ಮೈಸೂರು: ‘ಸಾಮ್ರಾಜ್ಯಶಾಹಿ ಅಮೆರಿಕಾದ ನೆರವಿನಿಂದ ಇಸ್ರೇಲ್ ನಡೆಸುತ್ತಿರುವ ದಾಳಿ ನಿಲ್ಲಲಿ, ಗಾಜಾ ಉಳಿಯಲಿ’ ಎಂದು ಆಗ್ರಹಿಸಿ ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.
‘ಸಾಮ್ರಾಜ್ಯಶಾಹಿ ಅಮೆರಿಕಾದ ನೆರವಿನೊಂದಿಗೆ ಜಿಯೋನಿಸ್ಟ್ ಇಸ್ರೇಲ್, ಗಾಜಾದ ಆಸ್ತಿತ್ವವನ್ನೇ ನಾಶ ಮಾಡುವ ಭೀಕರವಾದ ಶಸ್ತ್ರಾಸ್ತ್ರ ದಾಳಿಯನ್ನು ನಡೆಸುತ್ತಿದೆ. ಕದನ ವಿರಾಮವನ್ನು ಕೂಡಾ ಲೆಕ್ಕಿಸದೇ ನಿರಾಶ್ರಿತ ಶಿಬಿರಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆ, ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಭೀಕರ ದಾಳಿಯಿಂದಾಗಿ ಸಾವಿರಾರು ಮಂದಿ ಪ್ಯಾಲೆಸ್ಟೀನ್ ಮುಗ್ಧ ಮಕ್ಕಳು, ನಾಗರಿಕರು, ಬಡವರು, ಶ್ರಮಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಇಸ್ರೇಲಿನ ದಾಳಿಗೆ, ಮಧ್ಯ ಪ್ರಾಚ್ಯ ರಾಷ್ಟ್ರಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿರುವ ಅಮೆರಿಕಾ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನದ ಪೂರೈಕೆ ಮೂಲಕ ಸಹಾಯ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಕೇವಲ ಇಸ್ರೇಲ್- ಪ್ಯಾಲೆಸ್ಟೀನ್ ನಡುವಿನ ಯುದ್ಧಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲಾ ಯುದ್ಧಗಳೂ ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆಯನ್ನು ಉಳಿಸುವ, ವಿಸ್ತರಿಸುವ ಪ್ರಯತ್ನಗಳ ಭಾಗವಾಗಿವೆ. ಆದರೆ, ಅಂತಿಮವಾಗಿ ನೋವನ್ನು ಅನುಭವಿಸುವವರು ಆಯಾಯ ದೇಶಗಳ ಬಡಪಾಯಿ ನಾಗರಿಕರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿಶ್ವ ಶಾಂತಿಯನ್ನು ಕಾಪಾಡುವ ಸಲುವಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಈ ಕೂಡಲೇ ನಿಲ್ಲಿಸಬೇಕು ಹಾಗೂ ಗಾಜಾದಲ್ಲಿ ಶಾಂತಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ, ಜಿಲ್ಲಾಧ್ಯಕ್ಷ ಯಶೋಧರ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಮುಖಂಡರಾದ ಪಿ.ಎಸ್. ಸಂಧ್ಯಾ, ಮುದ್ದುಕೃಷ್ಣ, ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.