ADVERTISEMENT

ಮೈಸೂರು ವಿವಿ ಆವರಣದ ಚಟುವಟಿಕೆಗಳ ಮೇಲೆ ಕಣ್ಣಿಡಲು ₹3.5 ಕೋಟಿ ವೆಚ್ಚದ ಯೋಜನೆ

₹3.5 ಕೋಟಿ ಮೊತ್ತದ ಯೋಜನೆ ಪೂರ್ಣ; 15–20 ದಿನದಲ್ಲಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 7:26 IST
Last Updated 14 ಆಗಸ್ಟ್ 2020, 7:26 IST
ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ    

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಮೇಲೆ ಕಣ್ಗಾವಲಿಡಲು ವಿಶ್ವವಿದ್ಯಾಲಯದ ಆಡಳಿತ ವರ್ಗ ಮುಂದಾಗಿದೆ.

ವಿಶ್ವವಿದ್ಯಾಲಯ ಆವರಣದ ಯಾವುದೇ ಭಾಗದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸಲುವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ₹3.5 ಕೋಟಿ ವೆಚ್ಚದ ಯೋಜನೆಯೊಂದನ್ನು ಅನುಷ್ಠಾನಗೊಳಿಸಿದೆ.

‘ಇಂಟಲಿಜೆಂಟ್ ವಿಡಿಯೊ ಸರ್ವೆಲೆನ್ಸ್‌ ಸಿಸ್ಟಂ’ನಡಿ ವಿ.ವಿ.ಯ ಎಲ್ಲೆಡೆ 730 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರ್‌ ವಿಭಾಗದಲ್ಲಿ 2,100 ಚದರಡಿಯ ಪ್ರದೇಶದಲ್ಲಿ ಇದರ ನಿರ್ವಹಣೆಗಾಗಿ ಡೇಟಾ ಸೆಂಟರ್ ಆರಂಭಿಸಲಿದೆ ಎಂಬುದನ್ನು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ADVERTISEMENT

ಹಿಂದಿನ ವರ್ಷ ವಿ.ವಿ.ಯ ಆವರಣದಲ್ಲಿ ನಡೆದ ಪ್ರತಿಭಟನೆ ಯೊಂದರಲ್ಲಿ ಯುವತಿಯೊಬ್ಬರು ‘ಫ್ರೀ ಕಾಶ್ಮೀರ್‘ ಪ್ಲೇ ಕಾರ್ಡ್‌ ಪ್ರದರ್ಶಿಸಿದ ಬಳಿಕ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯ, ಇನ್ಮುಂದೆ ತನ್ನ ಆವರಣದೊಳಗೆ ಯಾವುದೇ ವಿವಾದಿತ ಪ್ರಕರಣ ನಡೆಯದಂತೆ ಕಣ್ಗಾವಲಿಡಲು ಈ ಕ್ರಮ ತೆಗೆದುಕೊಂಡಿದೆ ಎಂಬ ವಿಶ್ಲೇಷಣೆ ವಿ.ವಿ.ಯ ಅಂಗಳದಿಂದ ಕೇಳಿ ಬಂದಿದೆ.

ಸುರಕ್ಷತೆಗೆ ಒತ್ತು: ‘ವಿದ್ಯಾರ್ಥಿಗಳು, ಕ್ಯಾಂಪಸ್‌ನ ಸುರಕ್ಷತೆ ದೃಷ್ಟಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. 2019ರ ಅಕ್ಟೋಬರ್– ನವೆಂಬರ್‌ನಲ್ಲೇ ಈ ಯೋಜನೆ ರೂಪಿಸಲಾಗಿತ್ತು. ಇಡೀ ಕ್ಯಾಂಪಸ್‌ಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ನಮ್ಮದು’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘7 ಸಾವಿರ ವಿದ್ಯಾರ್ಥಿಗಳು ನಮ್ಮ ಕ್ಯಾಂಪಸ್‌ನಲ್ಲಿದ್ದಾರೆ. ಇವರ ಸುರಕ್ಷತೆಗಾಗಿ ಈ ಯೋಜನೆ ಅನುಷ್ಠಾನ ಗೊಳಿಸಿದ್ದೇವೆ. ಪ್ರತಿಯೊಂದು ವಿಭಾಗ ದಲ್ಲಿ ನಡೆಯುವ ಚಟುವಟಿಕೆಯೂ ದಾಖಲಾಗಲಿದೆ. ಕಂಪ್ಯೂಟರ್‌ ವಿಭಾಗವು ಇದರ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ’ ಎಂದು ಹೇಳಿದರು.

‘ಕೆಲಸ ಬಹುತೇಕ ಮುಗಿದಿದೆ. ಕೋವಿಡ್‌ನಿಂದ ಉದ್ಘಾಟಿಸಿರಲಿಲ್ಲ. 15ರಿಂದ 20 ದಿನದೊಳಗೆ ಇದಕ್ಕೆ ಚಾಲನೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.