
ಮೈಸೂರು: ಮಲೆನಾಡಿನ ಹಸೆ ಚಿತ್ತಾರಗಳು, ಅಡಿಕೆ ಮರದ ದಬ್ಬೆಯಲ್ಲಿ ಮೂಡಿದ ಅಮೆರಿಕನ್ ಟಾರ್ಟೂನ್ಸ್, ಮಹಾರಾಷ್ಟ್ರದ ವಾರ್ಲಿ ಪೇಂಟಿಂಗ್ಸ್, ಕಲಬುರಗಿಯ ಎಂಎಂಕೆ ವಿಶುವಲ್ ಆರ್ಟ್ಸ್ ಕಾಲೇಜು ಹುಡುಗರ ಪೆನ್ಸಿಲ್ ಸ್ಕೆಚ್, ಒಂದೇ ಎರಡೇ.. ಹೀಗೆಯೇ ಸಾಗುತ್ತದೆ ಚಿತ್ರದಂಗಡಿ ಸಾಲು...
ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಮಾನಸಗಂಗೋತ್ರಿಯ ಆವರಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ‘ಮೈಸೂರು ಉತ್ಸವ’ದ ಅಂಗವಾಗಿ ನಡೆದ ಚಿತ್ರ ಸಂತೆಯಲ್ಲಿ ಇವೆಲ್ಲ ಕಂಡುಬಂದವು. ಸಾಂಪ್ರದಾಯಿಕ ಮತ್ತು ಆಧುನಿಕ ಚಿತ್ರಕಲೆಗಳ ಮಿಶ್ರಣವನ್ನೆ ಜನರೆದುರು ಸಂತೆ ತೆರೆದಿಟ್ಟಿತು.
ಅಕ್ರಿಲಿಕ್, ಆಯಿಲ್ ಪೇಂಟ್, ವಾಟರ್ ಪೇಂಟ್‌ನಲ್ಲಿ ಮೂಡಿಬಂಡ ಸ್ಟಿಲ್ ಲೈಫ್ ಚಿತ್ರಗಳು, ಅಮೂರ್ತ ಕಲೆಗಳು, ದೇವ– ದೇವತೆಯರು ಹಾಗೂ ಪ್ರಕೃತಿಯ ಅಪರಿಮಿತ ಸೌಂದರ್ಯದ ಚಿತ್ರಗಳು ನೋಡುಗರನ್ನು ಗಮನಸೆಳೆದವು. ಕೆಲವು ಕಲಾವಿದರು ಸ್ಥಳದಲ್ಲೇ ಚಿತ್ರ ಬರೆದುಕೊಡುವ ಆಹ್ವಾನವನ್ನು ನೀಡುತ್ತಿದ್ದರು.
ಒಟ್ಟು 114 ಮಳಿಗೆಗಳಲ್ಲಿ ಮೈಸೂರಿನ ಸಾಂಪ್ರದಾಯಿಕ ಚಿತ್ರಗಳು ಸೇರಿದಂತೆ ದೇಶದ ವಿವಿಧ ಭಾಗದ ಚಿತ್ರಕಲೆಗಳು ಪ್ರದರ್ಶನಗೊಂಡವು.
ಕರಕುಶಲ ವಸ್ತುಗಳಿಗೂ ವೇದಿಕೆ: ಆಕರ್ಷಕ ಚಿತ್ರಗಳನ್ನು ಬರೆದಿದ್ದ ಕೈಚೀಲಗಳು, ಶಾಲುಗಳು ಮಾರಾಟಕ್ಕಿದ್ದವು. ಮರದ ಅಲಂಕಾರಿಕ ವಸ್ತುಗಳು, ಮಣ್ಣಿನ ಕುಂಬಾರಿಕೆಯ ಉತ್ಪನ್ನಗಳು, ಕಬ್ಬಿಣದ ಪುಟಾಣಿ ಬೈಕ್‌ಗಳು ಗಮನಸೆಳೆದವು.
ಆಹಾರ ಮೇಳದ ಘಮ: ಚಿಕ್ಕಪೇಟೆ ದೊನ್ನೆ ಬಿರಿಯಾನಿ, ಮೇಲುಕೋಟೆ ಪುಳಿಯೋಗರೆ ಪರಿಮಳ ಗಂಗೋತ್ರಿಯ ಕ್ಲಾಕ್ ಟವರ್ ಬಳಿಯ ಮೈದಾನವನ್ನು ವ್ಯಾಪಿಸಿತ್ತು. ವಿವಿಧ ಹಣ್ಣಿನ ಕುಲ್ಫಿಗಳು, ಶೂನ್ಯ ತ್ಯಾಜ್ಯದ ಹಣ್ಣಿನ ರಸಗಳು, ಮಿಲ್ಲೆಟ್ಸ್ ಪಾಯಸ, ಪೇಯಗಳಿಗೆ ಜನರು ಮುಗಿಬಿದ್ದರು. ಬೆಳಿಗ್ಗೆ ಆರಂಭವಾಗಿದ್ದ ಕೆಲವೇ ಮಳಿಗೆಯಲ್ಲಿಯೇ ಜನದಟ್ಟಣೆ ಇತ್ತು.
ಫ್ಲೀ ಮಾರುಕಟ್ಟೆ ಆಕರ್ಷಣೆ: ಬಯಲು ರಂಗಮಂದಿರಕ್ಕೆ ತೆರಳುವ ರಸ್ತೆಯಲ್ಲಿ ನಿರ್ಮಿಸಿರುವ ಫ್ಲೀ ಮಾರುಕಟ್ಟೆಯ ವಿವಿಧ ಬಗೆಯ ವಸ್ತುಗಳಿಂದ ಜನರನ್ನು ಆಕರ್ಷಿಸಿತು. ಕರಕುಶಲ ಆಭರಣಗಳು, ಬ್ಯಾಗ್‌ಗಳು, ವಿನ್ಯಾಸಕಾರು ಸಿದ್ಧಪಡಿಸಿದ ಉಡುಪುಗಳು ಮಹಿಳೆಯರ ಗಮನಸೆಳೆದವು.
30 ಮಳಿಗೆಗಳಲ್ಲಿ ಆಹಾರ ಉತ್ಪನ್ನ, ಪೂಜಾ ಸಾಮಗ್ರಿ, ಲಿಡ್ಕರ್ ಉತ್ಪನ್ನ, ಚಿತ್ತಾರವುಳ್ಳ ಮರದ ಪೀಠೋಪಕರಣ, ಗಿಡ ಮೂಲಿಕೆ ವಸ್ತು ಸೇರಿದಂತೆ ಅನೇಕ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಗೊಂಡವು. ದಸರಾದಲ್ಲಿದ್ದಂತೆಯೇ ಜನರಿಗೆ ಮಾಹಿತಿ ನೀಡಲು ರೇಡಿಯೊ ರೂಂ ಕೂಡ ಮಾಡಲಾಗಿದೆ.
ಭಾವ ಗೀತೋತ್ಸವ: ಕ್ಲಾಕ್ ಟವರ್ ಬಳಿಯ ವೇದಿಕೆಯಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ ಸಾರಥ್ಯದಲ್ಲಿ ಸಂಜೆ ಭಾವ ಗೀತೋತ್ಸವ ಕಾರ್ಯಕ್ರಮ ನಡೆಯಿತು. ‘ನಿನ್ನ ಪ್ರೇಮದ ಪರಿಯ’, ‘ಇರಬೇಕು ಇರುವಂತೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’... ಮೊದಲಾದ ಹಾಡುಗಳು ಕೇಳುಗರನ್ನು ಭಾವಲೋಕದಲ್ಲಿ ತೇಲಿಸಿದವು.
ಹೂವು ಹಣ್ಣು ಸಿನಿಮಾದ ನಿಂಗಿ ನಿಂಗಿ ಗೀತೆ ಪ್ರೇಕ್ಷಕರನ್ನು ರಂಜಿಸಿತು. ನಿತಿನ್ ರಾಜರಾಮ್‌ಶಾಸ್ತ್ರಿ ಮತ್ತು ಚಿಂತನ್ ವಿಕಾಸ್ ಅವರು ಹಾಡಿದ ‘ಕುರಿಗಳು ಸಾರ್ ಕುರಿಗಳು’ ಗೀತೆಯು ಪ್ರೇಕ್ಷಕರಿಂದ ಜೋರು ಚಪ್ಪಾಳೆ ಗಿಟ್ಟಿಸಿತು. ಶ್ರುತಿ ತುಮಕೂರು ಅವರ ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ’ ಗೀತೆಯು ಭಾವಪೂರ್ಣವಾಗಿತ್ತು. ಋತ್ವಿಕ್ ಸಿ.ರಾಜ್. ಪ್ರಭು ಸೊನ್ನ ಮೊದಲಾದವರು ಹಾಡಿದರು.
Highlights - ಕ್ಲಾಕ್‌ಟವರ್ ರಸ್ತೆ ಚಿತ್ರ ಪ್ರದರ್ಶನ ಆಹಾರಪ್ರಿಯರನ್ನು ಸೆಳೆದ ಫುಡ್ ಫೆಸ್ಟ್ ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಚಿತ್ರಕಲೆಯಲ್ಲಿ ನಾನು ಆಸಕ್ತಿ ಹೊಂದಿದ್ದು ಚಿತ್ರ ಸಂತೆಯಲ್ಲಿನ ವಿವಿಧ ಕಲಾಕೃತಿಗಳಿಂದ ಹೊಸ ಮಾಹಿತಿ ದೊರೆಯಿತು ವೈಷ್ಣವಿ ಮಂಡಿ ಮೊಹಲ್ಲಾ
‘ಬ್ರ್ಯಾಂಡ್ ಮೈಸೂರಿಗೆ ಉತ್ಸವ ಪೂರಕ’
‘ಮೈಸೂರಿನ ಸಾಂಸ್ಕೃತಿಕ ಧಾರ್ಮಿಕ ಚಾರಿತ್ರಿಕ ವಿಚಾರ ತಿಳಿಸುವ ಪ್ರವಾಸೋದ್ಯಮ ರೂಪುಗೊಳ್ಳಬೇಕು. ಬ್ರ್ಯಾಂಡ್ ಮೈಸೂರು ಕಲ್ಪನೆಗೆ ಉತ್ಸವ ಜತೆಯಾಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಮೈಸೂರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಚಿತ್ರಸಂತೆ ಒಂದು ವಿನೂತನ ಪ್ರಯತ್ನ. ಕಲಾವಿದರನ್ನು ಪ್ರೋತ್ಸಾಹಿಸಿ ಮಾರುಕಟ್ಟೆ ಸೃಷ್ಟಿಸುವ ಕೆಲಸ ಇದರಿಂದ ಸಾಧ್ಯ. ಇನ್ನಷ್ಟು ಇಂಥಾ ಕಾರ್ಯಕ್ರಮವಾಗಬೇಕು. ನಗರದ ‘ಕಾವಾ’ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ಅದಕ್ಕೆ ಹೊಸತನ ನೀಡಲು ಪ್ರಯತ್ನಿಸಬೇಕು’ ಎಂದರು. ‘ಜಾತಿ ಮತ್ತು ಕೋಮು ಸೌಹಾರ್ದ ಯುವಜನರ ಬದುಕಾಗಬೇಕು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ವಿಷಯಗಳು ರಾಜಕೀಯ ನಾಯಕರ ಕೈ ಸೇರದಂತೆ ಜನರು ಎಚ್ಚರ ವಹಿಸಬೇಕು. ಅಂಥ ಸಂದರ್ಭ ಎದುರಾದರೆ ತಡೆಯುವ ಕೆಲಸಕ್ಕೂ ಮುಂದಾಗಬೇಕು’ ಎಂದು ಕೋರಿದರು. ಇದಕ್ಕೂ ಮುನ್ನ ಅತಿಥಿಗಳನ್ನು ಗಂಗೋತ್ರಿಯ ಪ್ರವೇಶ ದ್ವಾರದಿಂದ ಅಶ್ವದಳ ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಕ್ಲಾಕ್ ಟವರ್ ವೇದಿಕೆಯ ಬಳಿಗೆ ಕರೆತರಲಾಯಿತು. ಶಾಸಕ ತನ್ವೀರ್ ಸೇಠ್ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ ನಗರ ಪೋಲಿಸ್ ಆಯುಕ್ತ ರಮೇಶ್ ಬಾನೋತ್ ಎಸ್ಪಿ ಸೀಮಾ ಲಾಟ್ಕರ್ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.