ಮೈಸೂರು: ಸುತ್ತೂರಿನಲ್ಲಿ ಜಾತ್ರೆ ಅಂಗವಾಗಿ ಆಯೋಜಿಸಿರುವ ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತುಪ್ರದರ್ಶನ ‘ಜ್ಞಾನ ದಾಸೋಹ’ ಮಾಡುತ್ತಿದೆ.
ಜೆಎಸ್‍ಎಸ್ ಶಾಲಾ ಶಿಕ್ಷಣ ವಿಭಾಗ ಏರ್ಪಡಿಸಿರುವ ವಸ್ತುಪ್ರದರ್ಶನದಲ್ಲಿ ಒಟ್ಟು 10 ವಿಭಾಗಗಳಿವೆ. ಜೀವವಿಜ್ಞಾನದ 16, ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ 7 ಮತ್ತು ಸಮಾಜವಿಜ್ಞಾನ ವಿಭಾಗದಲ್ಲಿ 21 ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ್ದಾರೆ. ವೀಕ್ಷಕರಿಗೆ ಅವುಗಳ ವಿವರಣೆಯನ್ನು ಆಪ್ತವಾಗಿ ನೀಡುತ್ತಿದ್ದುದು ಗುರುವಾರ ಕಂಡುಬಂತು.
ಉಮ್ಮತ್ತೂರು ಶಾಲೆಯ ವಿದ್ಯಾರ್ಥಿಗಳು ತಾವು ತಯಾರಿಸಿರುವ ಮೈಕ್ರೋಸ್ಕೋಪ್ ಮಾದರಿಯ ಮೂಲಕ ನೀರಿನಲ್ಲಿರುವ ಸೂಕ್ಷ್ಮಜೀವಿಗಳನ್ನು ತೋರಿಸುತ್ತಿದ್ದರು. ಮೇಟಗಳ್ಳಿ ಶಾಲೆಯ ವಿದ್ಯಾರ್ಥಿಗಳು ಜೀವಕೋಶಗಳು ಎಂಬ ಮಾದರಿಯಲ್ಲಿ ಜೀವ ಕೋಶಗಳ ವಿಧಗಳನ್ನು ಪರಿಚಯಿಸಿದರು. ಬಂಡಳ್ಳಿ ಶಾಲೆಯ ವಿದ್ಯಾರ್ಥಿಗಳು ಶ್ವಾಸಾಂಗವ್ಯೂಹ ಮಾದರಿಯು ಮೂಲಕ ಉಸಿರಾಟದ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು.
ಸರಸ್ವತಿಪುರಂ ಶಾಲೆಯ ವಿದ್ಯಾರ್ಥಿಗಳು ಆಹಾರವೇ ಔಷಧ ಎಂಬುದನ್ನು ತಮ್ಮ ಮಾದರಿಯ ಮೂಲಕ ತಿಳಿಸಿದರು. ಮನುಗನಹಳ್ಳಿ ಶಾಲೆಯ ವಿದ್ಯಾರ್ಥಿಗಳು ರೈತರಿಗೆ ಅನುಕೂಲವಾಗುವಂತೆ ಪಶು ಆಹಾರ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಸಿದ್ಧಾರ್ಥನಗರ ಶಾಲೆಯ ವಿದ್ಯಾರ್ಥಿಗಳು ಗ್ರಾಮ ಒನ್ ಸೇವೆ ಮತ್ತು ಅದರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹುಲ್ಲಹಳ್ಳಿ ಶಾಲೆಯ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಬೆಳಕು ಚೆಲ್ಲಿದರು. ವಿವಿಧ ಶಾಲೆಗಳ ಮಕ್ಕಳು ಹಾಗೂ ಆಸಕ್ತರು ಮಾದರಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.