ADVERTISEMENT

ಮೈಸೂರು: ಮುಡಾ ಸಮಿತಿಗೆ ಸಿಗುವುದೇ ಕಾಯಕಲ್ಪ?

ಶಾಸಕರ ಬದಲಿಗೆ ತಂತ್ರಜ್ಞರಿಗೆ ಅವಕಾಶ: ಐಎಎಸ್‌ ಅಧಿಕಾರಿ ನಿಯೋಜನೆಗೆ ಆಗ್ರಹ

ಆರ್.ಜಿತೇಂದ್ರ
Published 12 ಜುಲೈ 2024, 23:53 IST
Last Updated 12 ಜುಲೈ 2024, 23:53 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ   

ಮೈಸೂರು: ಮುಡಾ ಹಗರಣದಿಂದ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಈಗ ಇರುವ ಸಮಿತಿಯಿಂದ ಶಾಸಕರಿಗೆ ಗೇಟ್‌ಪಾಸ್ ನೀಡಿ, ಅವರ ಜಾಗದಲ್ಲಿ ತಂತ್ರಜ್ಞರಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಮತ್ತೊಂದೆಡೆ, ‘ಆಯುಕ್ತರ ಹುದ್ದೆಗೆ ಐಎಎಸ್‌ ದರ್ಜೆಯ ದಕ್ಷ ಅಧಿಕಾರಿಯನ್ನೇ ನೇಮಿಸಬೇಕು’ ಎಂಬ ಕೂಗು ಸಹ ಜೋರಾಗಿದೆ.

ಪ್ರಸ್ತುತ ಮುಡಾ ಸಮಿತಿಯಲ್ಲಿ ವಿವಿಧ ಪಕ್ಷಗಳ 13 ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಅವರೊಟ್ಟಿಗೆ ಅಧಿಕಾರಿಗಳಿಗೆ ಮಾತ್ರ ಸ್ಥಾನ ಕಲ್ಪಿಸಲಾಗಿದೆ. ನಿರ್ಮಾಣ ಕ್ಷೇತ್ರದ ಯಾವುದೇ ತಂತ್ರಜ್ಞರು, ಅನುಭವಿಗಳು ಹಾಗೂ ಕಾನೂನು ತಜ್ಞರು ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ.

‘ಮುಡಾ ಯೋಜನಾ ಪ್ರದೇಶ (ಪ್ಲಾನಿಂಗ್‌ ಏರಿಯಾ) ಹಿಗ್ಗಿದೆಂತೆಲ್ಲ ಸಮಿತಿಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಕೇವಲ ಒಂದು ಗ್ರಾಮ ಮುಡಾಕ್ಕೆ ಒಳಪಟ್ಟರೂ ಅಂತಹ ಕ್ಷೇತ್ರದ ಶಾಸಕರಿಗೂ ಸದಸ್ಯತ್ವ ಸಿಗುತ್ತಿದೆ. ಕೆಲ ಶಾಸಕರು ಮುಡಾ ಸದಸ್ಯತ್ವಕ್ಕಾಗಿಯೇ ತಮ್ಮ ವಿಳಾಸ ಬದಲಿಸಿಕೊಂಡ ಉದಾಹರಣೆಗಳೂ ಇವೆ. ಇದರಿಂದ ಮುಡಾ ಮೇಲೆ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದೆ. ಆದರೆ, ಅದರಿಂದ ಪ್ರಾಧಿಕಾರಕ್ಕೆ ಆಗಿರುವ ಪ್ರಯೋಜನ ಏನು?’ ಎಂದು ಮುಡಾದ ನಿವೃತ್ತ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ADVERTISEMENT

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಲ್ಲ ಶಾಸಕರಿಗೆ ಸದಸ್ಯತ್ವದ ಅವಕಾಶ ಇಲ್ಲ. ಅಲ್ಲಿ ಸರ್ಕಾರ ತಜ್ಞರನ್ನು ನಾಮನಿರ್ದೇಶನ ಮಾಡುವ ಪದ್ಧತಿಯೂ ಇದೆ. ಅಂತಹ ನಿಯಮ ಮುಡಾದಲ್ಲೂ ಜಾರಿಗೆ ಬರಬೇಕು. ಕೇವಲ ಶಾಸಕರ ಬದಲಾಗಿ ನಿರ್ಮಾಣ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದ ತಜ್ಞರು, ಕಾನೂನು ಪಂಡಿತರು ಇಂತಹ ಸಮಿತಿಗಳಲ್ಲಿ ಇರಬೇಕು. ಕಾಲಕಾಲಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವ, ಅಧಿಕಾರಿಗಳು ದಾರಿ ತಪ್ಪಿದಾಗ ಅವರ ಕಿವಿ ಹಿಂಡುವ ಸಾಮರ್ಥ್ಯ ಉಳ್ಳವರಿಗೆ ಆ ಅವಕಾಶ ಸಿಗಬೇಕು. ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಿ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡುತ್ತಾರೆ.

ಸಚಿವರ ಪ್ರಸ್ತಾವ– ಸ್ವಪಕ್ಷೀಯರ ವಿರೋಧ:

ಮುಡಾ ಸಮಿತಿ ಪುನರ್‌ ರಚಿಸಿ 3–4 ಮಂದಿಗೆ ಮಾತ್ರ ಸದಸ್ಯತ್ವ ನೀಡುವ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಈಚೆಗೆ ಪ್ರಸ್ತಾವ ಮಂಡಿಸಿದ್ದರು. ‘ಮುಡಾ ಹಿಂದಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡುವೆ. ಮಹದೇವಪ್ಪ ಮಂಡಿಸಿದ ಪ್ರಸ್ತಾವದ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ’ ಎಂದು ಸಿದ್ದರಾಮಯ್ಯ ಸಹ ಹೇಳಿದ್ದು, ಸಮಿತಿ ಪುನರ್‌ರಚನೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಆದರೆ ಈ ಪ್ರಸ್ತಾವಕ್ಕೆ ಸ್ವಪಕ್ಷೀಯ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

‘ಮುಡಾಕ್ಕೆ ಸಂಬಂಧಿಸಿದಂತೆ ಶಾಸಕರು ಸಲಹೆ ನೀಡುತ್ತಿದ್ದೇವೆಯೇ ಹೊರತು ಪ್ರಭಾವ ಬೀರುವ ಕೆಲಸ ಮಾಡಿಲ್ಲ. ಇಂಥವರಿಗೇ ನಿವೇಶನ ಕೊಡಿ ಎಂದು ಯಾವ ಶಾಸಕರೂ ಹೇಳಿಲ್ಲ. ಸರ್ಕಾರ ಸಮಿತಿಯನ್ನು ಪುನರ್ ರಚನೆ ಮಾಡುವುದಾದರೆ ನಮ್ಮ ಸಹಮತವಿದೆ. ಶಾಸಕರಿದ್ದೇ ಅಧಿಕಾರಿಗಳದ್ದು ಈ ಮಟ್ಟಿನ ದರ್ಬಾರು. ಇನ್ನು ಶಾಸಕರಿಲ್ಲದಿದ್ದರೆ ಏನು ಕಥೆ’ ಎಂದು ಪ್ರಶ್ನಿಸುತ್ತಾರೆ ಕಾಂಗ್ರೆಸ್‌ ಶಾಸಕ ಕೆ. ಹರೀಶ್‌ ಗೌಡ

ಸದ್ಯದ ಪರಿಸ್ಥಿತಿಯಲ್ಲಿ ಮುಡಾಕ್ಕೆ ದಕ್ಷ ಅಧಿಕಾರಿಗಳ ಅಗತ್ಯ ಇದೆ. ಒತ್ತಡಗಳಿಗೆ ಮಣಿಯದ ಐಎಎಸ್‌ ದರ್ಜೆಯ ಅಧಿಕಾರಿಯನ್ನು ಸರ್ಕಾರ ಆಯುಕ್ತರ ಹುದ್ದೆಗೆ ನೇಮಿಸಬೇಕು
ಟಿ.ಎಸ್. ಶ್ರೀವತ್ಸ ಬಿಜೆಪಿ ಶಾಸಕ
ಮುಡಾ ಸಮಿತಿಯಿಂದ ಶಾಸಕರನ್ನು ಕೈ ಬಿಡುವ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಈಗ ಅಕ್ರಮ ಎಸಗಿರುವುದು ಅಧಿಕಾರಿಗಳಾ ಅಥವಾ ಶಾಸಕರಾ?
ಜಿ.ಟಿ. ದೇವೇಗೌಡ ಜೆಡಿಎಸ್ ಶಾಸಕ
ಮುಡಾ ಸಮಿತಿಯನ್ನು ಪುನರ್‌ ರಚಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ನಮ್ಮ ಸಹಮತವಿದೆ. ಆದರೆ ಶಾಸಕರು ಸಮಿತಿಯಲ್ಲಿದ್ದೇ ಅಧಿಕಾರಿಗಳದ್ದು ಈ ಕಥೆ ಇನ್ನು ಇರದಿದ್ದರೆ ಹೇಗೆ?
ಕೆ. ಹರೀಶ್‌ ಗೌಡ ಕಾಂಗ್ರೆಸ್ ಶಾಸಕ

‘ದಕ್ಷ ಅಧಿಕಾರಿ ಮುಡಾ ಆಯುಕ್ತರಾಗಲಿ’

ಮೈಸೂರನ್ನು ಸುಂದರ ನಗರಿಯನ್ನಾಗಿ ರೂಪಿಸುವ ದೂರದೃಷ್ಟಿಯೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ 1904ರ ಜನವರಿ 1ರಂದು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ಸ್ಥಾಪಿಸಿದರು. ನಂತರ ಸಿಐಟಿಬಿ ಎಂದು ಮರು ನಾಮಕರಣಗೊಂಡು 1988ರ ಮೇ 16ರಂದು ಅದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಸ್ಥಾಪಿತವಾಯಿತು. ಸಾವಿರಾರು ಬಡವರ ಸ್ವಂತ ಸೂರಿನ ಕನಸು ನನಸಾಗಿಸಿದ್ದ ಮುಡಾ ಕ್ರಮೇಣ ತನ್ನ ಘನತೆ ವಿಶ್ವಾಸಾರ್ಹತೆ ಎರಡನ್ನೂ ಕಳೆದುಕೊಳ್ಳುತ್ತ ಸಾಗಿದೆ. ಇದಕ್ಕೆ ಶಕ್ತಿ ತುಂಬಬಲ್ಲ ಸಮರ್ಥ ಅಧಿಕಾರಿಗಳನ್ನು ಸರ್ಕಾರ ನೇಮಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಪಂಕಜ್‌ಕುಮಾರ್ ಪಾಂಡೆ ಮಣಿವಣ್ಣನ್‌ರಂತಹ ಕೆಲವೇ ಮಂದಿ ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ಮುಡಾ ಆಯುಕ್ತರನ್ನಾಗಿ ನೇಮಿಸಿತ್ತು. ಮುಡಾಕ್ಕೆ ಅಧ್ಯಕ್ಷರು ಇಲ್ಲದ ಸಂದರ್ಭಗಳಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳೇ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ನಿರ್ವಹಿಸಿದ್ದು ಆ ಸಂದರ್ಭ ಮುಡಾ ಐಎಎಸ್‌ ಅಧಿಕಾರಿಗಳ ಆಡಳಿತದಲ್ಲಿತ್ತು. ಉಳಿದ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿಗಳೇ ಆಯುಕ್ತರ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರಲ್ಲೂ ಅನೇಕ ಉತ್ತಮ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಅನ್ಯ ಕಾರಣಗಳಿಂದಾಗಿ ಸುದ್ದಿ ಆಗಿದ್ದಾರೆ. ‘ಭೂಮಿ ಬೆಲೆ ಗಗನಕ್ಕೇರಿರುವ ಈ ದಿನಗಳಲ್ಲಿ ಮುಡಾ ಆಯುಕ್ತರ ಮೇಲೆ ಸಾಕಷ್ಟು ಒತ್ತಡ ರಾಜಕೀಯ ಪ್ರಭಾವ ಇದ್ದೇ ಇದೆ. ಕೆಎಎಸ್‌ ದರ್ಜೆ ಅಧಿಕಾರಿಗಳು ಅದನ್ನು ನಿಭಾಯಿಸುವುದು ಕಷ್ಟ. ಅದರ ಬದಲಿಗೆ ಒತ್ತಡಗಳಿಗೆ ಮಣಿಯದ ದಕ್ಷ ಐಎಎಸ್‌ ಅಧಿಕಾರಿಗಳನ್ನು ಆಯುಕ್ತರ ಹುದ್ದೆಗೆ ನಿಯೋಜಿಸಬೇಕು’ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.

‘ಠೇವಣಿ ಇಡುವಲ್ಲಿ ನಿಯಮ ಉಲ್ಲಂಘಿಸಿಲ್ಲ’

‘ಮುಡಾ ಖಾತೆಯಲ್ಲಿದ್ದ ₹250 ಕೋಟಿ ಹಣವನ್ನು ಎಸ್‌ಬಿಐನಲ್ಲಿ ಠೇವಣಿ ಇಟ್ಟಿದ್ದರಲ್ಲಿ ಯಾವುದೇ ಅಕ್ರಮದ ಉದ್ದೇಶ ಇರಲಿಲ್ಲ. ಅದರಿಂದ ಮುಡಾಕ್ಕೆ ಬರುವ ಬಡ್ಡಿ ಹೆಚ್ಚಿಸುವುದಷ್ಟೇ ಉದ್ದೇಶವಾಗಿತ್ತು’ ಎಂದು ಮುಡಾದ ಅಂದಿನ ಆಯುಕ್ತ ಡಿ.ಬಿ. ನಟೇಶ್‌ ಸ್ಪಷ್ಟನೆ ನೀಡಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿರುವ ಅವರು ‘ಈ ಮೊದಲು ಬೇರೆ ಬ್ಯಾಂಕ್‌ಗಳಲ್ಲಿ ಇದ್ದ ಠೇವಣಿಗೆ ವಾರ್ಷಿಕ ಕೇವಲ ಶೇ 1.75 ರಷ್ಟು ಬಡ್ಡಿ ಮಾತ್ರವೇ ಸಿಗುತ್ತಿತ್ತು. ಇ–ಟೆಂಡರ್ ಕರೆದರೂ ಕೆಲವು ಬ್ಯಾಂಕುಗಳು ಹೆಚ್ಚಿನ ಬಡ್ಡಿಗೆ ಆಸಕ್ತಿ ತೋರಿರಲಿಲ್ಲ. ಈ ನಡುವೆ ಎಸ್‌ಬಿಐ ಶೇ 3.75 ಬಡ್ಡಿ ನೀಡಲು ಮುಂದೆ ಬಂದಿತು. ಇದರಿಂದ ಮುಡಾಕ್ಕೆ ವಾರ್ಷಿಕ ₹7.5 ಕೋಟಿ ಬಡ್ಡಿ ಬರುವ ನಿರೀಕ್ಷೆ ಇತ್ತು. ಹೀಗಾಗಿಯೇ ಮುಡಾ ಆದಾಯ ಹೆಚ್ಚಿಸುವ ಸಲುವಾಗಿ ಕಾನೂನು ಬದ್ಧವಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದನ್ನು ಅಂದಿನ ವರದಿಯಲ್ಲೇ ಉಲ್ಲೇಖಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.