ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ವರ್ಗದ ಅಧಿಕಾರಿಗಳ ನೌಕರರ ಪರಿಷತ್, ಕರ್ನಾಟಕ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ ಹಾಗೂ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು
– ಪ‍್ರಜಾವಾಣಿ ಚಿತ್ರ
ಮೈಸೂರು: ‘ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಪ್ರತಿಯೊಬ್ಬರೂ ಅವರ ಕೃತಿಗಳನ್ನು ಹೆಚ್ಚೆಚ್ಚು ಓದಿಕೊಳ್ಳಬೇಕು’ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.
ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪ.ಜಾತಿ, ವರ್ಗದ ಅಧಿಕಾರಿಗಳ, ನೌಕರರ ಪರಿಷತ್, ಕರ್ನಾಟಕ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇಲ್ಲಿನ ರಾಮಕೃಷ್ಣನಗರದ ದಿಗಂತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಈ ಸಂಸ್ಥೆಗಳ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ ಹಾಗೂ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ ಅಭಿನಂದಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
‘ದಲಿತ ಸಂಘಟನೆಗಳ ಮುಂದಿರುವ ಸವಾಲುಗಳು’ ಕುರಿತು ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ‘ದಸಂಸ ಹಾಗೂ ಬಹುಜನ ಚಳವಳಿ ಬಹುದೊಡ್ಡ ಹೋರಾಟವನ್ನು ರೂಪಿಸಿವೆ ಎಂಬುದು ನಿಜ. ಆದರೆ, ಪ್ರಸ್ತುತ ಹೋರಾಟಗಳಿಗೆ ವಿಶ್ವಾಸಾರ್ಹತೆಯ ಕೊರತೆ ಕಾಡುತ್ತಿದೆ. ಜಾತಿ ದೌರ್ಜನ್ಯಗಳು ಹೆಚ್ಚಿರುವ ಪ್ರಸ್ತುತ ಸಂದರ್ಭದಲ್ಲಿ ಹೋರಾಟದ ಸ್ವರೂಪ ಬದಲಿಸಬೇಕಾದ ಅಗತ್ಯವಿದೆ. ಅಂಬೇಡ್ಕರ್ ಅವರಂತೆ ಮಾನವೀಯ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ’ ಎಂದು ಆಶಿಸಿದರು.
ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಪ‍್ರಶಸ್ತಿಗೆ ಭಾಜನವಾಗಿದ್ದಕ್ಕೆ ಅಭಿನಂದನೆ ಸ್ವೀಕರಿಸಿದ ಹರಿಹರ ಆನಂದಸ್ವಾಮಿ, ‘ಎಲ್ಲ ಚಳವಳಿಗಳ ತಾಯಿಯಾದ ದಲಿತ ಹೋರಾಟ ಪರ್ಯಾಯ ವ್ಯವಸ್ಥೆ ಆಗಬೇಕಿತ್ತು. ಆದರೆ, ನಾಯಕರಿಂದಾಗಿ ಚಳವಳಿ ದಿಕ್ಕು ತಪ್ಪಿದ್ದರಿಂದಾಗಿ ಆ ಕೆಲಸ ಆಗಲಿಲ್ಲ’ ಎಂದು ವಿಷಾದಿಸಿದರು.
ದಲಿತ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಚ್.ರಾಜು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಜಯಕುಮಾರ್, ಪ್ರೇಮಾ ಬೋದಿ, ಪುರುಷೋತ್ತಮ್, ಎಂ.ನಾಗರಾಜು, ಪರಿಷತ್ ಅಧ್ಯಕ್ಷ ಟಿ.ಎಂ.ಮಹೇಶ್, ಡಿ.ಟಿ.ಸಿದ್ದಸ್ವಾಮಿ, ನಂಜುಂಡಸ್ವಾಮಿ, ಶಿವಸ್ವಾಮಿ, ಸುರೇಂದ್ರಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.