ADVERTISEMENT

ಮೈಸೂರು ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ದೋಸ್ತಿ: ಜೆಡಿಎಸ್‌ನ ತಸ್ನೀಂ ಮೇಯರ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 7:06 IST
Last Updated 18 ಜನವರಿ 2020, 7:06 IST
   

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಮುಂದುವರಿದಿದ್ದು, ಜೆಡಿಎಸ್ ನ ತಸ್ನೀಂ ಅವರು ಮೇಯರ್ ಆಗಿ, ಕಾಂಗ್ರೆಸ್ ನ ಸಿ.ಶ್ರೀಧರ್ ಉಪಮೇಯರ್ ಆಗಿ ಆಯ್ಕೆಯಾದರು.

ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತಸ್ನೀಂ ಮತ್ತು ಸಿ.ಶ್ರೀಧರ್ ಸ್ಪರ್ಧಿಸಿದ್ದರು.

ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಗೀತಾಶ್ರೀ ಯೋಗಾನಂದ ಮತ್ತು ಉಪಮೇಯರ್ ಸ್ಥಾನಕ್ಕೆ ಶಾಂತಮ್ಮ ವಡಿವೇಲು ಕಣಕ್ಕಿಳಿದಿದ್ದರು.

ADVERTISEMENT

ತಸ್ನೀಂ ಮತ್ತು ಶ್ರೀಧರ್ ಅವರು 24 ಮತಗಳಿಂದ ತಮ್ಮ ಎದುರಾಳಿಗಳನ್ನು ಮಣಿಸಿ ಆಯ್ಕೆಯಾದರು. ಇವರಿಬ್ಬರ ಪರ 47 ಮತಗಳು ಬಿದ್ದವು. ಬಿಜೆಪಿ ಅಭ್ಯರ್ಥಿಗಳಾದ ಗೀತಾಶ್ರೀ ಮತ್ತು ಶಾಂತಮ್ಮ ಪರ 23 ಮತಗಳು ಬಿದ್ದವು.

ತಸ್ನೀಂ ಅವರು ಮೈಸೂರು ಮೇಯರ್ ಸ್ಥಾನ ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆ ಎನಿಸಿದ್ದಾರೆ.

ಪಾಲಿಕೆಯ 64 ಸದಸ್ಯರು, ತಲಾ ನಾಲ್ವರು ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಒಬ್ಬ ಸಂಸದ ಸೇರಿದಂತೆ ಒಟ್ಟು 73 ಮತಗಳಿದ್ದವು. ಸಂಸದ ಪ್ರತಾಪ ಸಿಂಹ, ಬಿಜೆಪಿ ಶಾಸಕ ಎಸ್.ಎ.ರಾಮದಾಸ್, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಬಿಜೆಪಿ ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಆರ್. ಧರ್ಮಸೇನ, ಸಂದೇಶ್ ನಾಗರಾಜು ಮತ್ತು ಮರಿತಿಬ್ಬೇಗೌಡ ಪಾಲ್ಗೊಂಡರು.

ಮೈಸೂರು ಪಾಲಿಕೆಯಲ್ಲಿ ಐದು ವರ್ಷ ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್ -ಜೆಡಿಎಸ್ ಒಪ್ಪಂದ ಮಾಡಿಕೊಂಡಿದ್ದವು.‌ ಮೊದಲ ವರ್ಷ ಮೇಯರ್ ಸ್ಥಾನ ಕಾಂಗ್ರೆಸ್ ಗೆ ಹಾಗೂ ಉಪಮೇಯರ್ ಸ್ಥಾನ ಜೆಡಿಎಸ್ ಗೆ ದೊರೆತಿತ್ತು. ಇದೀಗ ಎರಡನೇ ಅವಧಿಗೆ ಮೇಯರ್ ಸ್ಥಾನ ಜೆಡಿಎಸ್ ಗೆ ಹಾಗೂ ಉಪಮೇಯರ್ ಸ್ಥಾನ ಕಾಂಗ್ರೆಸ್ ಗೆ ಲಭಿಸಿದೆ.

65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 19 ಮತ್ತು ಜೆಡಿಎಸ್ 18 ಸ್ಥಾನಗಳನ್ನು ಹೊಂದಿವೆ. ಬಿಎಸ್ಪಿ 1 ಹಾಗೂ 5 ಪಕ್ಷೇತರರು ಇದ್ದಾರೆ. ಒಂದು ಸ್ಥಾನ ಖಾಲಿಯಿದೆ.

ಪ್ರಾದೇಶಿಕ ಆಯುಕ್ತ ಯಶ್ವಂತ್ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ಈ ಬಾರಿ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.