ADVERTISEMENT

ಮೈಸೂರು ಜಿ.ಪಂ ಅಧ್ಯಕ್ಷೆ ನಯೀಮಾ, ಉಪಾಧ್ಯಕ್ಷ ನಟರಾಜು ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 10:37 IST
Last Updated 21 ಡಿಸೆಂಬರ್ 2018, 10:37 IST

ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆಡಿಎಸ್‌ನ ನಯೀಮಾ ಸುಲ್ತಾನಾ ಮತ್ತು ಉಪಾಧ್ಯಕ್ಷ ಬಿಜೆಪಿಯ ಜಿ.ನಟರಾಜು ಅವರು ತಮ್ಮ ಸ್ಥಾನಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಉಪಾಧ್ಯಕ್ಷ ನಟರಾಜು ಅವರು ರಾಜೀನಾಮೆ ಪತ್ರವನ್ನು ಅಧ್ಯಕ್ಷೆ ನಯೀಮಾ ಅವರಿಗೆ ಸಲ್ಲಿಸಿದರು. ನಯೀಮಾ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದರು. ಇವರಿಬ್ಬರು ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರೂ, ಬಳಿಕ ವಾಪಸ್‌ ಪಡೆದುಕೊಂಡಿದ್ದರು.

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಆಡಳಿತವಿದೆ. ಪಕ್ಷದಲ್ಲಿ ಆದ ಒಪ್ಪಂದದಂತೆ 20 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ನೀಡುವಂತೆ ನಯೀಮಾ ಅವರಿಗೆ ಸೂಚಿಸಲಾಗಿತ್ತು. ನಿಗದಿತ ಅವಧಿ ಮುಗಿದರೂ ಅವರು ರಾಜೀನಾಮೆ ನೀಡಿರಲಿಲ್ಲ. ಇದರಿಂದ ರಾಜೀನಾಮೆ ನೀಡುವಂತೆ ಪಕ್ಷದಲ್ಲೇ ಅವರ ಮೇಲೆ ಒತ್ತಡವಿತ್ತು. ಇದೀಗ 30 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ನೀಡಿದ್ದಾರೆ.

ADVERTISEMENT

‘ರಾಜೀನಾಮೆ ನೀಡುವಂತೆ ಒತ್ತಡವಿದ್ದರೂ, ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಅಧ್ಯಕ್ಷಳಾಗಿ 30 ತಿಂಗಳು ಆಡಳಿತ ನಡೆಸಿದ ತೃಪ್ತಿಯಿದೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ’ ಎಂದು ನಯೀಮಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.