ಮೈಸೂರಿನ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ ಹಾಗೂ ‘ಮೈಸೂರು ಬುಕ್ಸ್ ಕ್ಲಬ್ಸ್’ ಶನಿವಾರ ಆಯೋಜಿಸಿದ್ದ 9ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಿದರು. ಲೇಖಕಿಯರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ ಪಾಲ್ಗೊಂಡಿದ್ದರು -
ಪ್ರಜಾವಾಣಿ ಚಿತ್ರ
ಮೈಸೂರು: ಹೊರಗೆ ತುಂತುರು ಮಳೆ ಜಿನುಗುತ್ತಿದ್ದರೆ ಒಳಗೆ ಕನ್ನಡ ಅಸ್ಮಿತೆ, ಮಹಿಳಾ ಸಬಲೀಕರಣ, ಮುಸ್ಲಿಂ ಸಂವೇದನೆ, ತಂತ್ರಜ್ಞಾನ, ಸಾಹಿತ್ಯ– ಸಂಗೀತ ಕುರಿತ ಕಾವೇರಿದ ಚರ್ಚೆಯಲ್ಲಿ ಸಹೃದಯರು ಮಿಂದರು.
ಇಲ್ಲಿನ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ ಹಾಗೂ ‘ಮೈಸೂರು ಬುಕ್ಸ್ ಕ್ಲಬ್ಸ್’ ಶನಿವಾರ ಆಯೋಜಿಸಿದ್ದ 9ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿಯರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ ಅವರ ಗೋಷ್ಠಿಯೊಂದಿಗೆ ಗರಿ ಬಿಚ್ಚಿತು.
ಬಾನು ಮುಷ್ತಾಕ್ ಮಾತನಾಡಿ, 'ಕಥೆಯು ಎಂದಿಗೂ ಜೀವಪರ, ಜನಪರ ಆಗಿರಬೇಕು. ಆಗ, ಓದುಗರಿಂದ ಸ್ಪಂದನೆ ಸಿಗುತ್ತದೆ' ಎಂದರು.
'ದೇಶದ ಎಲ್ಲ ಸಮಸ್ಯೆಗಳಿಗೂ ಬರಹಗಾರ ಪ್ರತಿಸ್ಪಂದಿಸಬೇಕು. ಸಮಸ್ಯೆ ಬಗೆಹರಿಸಲು ಸಾಧ್ಯವಾಗದು. ಪರಿಹಾರ ಹುಡುಕುವಂತೆ ಮಾಡಬೇಕು. ನನ್ನ ಕಥೆ ಎಂದಿಗೂ ಮುಗಿಯುವುದಿಲ್ಲ. ಅದು ಓದುಗರಲ್ಲಿ ಮತ್ತೆ ಆರಂಭ ಆಗುತ್ತದೆ. ಪರಿಹಾರ, ತಿರುವನ್ನು ಅವರೇ ಕೊಡುತ್ತಾರೆ. ಹೀಗಾಗಿ ಯಾವುದೇ ಜೀವಪರ ಕಥೆ ಸಣ್ಣದಲ್ಲ' ಎಂದರು.
'ನನ್ನ ಕಥೆಗಳ ಪ್ರಧಾನ ಮನೋಭೂಮಿಕೆ ಭರವಸೆ ಆಗಿದೆ. ಕಥೆಯ ಯಾವ ಪಾತ್ರ, ಮಹಿಳೆ, ವಸ್ತುವೂ ನಿರಾಶಾವಾದದ ಕಡೆ ಹೋಗುವುದಿಲ್ಲ. ಬದುಕು ಎಂದಿಗೂ ಗೋಳೆ ಅಲ್ಲ. ಹೋರಾಟದೊಂದಿಗೆ ಸಂತೋಷ, ಸಂಭ್ರಮ, ಸರಳತೆ ಇರುತ್ತದೆ. ಬಡವರು ಸಮಸ್ಯೆಯಿದೆ ಎಂದು ಗೋಳಾಡುತ್ತಲೇ ಇರುವುದಿಲ್ಲ' ಎಂದು ಉದಾಹರಿಸಿದರು.
'ಗಂಡಾಳಿಕೆ ಸಮಾಜದಲ್ಲಿ ಜೀವಂತವಾಗಿದೆ. ಹೆಂಗಸರಲ್ಲೂ ಇದೆ. ಇದನ್ನು ಲಿಂಗಾಧಾರಿತವಾಗಿ ತೀರ್ಮಾನಿಸಲು ಆಗುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೀಪಾ ಭಾಸ್ತಿ ಮಾತನಾಡಿ, 'ಅನುವಾದವು ಲೇಖಕರ ಅಭಿವ್ಯಕ್ತಿಯನ್ನು ಮತ್ತೊಂದು ಭಾಷೆಯಲ್ಲಿ ದಾಟಿಸುವುದು. ಅದು ಸೃಜನತ್ವದ ರೂಪಾಂತರ' ಎಂದರು.
ಭಾವಗನ್ನಡಿ: ಉತ್ಸವ ಉದ್ಘಾಟಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ‘ಸಾಹಿತ್ಯವು ಜನರ ಹೋರಾಟ, ಕನಸುಗಳ ಭಾವಗನ್ನಡಿಯಾಗಿದೆ. ಜನ ಸಂಸ್ಕೃತಿಯೊಂದಿಗೆ ಬೆರೆತಿರುವ ಅದು ನಮ್ಮ ಸೃಜಶೀಲತೆ, ಬಹುತ್ವ, ಸೌಹಾರ್ದತೆ, ಬೌದ್ಧಿಕ ಸ್ವಾತಂತ್ರದ ಸಂಭ್ರಮವಾಗಿದೆ’ ಎಂದರು.
‘ಯುವ ಜನರು ಸಾಹಿತ್ಯವನ್ನು ಓದಬೇಕು. ವಿಮರ್ಶಾತ್ಮಕವಾಗಿ ಚಿಂತಿಸಬೇಕು. ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಡಿಆರ್‌ಡಿಒದ ನಿವೃತ್ತ ವಿಜ್ಞಾನಿ ಪ್ರಹ್ಲಾದ್ ರಾಮ್ ರಾವ್ ಮಾತನಾಡಿ, ‘ದೇಶವು ನೆಮ್ಮದಿಯಾಗಿ ಇರಬೇಕೆಂದರೆ ಬೌದ್ಧಿಕ, ಆಹಾರ, ಕಾನೂನು, ಸಾಂಸ್ಕೃತಿಕ, ಕೈಗಾರಿಕೆ, ಆಂತರಿಕ ಭದ್ರತೆ ಇರಬೇಕು. ಸಂಗೀತ, ನಾಟಕ, ನೃತ್ಯ, ಕವಿತ್ವ, ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯೇ ಭಾರತದ ಬೆಳವಣಿಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಜಗತ್ತು ಅಜ್ಞಾನದಲ್ಲಿದ್ದಾಗ ದೇಶವು ತತ್ವಶಾಸ್ತ್ರವೂ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಶ್ರೀಮಂತವಾಗಿ ಬೆಳೆದಿತ್ತು. ಖಗೋಳ, ಭೌತ, ರಾಸಾಯನ ವಿಜ್ಞಾನದಲ್ಲೂ ಪಾರಮ್ಯ ಸಾಧಿಸಿತ್ತು. ದೇಶವು ಸುಭೀಕ್ಷವಾಗಿ ಬೆಳೆಯಬೇಕೆಂದರೆ ರಕ್ಷಣೆ, ಭದ್ರತೆಯೂ ಮುಖ್ಯ’ ಎಂದರು.
ಟ್ರಸ್ಟ್‌ನ ಕಾರ್ಯದರ್ಶಿ ತಂಗಂ ಪಣಕ್ಕಲ್, ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಉಪಾಧಕ್ಷ ಸ್ಯಾಮ್ ಚೆರಿಯನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.