚಿತ ವಿಶೇಷ ಹೂಡಿಕೆ ಪ್ರದೇಶಗಳಲ್ಲಿನ ಉದ್ಯಮಿಗಳು ಹಂಚಿಕೆದಾರರು ಚಾಲ್ತಿಯಲ್ಲಿರುವ ಆಸ್ತಿ ತೆರಿಗೆಯನ್ನು ಇನ್ಮುಂದೆ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ)ಕ್ಕೆ ಪಾವತಿಸಬೇಕುಎಂ. ಮಹೇಶ್ ಸಿಇಒ ಕೆಐಎಡಿಬಿ
ಕಡಕೊಳ ಅಡಕನಹಳ್ಳಿ ಕೋಚನಹಳ್ಳಿ ಇಮ್ಮಾವು ತಾಂಡ್ಯ 2ನೇ ಹಂತ 1ನೇ ಹಂತ ತಾಂಡ್ಯ ಕೈಗಾರಿಕಾ ಪ್ರದೇಶ ಮಹಿಳಾ ಉದ್ಯಮಿಗಳ ಪಾರ್ಕ್ 1ನೇ ಮತ್ತು 2ನೇ ಹಂತ ಎಸ್‌ಯುಸಿ ಫಿಲಂ ಸಿಟಿ.
ಹೆಬ್ಬಾಳ ಹೂಟಗಳ್ಳಿ ಬೆಳವಾಡಿ ಬೆಳಗೊಳ ಕೂರ್ಗಳ್ಳಿ ಹೆಬ್ಬಾಳ 2ನೇ ಹಂತದ ಕೈಗಾರಿಕಾ ಪ್ರದೇಶ ಬಿಇಎಂಎಲ್ (ಎಸ್‌ಯುಸಿ) ಕೈಗಾರಿಕಾ ಪ್ರದೇಶ.
ಹೂಟಗಳ್ಳಿ ನಗರಸಭೆಗೆ ಪ್ರಕಟಿತ ಕೈಗಾರಿಕ ಪ್ರದೇಶದ ಆಸ್ತಿ ತೆರಿಗೆ ವಸೂಲಿ ಹಕ್ಕು ಇರುವುದಿಲ್ಲವಾದರೂ ಮಾಡಿದ್ದರೆ ಆ ಮೊತ್ತದ ಶೇ 70ರಷ್ಟು ಹಣವನ್ನು ಕೆಐಎಡಿಬಿಗೆ ವರ್ಗಾಯಿಸಬೇಕು.
ಕೆಐಎಡಿಬಿಯು ಎಕರೆಗೆ ₹15ಸಾವಿರ ಕೈಗಾರಿಕಾ ಪ್ರದೇಶದ ನಿರ್ವಹಣೆ ಶುಲ್ಕ ವಿಧಿಸುವುದನ್ನು ಇನ್ಮುಂದೆ ಹಿಂಪಡೆಯಬೇಕು.
ಕೈಗಾರಿಕಾ ಪ್ರದೇಶದ ನಿರ್ವಹಣೆ ಬೀದಿದೀಪ ನೀರು ಸರಬರಾಜು ರಸ್ತೆ ನಿರ್ವಹಣೆಯನ್ನು ಕೆಐಎಡಿಬಿ ಹೆಚ್ಚು ಬದ್ಧತೆಯಿಂದ ಮಾಡಬೇಕು.
ಅಗತ್ಯವಾದ ಎಲ್ಲ ನಾಗರಿಕ ಸೌಲಭ್ಯಗಳನ್ನೂ ಒದಗಿಸಬೇಕು.
ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ಹೂಟಗಳ್ಳಿ ನಗರಸಭೆ ಈವರೆಗೆ ವಸೂಲಿ ಮಾಡಿರುವ ತೆರಿಗೆ ಮೊತ್ತದ ಶೇ 70ರಷ್ಟನ್ನು ಕೆಐಎಡಿಬಿಯೊಂದಿಗೆ ಸಮಾಲೋಚಿಸಿ ಈ ಪ್ರದೇಶದ ನಿರ್ವಹಣೆಗೆ ಮಾತ್ರವೇ ವಿನಿಯೋಗಿಸಬೇಕು.
ತೆರಿಗೆ ನಿರ್ಧರಣೆ ಮತ್ತು ವಸೂಲಿ ಪ್ರಕ್ರಿಯೆ ಪ್ರಾರಂಭವಾಗುವವರೆಗೆ ಇ–ಖಾತಾ ಕೊಡುವವರೆಗೆ ಗೊಂದಲಗಳನ್ನು ನಿವಾರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘದಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.