ADVERTISEMENT

ಕೋವಿಡ್‌: ಗ್ರಾಮಗಳಲ್ಲಿ ಶ್ರದ್ಧಾಂಜಲಿ ಫ್ಲೆಕ್ಸ್‌ಗಳ ಸ್ವಾಗತ!

ಮೈಸೂರು ಜಿಲ್ಲೆಯಲ್ಲಿ ತಕ್ಷಣದ ಸಹಾಯವೇ ಇಲ್ಲ

ಕೆ.ಓಂಕಾರ ಮೂರ್ತಿ
Published 30 ಮೇ 2021, 22:03 IST
Last Updated 30 ಮೇ 2021, 22:03 IST
ಸೀಲ್‌ಡೌನ್‌ ಆಗಿರುವ ಮೈಸೂರು ತಾಲ್ಲೂಕಿನ ಕೂರ್ಗಳ್ಳಿ ಗ್ರಾಮ–ಪ್ರಜಾವಾಣಿ ಚಿತ್ರ/ಬಿ.ಆರ್‌.ಸವಿತಾ
ಸೀಲ್‌ಡೌನ್‌ ಆಗಿರುವ ಮೈಸೂರು ತಾಲ್ಲೂಕಿನ ಕೂರ್ಗಳ್ಳಿ ಗ್ರಾಮ–ಪ್ರಜಾವಾಣಿ ಚಿತ್ರ/ಬಿ.ಆರ್‌.ಸವಿತಾ   

ಮೈಸೂರು: ಗ್ರಾಮಗಳ ಪ್ರವೇಶದ್ವಾರದಲ್ಲೇ ಹಾಕಿರುವ ಸಾಲು ಸಾಲು ಶ್ರದ್ಧಾಂಜಲಿ ಫ್ಲೆಕ್ಸ್‌ಗಳು; ಅಲ್ಲಲ್ಲಿ ಸೀಲ್‌ಡೌನ್‌ ಆಗಿರುವ ಗ್ರಾಮಗಳು; ರಸ್ತೆಗಳಿಗೆ ಊರಿನವರೇ ಹಾಕಿರುವ ಬೇಲಿಗಳು; ದಿಕ್ಕು ತೋಚದೇ ಅಸಹಾಯಕರಾಗಿ ಅಲೆದಾಡುತ್ತಿರುವ ಬಹುತೇಕ ಗ್ರಾಮಸ್ಥರು–ಇವು ಕೊರೊನಾ ಸೋಂಕಿನ ಹಾವಳಿ ಎದುರಿಸುತ್ತಿರುವ ಮೈಸೂರು ಜಿಲ್ಲೆಯ ವಾಸ್ತವದ ಕತೆ ಹೇಳುತ್ತಿವೆ.

ಚಿಕಿತ್ಸೆಗಾಗಿ ಸೋಂಕಿತ ಇಬ್ಬರು ಅಕ್ಕಂದಿರನ್ನು ಗೊದ್ದನಪುರದಿಂದ ನಂಜನಗೂಡು ತಾಲ್ಲೂಕು ಕೋವಿಡ್‌ ಆಸ್ಪತ್ರೆಗೆ ಕರೆತಂದಿದ್ದ ನಾಗರಾಜು, ಸಹಾಯಕ್ಕಾಗಿ ಅಂಗಲಾಚುತ್ತ ಅಲೆದಾಡುತ್ತಿದ್ದರು. ಗಂಟೆಗಟ್ಟಲೆ ಕಾದರೂ ಕೇಳುವವರೇ ಇರಲಿಲ್ಲ. ಬಳಲಿದ ಆ ಮಹಿಳೆಯರು ರಸ್ತೆಯಲ್ಲೇ ಕುಳಿತಿದ್ದರು.

‘ಯಾರೂ ಮಾಹಿತಿ ನೀಡುತ್ತಿಲ್ಲ. ಬೆಡ್‌ ಇಲ್ಲವೆಂದುಮತ್ತೊಂದು ಆಸ್ಪತ್ರೆಗೆ ಕಳುಹಿಸುವುದಾಗಿ ಹೇಳಿದ ನರ್ಸ್‌ ಈಗ ಕಾಣಿಸುತ್ತಿಲ್ಲ. ಆಂಬುಲೆನ್ಸ್‌ ವ್ಯವಸ್ಥೆ ಮಾಡುತ್ತಿಲ್ಲ. ಇಷ್ಟೊಂದು ಸಮಸ್ಯೆ ಇದೆ ಎಂಬುದು ಗೊತ್ತಿದ್ದರೆ ಮನೆಯಲ್ಲೇಆರೈಕೆ ಮಾಡುತ್ತಿದ್ದೆವು’ ಎಂದು ಕಣ್ಣೀರಿಡುತ್ತಿದ್ದ ನಾಗರಾಜು ‘ಪ್ರಜಾವಾಣಿ’ ಬಳಿ ಸಂಕಟ ತೋಡಿಕೊಂಡರು.

ADVERTISEMENT

ಸೋಂಕಿನಿಂದ ಮನೆಯಲ್ಲೇ ಐಸೋಲೇಟ್‌ ಆಗಿರುವ ಮೂಡಹಳ್ಳಿಯ ಮಲ್ಲೇಶ್‌, ಔಷಧಿ ಚೀಟಿ ಹಿಡಿದುಆಸ್ಪತ್ರೆಗಳಿಗೆ ಬೈಕಿನಲ್ಲಿ ಅಲೆಯುತ್ತಿದ್ದರು.ಗ್ರಾಮಗಳಲ್ಲಿ ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಔಷಧ ಸೇರಿದಂತೆಸರಿಯಾದ ಸೌಲಭ್ಯ ಕಲ್ಪಿಸದೆ ಇರುವುದಕ್ಕೆ ಈ ಪ್ರಕರಣವೇ ಸಾಕ್ಷಿ.

‌ಸೋಂಕಿನ ಲಕ್ಷಣ ಕಾಣಿಸಿಕೊಂಡಾಗ ಏನು ಮಾಡಬೇಕೆಂದು ಹೇಳುವವರೂ ಇಲ್ಲ. ಸಹಾಯವಾಣಿಗೆ ಕರೆ ಮಾಡಿದರೆ ‘ಸಹಾಯ’ ಸಿಗಲ್ಲ. ಆಂಬುಲೆನ್ಸ್‌ ಸಿಗದೇ ಬೇಸತ್ತು ಬೈಕಿನಲ್ಲೇ ಸೋಂಕಿತರನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ದರೆ, ಅಲ್ಲಿ ಮಾತನಾಡಿಸುವವರೇ ಇಲ್ಲ.

‘ಸರ್ಕಾರಿ ಆಂಬುಲೆನ್ಸ್‌ಗೂ ಹಣ ಪಡೆಯುತ್ತಾರೆ. ವೈದ್ಯರಿಲ್ಲದೇ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಿದ್ದಾರೆ. ಸೋಂಕಿನಿಂದ ಮೃತರಾದವರ ಶವವನ್ನು ಕುಟುಂಬದವರ ಸುಪರ್ದಿಗೆ ಕೊಡಲು ಸತಾಯಿಸುತ್ತಾರೆ. ಐದಾರು ಗಂಟೆ ಕಾಯಿಸುತ್ತಾರೆ, ದಾಖಲೆ ಕೇಳುತ್ತಾರೆ’–ಹೀಗೆ ದೂರುಗಳು ಕೇಳಿಬಂದಿದ್ದು ಎಚ್‌.ಡಿ.ಕೋಟೆ ಹಾಗೂ ಕೆ.ಆರ್‌.ನಗರ ತಾಲ್ಲೂಕಿನಲ್ಲಿ.

ಕೋವಿಡ್‌ ಮೊದಲ ಅಲೆ ವೇಳೆ ಎದುರಾದ ಸಮಸ್ಯೆ ಗೊತ್ತಿದ್ದರೂಜಿಲ್ಲಾಡಳಿತ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಜಿಲ್ಲೆಯಎಂಟೂತಾಲ್ಲೂಕು ಆಸ್ಪತ್ರೆಗಳಲ್ಲಿ ಶೇ 50ರಷ್ಟು ವೈದ್ಯರು, ನರ್ಸ್‌, ತಂತ್ರಜ್ಞರು ಹಾಗೂ ‘ಡಿ’ ದರ್ಜೆ ನೌಕರರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಸರಿಯಾಗಿ ರೋಗಿಗಳತ್ತ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ‘ಅಧಿಕಾರಿಗಳು ಸಭೆಗಳಲ್ಲೇ ‘ಬ್ಯುಸಿ’ಯಾಗಿದ್ದು, ಗ್ರಾಮಗಳಿಗೆ ಬರುತ್ತಿಲ್ಲ’ ಎಂಬ ದೂರು ಒಂದೆಡೆಯಾದರೆ, ವೈದ್ಯರು ಬೆಳಿಗ್ಗೆ ಪಟ್ಟಣದಿಂದ ಹೊರಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವಷ್ಟರಲ್ಲಿ 11 ಗಂಟೆ ದಾಟಿರುತ್ತದೆ ಎನ್ನುತ್ತಾರೆ ಸ್ಥಳೀಯರು.

‘ರಜೆಯೂ ಸಿಗದೆ ಒತ್ತಡದಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲೇ ಕೆಲವರಿಗೆ ಸೋಂಕು ಬಂದು ಆರೋಗ್ಯ ಹದಗೆಟ್ಟಿದೆ’ ಎಂದುನಂಜನಗೂಡು ಸರ್ಕಾರಿ ಆಸ್ಪತ್ರೆ‌ಯ ‌ವೈದ್ಯೆ ಡಾ.ಸುಮಾಹೇಳಿದರೆ; ‘ನಿರ್ವಹಣೆ ಕಷ್ಟಕರವಾಗಿದೆ. ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲುರೋಗಿಗಳುಬರುತ್ತಿದ್ದು, ಎಷ್ಟೇ ಮನವಿ ಮಾಡಿದರೂ ಅಂತರ ಕಾಯ್ದುಕೊಳ್ಳುತ್ತಿಲ್ಲ’‌ ಎನ್ನುತ್ತಾರೆ ಹುಣಸೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಸರ್ವೇಶ್‌ ರಾಜೇ ಅರಸ್‌.

ತುರ್ತು ಚಿಕಿತ್ಸೆಗೆಂದು ಪಟ್ಟಣಕ್ಕೆ ಕರೆದೊಯ್ಯಲು ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾಹನ ವ್ಯವಸ್ಥೆ ಇಲ್ಲ. ಸೋಂಕಿತ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ವಾಹನ ಸೌಲಭ್ಯವಿಲ್ಲದೇ ಸಾಲಿಗ್ರಾಮ ಆಸ್ಪತ್ರೆ ಆವರಣದಲ್ಲಿ ಮೂರು ತಾಸು ಕಾಯಿಸಿದ್ದರು. ಸೋಂಕು ಹೆಚ್ಚುತ್ತಿದ್ದರೂ ವ್ಯವಸ್ಥೆ ಮಾತ್ರ ಸರಿ ಹೋಗಿಲ್ಲ.ಗ್ರಾಮಾಂತರ ಪ್ರದೇಶಗಳಲ್ಲಿ ಸಮಸ್ಯೆ ಬಿಗಡಾಯಿಸಲು ಇದೂಪ್ರಮುಖ ಕಾರಣ.

ಮೈಸೂರಿನ ತಾಲ್ಲೂಕಿನ ಕೂರ್ಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಕೋವಿಡ್‌ ‍ಪ್ರಕರಣಗಳು ವರದಿಯಾಗಿವೆ. ಅಧಿಕಾರಿಗಳು ಈಗ ನಿದ್ದೆಯಿಂದ ಎದ್ದು ನಿಯಂತ್ರಣಕ್ಕಾಗಿ ಈ ಗ್ರಾಮಕ್ಕೆ ಬೇಲಿ ಹಾಕಿದ್ದಾರೆ.

ಮೈಸೂರು ಜಿಲ್ಲೆಯ 266 ಗ್ರಾಮ ಪಂಚಾಯಿತಿಯ 1,560 ಹಳ್ಳಿಗಳ ಪೈಕಿ 1,217 ಹಳ್ಳಿಗಳಲ್ಲಿ ಸೋಂಕುಹರಡಿದೆ. ‘ಕೋವಿಡ್‌ ಮಿತ್ರ’ ಸ್ಥಾಪಿಸಿ ಔಷಧಿ ವಿತರಿಸುತ್ತಿದ್ದು, ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ನಿಲ್ಲಿಸಲಾಗಿದೆ.

ದಾನಿಗಳ ಕೊಡುಗೆ: ಗ್ರಾಮೀಣ ಪ್ರದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿವೆಯಲ್ಲಾ ಎಂದು ವೈದ್ಯರನ್ನು ಕೇಳಿದರೆ, ‘ಸೋಂಕಿತರು ತಡವಾಗಿ ಆಸ್ಪತ್ರೆಗೆ ಬರ್ತಾರೆ’ ಎಂಬ ಸಮಜಾಯಿಷಿ ಮುಂದಿಡುತ್ತಾರೆ.ಸರ್ಕಾರ ಕಲ್ಪಿಸಿರುವ ಸೌಲಭ್ಯಕ್ಕಿಂತ ಶಾಸಕರು, ದಾನಿಗಳು ನೀಡಿರುವ ಸ್ವಂತ ಹಣದಲ್ಲಿ ಆಂಬುಲೆನ್ಸ್‌ ಸೇವೆ, ಔಷಧ ವಿತರಣೆ ಹೆಚ್ಚಾಗಿ ನಡೆಯುತ್ತಿದೆ.

ಗ್ರಾಮಗಳಲ್ಲಿ ಸೌಲಭ್ಯವಿಲ್ಲದೇ, ಸಮಸ್ಯೆ ಆಲಿಸುವವರೂ ಇಲ್ಲದೇ ಭಯಗೊಂಡ ಮೆಲ್ಲಹಳ್ಳಿಯ ದಂಪತಿ, ಅವರ ಮೂವರೂ ಹೆಣ್ಣು ಮಕ್ಕಳು ಹಾಗೂ ಪಿಲ್ಲಹಳ್ಳಿಯ ಅಪ್ಪ, ಮಕ್ಕಳು ಆರೈಕೆ ಕೇಂದ್ರ ಸೇರಿದ್ದಾರೆ.ಸೋಂಕು ತಂದೊಡ್ಡಿರುವ ನೋವಿನ ಜೊತೆಗೆ, ತಮ್ಮನ್ನು ಕೇಳುವವರೇ ಇಲ್ಲವಲ್ಲ ಎಂಬ ಅಸಹಾಯಕತೆ ಕಾಡುತ್ತಿದೆ.

ಮನೆ ಮಂದಿಯೆಲ್ಲ ಆರೈಕೆ ಕೇಂದ್ರಕ್ಕೆ ದಾಖಲಾಗಿರುವುದರಿಂದ ಹೊಲ–ಗದ್ದೆ, ಜಾನುವಾರುಗಳನ್ನು ನೋಡಿಕೊಳ್ಳುವವರು ಯಾರೂ ಇಲ್ಲವಲ್ಲ ಎಂಬ ಕೊರಗೂ ಇದೆ.

ಅಲ್ಲಿ ಕೊರೊನಾ, ಇಲ್ಲಿ ಹಸಿವು: ಹಳ್ಳಿಗಳಲ್ಲಿ ಕೊರೊನಾ ಹಾವಳಿ ಇದ್ದರೆ, ಹಾಡಿಗಳಲ್ಲಿ ಊಟಕ್ಕಾಗಿ ಪರದಾಟ. ಲಾಕ್‌ಡೌನ್‌ ಕಾರಣ ಕೂಲಿಯೂ ಇಲ್ಲ.

ಸರ್ಕಾರದಿಂದ ರೇಷನ್‌ ಹಾಗೂ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ಕೆಲವರಿಗೆ ಪಡಿತರ ಚೀಟಿಯೇ ಸಿಕ್ಕಿಲ್ಲ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಈ ಸಮಸ್ಯೆ ‘ಪ್ರಜಾವಾಣಿ’ ಭೇಟಿ ನೀಡಿದ ಮೇಟಿಕುಪ್ಪೆ ಹಾಗೂ ಜಿ.ಎಂ.ಹಳ್ಳಿ ಹಾಡಿಯಲ್ಲಿ ಕಂಡುಬಂತು.

ಲಸಿಕೆಗೆ ‘ನಾಳೆ ಬನ್ನಿ’: ಗ್ರಾಮದ ಜನರು ಲಸಿಕೆ ಪಡೆಯಲು ಪಟ್ಟಣಗಳಿಗೆ ಬರುತ್ತಿದ್ದಾರೆ. ಆದರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ, ‘ನಾಳೆ ಬನ್ನಿ’ ಎಂಬ ಉತ್ತರ.

‘ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ಮಾಡಿ ಹೋದರು. ಅದಕ್ಕಾಗಿ, ಪಟ್ಟಣಕ್ಕೆ ಅಲೆದು ಸಾಕಾಯಿತು’ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಸೊಳ್ಳೇಪುರ ಗ್ರಾಮದ ರಾಮನಾಯಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.