ADVERTISEMENT

ಭರಣಿ ಮಳೆಯ ಅಬ್ಬರ; ಮರಗಳು ಧರೆಗೆ

ಕೃಷಿ ಭೂಮಿಗೆ ಜೀವಕಳೆ; ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 4:03 IST
Last Updated 30 ಏಪ್ರಿಲ್ 2022, 4:03 IST
ಮೈಸೂರಿನ ಕೆ.ಆರ್.ವೃತ್ತದಲ್ಲಿ ಶುಕ್ರವಾರ ಸುರಿಯುತ್ತಿದ್ದ ಮಳೆ ನಡುವೆ ಕೊಡೆ ಹಿಡಿದು ಮಹಿಳೆಯೊಬ್ಬರು ಹೆಜ್ಜೆ ಇಟ್ಟರು
ಮೈಸೂರಿನ ಕೆ.ಆರ್.ವೃತ್ತದಲ್ಲಿ ಶುಕ್ರವಾರ ಸುರಿಯುತ್ತಿದ್ದ ಮಳೆ ನಡುವೆ ಕೊಡೆ ಹಿಡಿದು ಮಹಿಳೆಯೊಬ್ಬರು ಹೆಜ್ಜೆ ಇಟ್ಟರು   

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ಬಹುತೇಕ ಕಡೆ ಸುರಿದ ಭರಣಿ ಮಳೆಯು ರೈತರನ್ನು ಹರ್ಷಚಿತ್ತಗೊಳಿಸಿತು. ಉಳುಮೆ ಮಾಡಿ, ಬಿತ್ತನೆ ಬೀಜ ಖರೀದಿಸಿ ಉತ್ತಮ ಮಳೆಗಾಗಿ ಕಳೆದ ಹಲವು ದಿನಗಳಿಂದ ರೈತರು ಕಾಯುತ್ತಿದ್ದರು. ಬಿತ್ತನೆಯಾಗಿದ್ದ ಕಡೆ ಒಣಗುತ್ತಿದ್ದ ಪೈರುಗಳಿಗೆ ಮಳೆಯು ಬೇಕಿತ್ತು. ಅಬ್ಬರದಿಂದ ಬೊಬ್ಬಿರಿದ ಮಳೆರಾಯ ಕೃಷಿ ಭೂಮಿಗೆ ಜೀವಕಳೆಯನ್ನು ತಂದಿತು.

ಗುಡುಗು ಸಿಡಿಲು ಹಾಗೂ ಬಿರುಗಾಳಿಯಿಂದ ಕೂಡಿದ ಮಳೆಗೆ ಒಟ್ಟು 17 ಕಡೆ ಮರಗಳು ಧರೆಗುರುಳಿದರೆ, 50ಕ್ಕೂ ಅಧಿಕ ವಿದ್ಯುತ್‌ಕಂಬಗಳು ಮುರಿದು ಬಿದ್ದವು. ಮೈಸೂರು– ಬೆಂಗಳೂರು ಹಾಗೂ ಮೈಸೂರು– ತಿ.ನರಸೀಪುರ ರಸ್ತೆ ಸಂಚಾರ ಅಸ್ತವ್ಯಸ್ತೊಗೊಂಡಿತು.

ಇಲ್ಲಿನ ಸಿದ್ಧಲಿಂಗಪುರದ ಮುಖ್ಯರಸ್ತೆಗೆ ಉರುಳಿದ ಮರವೊಂದು ಉರುಳಿದರೆ, ಮನೆಯೊಂದರ ಮೇಲೆ 2 ವಿದ್ಯುತ್ ಕಂಬಗಳು ಬಿದ್ದವು. ಅದೃಷ್ಟವಶಾತ್ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಪಾಯ ಸಂಭವಿಸಲಿಲ್ಲ. ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ADVERTISEMENT

ಮೇಗಳಾಪುರ ಸಮೀಪದ ಪೆಟ್ರೊಲ್‌ ಬಂಕ್‌ ಬಳಿ ಮುಖ್ಯರಸ್ತೆಗೆ ಮರ ಉರುಳಿ, ಸಂಚಾರ ಅಸ್ತವ್ಯಸ್ತಗೊಂಡಿತು. ತಿ.ನರಸೀಪುರ ಹಾಗೂ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಉಳಿದಂತೆ, ಗೌರಿಶಂಕರನಗರದ 1ನೇ ಕ್ರಾಸ್, ಕುವೆಂಪುನಗರದ ಎಂ ಬ್ಲಾಕ್‌ನ ಸುಬೋಧ ಕಾನ್ವೆಂಟ್ ಸಮೀಪ, ಟಿ.ಕೆ.ಬಡಾವಣೆಯ ಆರ್‌ಸಿಟಿಸಿ ಕಾಂಪೌಂಡ್, ಗಾಂಧಿನಗರದ 5ನೇ ಕ್ರಾಸ್, ಪ್ರಗತಿ ಶಾಲೆ ಸಮೀಪ, ನಿವೇದಿತಾ ನಗರದ ಶಾರದಾಂಬೆ ಉದ್ಯಾನ, ಬನ್ನಿಮಂಟಪ ಎಸ್‌.ಎಸ್‌.ನಗರ, ಕೆಸರೆಯ ದೋಭಿಘಾಟ್, ಮುನೇಶ್ವರ ನಗರದ ಮದೀನಾ ಮಸೀದಿ, ಶಿವಾಜಿರಸ್ತೆಯ ಕಮಲಾ ನರ್ಸಿಂಗ್ ಹೋಂ, ಜೆ.ಪಿ.ನಗರ 12ನೇ ಕ್ರಾಸ್‌ನ ಕವಿತಾ ಬೇಕರಿ ಸಮೀಪ ಮರಗಳು ಉರುಳಿ ಬಿದ್ದವು. ಇಲ್ಲೆಲ್ಲ ಪಾಲಿಕೆಯ ರಕ್ಷಣಾ ತಂಡ ಅಭಯ್‌–2 ಮರ ತೆರವು ಕಾರ್ಯಾಚರಣೆ ನಡೆಸಿತು.

50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ

ಬಿರುಗಾಳಿಗೆ ಸಿಲುಕಿ ಜಿಲ್ಲೆಯಲ್ಲಿ ಒಟ್ಟು 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಶ್ರೀರಂಗಪಟ್ಟಣ, ಮೈಸೂರು ಗಡಿ ಭಾಗದಲ್ಲೇ 32 ಕಂಬಗಳು ಮುರಿದಿವೆ. ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿದ್ದರಿಂದ ಹಲವು ಭಾಗಗಳು ರಾತ್ರಿ ಇಡೀ ಕತ್ತಲಿನಲ್ಲೇ ಮುಳುಗಿದವು.

ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ನಂಜನಗೂಡು ಭಾಗದಲ್ಲಿ 5 ಸೆಂ.ಮೀಗೂ ಹೆಚ್ಚು ಮಳೆ ಸುರಿದಿದೆ. ಇಲ್ಲಿನ ಹಂಚೀಪುರ, ಬಿದರಹಳ್ಳಿ, ಎನ್.ಬೇಗೂರು, ಕುರಿಹುಂಡಿ, ನುಗ್ಗಹಳ್ಳಿ ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಉಳಿದಂತೆ, ನಗರದಲ್ಲಿ 2 ಸೆಂ.ಮೀಗೂ ಅಧಿಕ ಮಳೆಯಾಗಿದೆ. ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.