ಮೈಸೂರು: ‘ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ವಿ.ವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದಿನಗೂಲಿ ನೌಕರರ ಸಂಘದ ಕಾರ್ಯದರ್ಶಿ ಎಂ.ಕೆ.ಬಿಳಿಗಿರಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದ ಆದೇಶ ಗಾಳಿಗೆ ತೂರಲಾಗಿದೆ. ಆದೇಶದ ಅಡಿಯಲ್ಲಿ ಬರುವ 24 ಮಂದಿಯಲ್ಲಿ 15 ಮಂದಿ ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ದಲಿತರಿಗೆ ಅನ್ಯಾಯ ಮಾಡಬೇಕೆಂಬ ಉದ್ದೇಶದಿಂದ ನೇಮಕಾತಿ ಕಡೆಗಣಿಸಲಾಗಿದ್ದು, ಭ್ರಷ್ಟಾಚಾರ ನಡೆದಿದೆ’ ಎಂದು ದೂರಿದರು.
‘ವಿ.ವಿಗೆ 2011–12ನೇ ಸಾಲಿನಿಂದ ಇಲ್ಲಿವರೆಗೆ ಬಂದ ಕುಲಪತಿ, ಕುಲಸಚಿವರು, ವ್ಯವಸ್ಥಾಪನಾ ಮಂಡಳಿ ಸದಸ್ಯರು ನಮಗೆ ನ್ಯಾಯ ದೊರಕಿಸಿಲ್ಲ. ದಿನಗೂಲಿಯಾಗಿಯೇ ನಮ್ಮನ್ನು ಮುಂದುವರೆಸಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿಯೇ ಅನ್ಯಾಯ ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು’ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.