ಮೈಸೂರು: ಮೈಸೂರು ಭಾಗಕ್ಕೆ ಸ್ವಾತಂತ್ರ್ಯ ದೊರೆಯಲು ಕಾರಣವಾದ ಮೈಸೂರು ಚಲೋ ಚಳವಳಿಯ ಸ್ಮರಣಾರ್ಥ ಕಾರ್ಯಕ್ರಮ, ನಗರದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನದಲ್ಲಿ ಗುರುವಾರ ನಡೆಯಿತು.
ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಹೋರಾಟದ ಹಾದಿಯನ್ನು ನೆನೆದರು.
ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ (ಸುಬ್ಬರಾಯನ ಕೆರೆ)ದಲ್ಲಿ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಮಾತನಾಡಿ, ‘1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿನಲ್ಲಿ ರಾಜಮನೆತನದ ಆಡಳಿತವಿತ್ತು. ಆ ಬಳಿಕ ಹಳೇ ಮೈಸೂರು ರಾಜ್ಯದಲ್ಲಿಯೂ ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತರಬೇಕೆಂದು ತೀವ್ರ ಹೋರಾಟ ಆರಂಭಗೊಂಡ ಹಿನ್ನೆಲೆಯಲ್ಲಿ, ಆ.24ರಂದು ಹಳೆ ಮೈಸೂರು ಪ್ರಾಂತ್ಯದಲ್ಲಿ ರಾಜರ ಆಳ್ವಿಕೆ ಕೊನೆಗೊಳಿಸಿ ತ್ರಿವರ್ಣ ಧ್ವಜ ಹಾರಿಸಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.’
‘ಇದಕ್ಕಾಗಿ ಸೆ.1ರಿಂದ ಅ.14ರವರೆಗೆ ಮೈಸೂರು ಚಲೋ ಚಳವಳಿ ನಡೆದದ್ದು ಈಗ ಇತಿಹಾಸ. ರಾಜಾಳ್ವಿಕೆ ಕೊನೆಯಾಗಿ ಜನಪರ ಸರ್ಕಾರ ರಚನೆಯಾದದ್ದು 1947ರ ಅ.24ರಂದು. ಹಾಗಾಗಿ, ಆ ದಿನವನ್ನು ಮೈಸೂರು ಚಲೋ ದಿನವೆಂದು ಆಚರಿಸಲಾಗುತ್ತದೆ’ ಎಂದು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಿ.ಎಚ್.ಜಗದೀಶ್, ಸಿ.ಆರ್.ರಂಗಶೆಟ್ಟಿ, ಪುಟ್ಟಣ್ಣ, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.