ಮೈಸೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿದ್ದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು
ಪ್ರಜಾವಾಣಿ ಸಂಗ್ರಹ ಚಿತ್ರ
ಮೈಸೂರು: ಗುಣಮಟ್ಟದ ಕೊರತೆಯ ನೆಪವೊಡ್ಡಿ ಮೈಸೂರು ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಕ್ರೀಡಾ ಅನುದಾನವನ್ನು ₹60 ಲಕ್ಷದಿಂದ ₹40 ಲಕ್ಷಕ್ಕೆ ಇಳಿಸಿದ್ದು, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ತಂಡಗಳಿಗೂ ಮಿತಿ ಹೇರಿದೆ. ವಿ.ವಿ.ಯ ಈ ನಿರ್ಧಾರಕ್ಕೆ ಕ್ರೀಡಾ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಕ್ರೀಡಾ ಚಟುವಟಿಕೆಗಳಿಗೆ ವಿನಿಯೋಗಿಸುವ ವೆಚ್ಚವನ್ನು ವರ್ಷದಿಂದ ವರ್ಷಕ್ಕೆ ಏರಿಸುವುದು ಸಾಮಾನ್ಯ. ಆದರೆ ಈಚೆಗೆ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವೆಚ್ಚ ಇಳಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ತಂಡಗಳ ಆಯ್ಕೆ, ಸ್ಪರ್ಧೆಗಳ ಆಯೋಜನೆಗೂ ಹತ್ತು ಹಲವು ನಿರ್ಬಂಧ ವಿಧಿಸಲು ವಿಶ್ವವಿದ್ಯಾಲಯವು ಮುಂದಾಗಿದೆ.
ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅಥ್ಲೆಟಿಕ್ಸ್ ಸೇರಿದಂತೆ 28–30 ಕ್ರೀಡೆಗಳಲ್ಲಿ ತಂಡಗಳನ್ನು ಆಯ್ಕೆ ಮಾಡಿ ಆ ತಂಡಗಳನ್ನು ವಿವಿಧ ಮಟ್ಟದಲ್ಲಿನ ಸ್ಪರ್ಧೆಗಳಿಗೆ ಕಳುಹಿಸಲಾಗುತ್ತಿತ್ತು. ಈಗ ಕೇವಲ 8–10 ಕ್ರೀಡೆಗಳಲ್ಲಿ ಮಾತ್ರ ತಂಡಗಳ ಆಯ್ಕೆಗೆ ಸೂಚನೆ ನೀಡಲಾಗಿದೆ.
ಕ್ರಾಸ್ ಕಂಟ್ರಿ, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಕುಸ್ತಿ, ಈಜು ಸೇರಿದಂತೆ ಹಲವು ಸ್ಪರ್ಧೆಗಳನ್ನು ಮೈಸೂರು ವಿಶ್ವವಿದ್ಯಾಲಯವೇ ಆಯೋಜನೆ ಮಾಡುತ್ತ ಬಂದಿದೆ. ಜೊತೆಗೆ 4 ವಲಯ ಮಟ್ಟದಲ್ಲಿ ಅಂತರ ವಲಯ ಕ್ರೀಡಾಕೂಟದಿಂದ ಹಿಡಿದು ಅಂತರ ವಿ.ವಿ.ವರೆಗೆ ಸ್ಪರ್ಧೆಗಳು ನಡೆಯುತ್ತಿವೆ. ಈಗ ಈ ಎಲ್ಲದ್ದಕ್ಕೂ ಅನುದಾನದ ಕೊರತೆ ಆಗಲಿದೆ.
ಕ್ರೀಡಾಪಟುಗಳಿಗೆ ಅವಕಾಶ ವಂಚನೆ:
‘ ವಿಶ್ವವಿದ್ಯಾಲಯದ ಈ ನಿರ್ಧಾರವು ಕ್ರೀಡಾಪಟುಗಳಿಗೆ ಅವಕಾಶ ವಂಚನೆ ಮಾಡಿದಂತೆ ಆಗುತ್ತದೆ. ಕೇವಲ 8–10 ಕ್ರೀಡೆ ಬಿಟ್ಟು ಉಳಿದ ಆಟಗಳಲ್ಲಿ ತಂಡಗಳನ್ನೇ ಸ್ಪರ್ಧೆಗಳಿಗೆ ಸಜ್ಜುಗೊಳಿಸದೇ ಇದ್ದರೆ ಅಂತಹ ಕ್ರೀಡಾಪಟುಗಳಿಗೆ ಅವಕಾಶಗಳು ಕೈ ಚೆಲ್ಲುತ್ತವೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯದ ಕ್ರೀಡಾ ಗುಣಮಟ್ಟ ಇನ್ನಷ್ಟು ಕುಸಿಯುವುದು ಖಂಡಿತ’ ಎಂದು ಪದವಿ ಕಾಲೇಜೊಂದರ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರು ಬೇಸರಿಸುತ್ತಾರೆ.
‘ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕ್ರೀಡೆಗೆ ಪ್ರತಿ ವರ್ಷ ಸಿಗುತ್ತಿರುವ ಅನುದಾನ ಅಷ್ಟಕ್ಕಷ್ಟೇ ಇದೆ. ಈಗ ಅದಕ್ಕೂ ಕೊಕ್ಕೆ ಹಾಕುವುದು ಸರಿಯಲ್ಲ. ವಿಶ್ವವಿದ್ಯಾಲಯ ನಡೆಸಲು ಅನುದಾನದ ಕೊರತೆ ಇದ್ದರೆ ಸರ್ಕಾರದ ಮೊರೆ ಹೋಗಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು’ ಎಂಬುದು ಕ್ರೀಡಾಪಟುಗಳ ಆಗ್ರಹವಾಗಿದೆ.
ಈ ಕುರಿತು ಪ್ರತಿಕ್ರಿಯೆಗೆ ಮೈಸೂರು ವಿ.ವಿ. ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ಕ್ರೀಡೆಗೆ ಅನುದಾನ ಹಂಚಿಕೆ ವಿಶ್ವವಿದ್ಯಾಲಯದ ತೀರ್ಮಾನ. ಇದೇ 22ರಂದು ಈ ಕುರಿತು ಸಭೆ ಆಯೋಜಿಸಿದ್ದು ಅಲ್ಲಿ ಚರ್ಚಿಸಲಾಗುವುದುಸಿ. ವೆಂಕಟೇಶ್ ಉಪನಿರ್ದೇಶಕ ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿ.ವಿ.
ವಿ.ವಿ.ಗೆ ಸಿಗುವ ಆದಾಯವೆಷ್ಟು?:
ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಕ್ರೀಡಾ ಶುಲ್ಕ ವಿವಿಧ ಕ್ರೀಡಾಂಗಣಗಳ ಬಾಡಿಗೆ ಸೇರಿದಂತೆ ಮೈಸೂರು ವಿ.ವಿ.ಗೆ ಕ್ರೀಡಾ ಮೂಲದಿಂದಲೇ ವಾರ್ಷಿಕ ಸುಮಾರು ₹2 ಕೋಟಿಯಷ್ಟು ಹಣ ಸಂಗ್ರಹವಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳಿಗೆ ಪ್ರತಿ ವರ್ಷ ಸರಾಸರಿ 30–35 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೀಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗೂ ಕ್ರೀಡಾ ಉನ್ನತೀಕರಣ ಶುಲ್ಕದ ಹೆಸರಿನಲ್ಲಿ ₹385 ಶುಲ್ಕ ವಿಧಿಸಲಾಗುತ್ತದೆ. ಮೈಸೂರು ವಿ.ವಿ. ನೇರ ಅಧೀನದಲ್ಲಿರುವ ಮಹಾರಾಜ ಯುವರಾಜ ಪದವಿ ಕಾಲೇಜು ಹಾಗೂ ಮಾನಸಗಂಗೋತ್ರಿಯ ವಿಭಾಗಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ಶುಲ್ಕವು ₹500 ರಷ್ಟಿದೆ. ಇದರಿಂದಲೇ ಮೈಸೂರು ವಿ.ವಿ.ಗೆ ವಾರ್ಷಿಕ ₹1.25 ಕೋಟಿಯಷ್ಟು ಹಣ ಬರುತ್ತಿದೆ. ಇದಲ್ಲದೇ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣಕ್ಕೆ ಕೆಎಸ್‌ಸಿಎ ವಾರ್ಷಿಕ ಬಾಡಿಗೆ ರೂಪದಲ್ಲಿ ₹15 ಲಕ್ಷ ಹಣವನ್ನು ವಿ.ವಿ.ಗೆ ನೀಡುತ್ತಿದೆ. ಜೊತೆಗೆ ಮೈಸೂರು ವಿ.ವಿ. ಸ್ಪೋರ್ಟ್ಸ್ ಪೆವಿಲಿಯನ್ ಒಳಾಂಗಣ ಕ್ರೀಡಾಂಗಣ ಈಜುಕೊಳ ಮೊದಲಾದವುಗಳ ಬಾಡಿಗೆ ಆದಾಯವೂ ವಿಶ್ವವಿದ್ಯಾಲಯದ ಖಾತೆಗೆ ಸೇರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.