
ಮೈಸೂರು: ತಾಲ್ಲೂಕಿನ ಇಲವಾಲ ಹೋಬಳಿಯ ಯಲಚಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ವಸ್ತುಸಂಗ್ರಹಾಲಯ (ಮ್ಯೂಸಿಯಂ) ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ.
ಇದಕ್ಕಾಗಿ ಆ ಗ್ರಾಮದಲ್ಲಿನ ಸರ್ವೇ ನಂ.24ರಲ್ಲಿ 10 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಅದನ್ನು ಕಂದಾಯ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ.
‘ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸಲು ಮತ್ತು ಪ್ರಚುರಪಡಿಸಲು, ತರಬೇತಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಸಂಶೋಧನೆಗೆ ಅನುವಾಗುವಂತೆ ಕಾರ್ಯನಿರ್ವಹಿಸುವುದಕ್ಕಾಗಿ ವಸ್ತುಸಂಗ್ರಹಾಲಯ (ಮ್ಯೂಸಿಯಂ) ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಮೈಸೂರಿನವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಎಚ್.ಸಿ. ಮಹದೇವಪ್ಪ ಅವರ ಪರಿಕಲ್ಪನೆಯ ಯೋಜನೆ ಇದಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಸೆಳೆಯುವುದಕ್ಕಾಗಿ:
ಯೋಜನೆಗೆ ₹ 10 ಕೋಟಿ ಒದಗಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಅಂಬೇಡ್ಕರ್ ಅನುಯಾಯಿಗಳನ್ನು ಸೆಳೆಯುವುದು ಈ ಮೂಲಕ ಪ್ರವಾಸೋದ್ಯಮ ಕೇಂದ್ರವನ್ನಾಗಿಯೂ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಲಬುರಗಿಯಲ್ಲಿರುವ ‘ಬುದ್ಧ ವಿಹಾರ’ದ ಮಾದರಿಯಲ್ಲಿ ‘ಅಂಬೇಡ್ಕರ್ ವಿಹಾರ’ದಂತೆ ಇದು ರೂಪಗೊಳ್ಳಬೇಕು ಎನ್ನುವುದು ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಆಶಯವಾಗಿದೆ. ಮ್ಯೂಸಿಯಂ ಏನೆಲ್ಲಾ ಒಳಗೊಂಡಿರಬೇಕು ಎಂಬ ಸ್ಪಷ್ಟವಾದ ಕ್ರಿಯಾಯೋಜನೆಯನ್ನು ಅವರ ಮಟ್ಟದಲ್ಲೇ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಈಗಾಗಲೇ ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರವು ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನಸಗಂಗೋತ್ರಿಯಲ್ಲಿ ರಚನಾತ್ಮಕ ಹಾಗೂ ಶೈಕ್ಷಣಿಕ ನೆಲೆಗಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜಾಗೃತಿಯ ಬೆಳಕನ್ನು ಚೆಲ್ಲುತ್ತಿದೆ. ಇದಕ್ಕೆ ಪೂರಕವಾಗಿ ಅಥವಾ ಮತ್ತೊಂದಷ್ಟು ಹೆಜ್ಜೆಗಳು ಮುಂದೆ ಹೋಗಿ ಅಂಬೇಡ್ಕರ್ ಅವರನ್ನು ಪರಿಚಯಿಸಿಕೊಡಬೇಕು ಮತ್ತು ಅವರ ಕೊಡುಗೆಗಳನ್ನು ತಿಳಿಸಿಕೊಡಬೇಕು, ಅಂಬೇಡ್ಕರ್ ಪ್ರಜ್ಞೆಯನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ಮ್ಯೂಸಿಯಂ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕೊಡುಗೆ:
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯಲಚಹಳ್ಳಿಯಲ್ಲಿ ಈಗಾಗಲೇ ತೋಟಗಾರಿಕೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಅಲ್ಲಿಗೆ ಸಮೀಪದಲ್ಲೇ ಮೈಸೂರು–ಕುಶಾಲನಗರ ಹೆದ್ದಾರಿಯೂ ನಿರ್ಮಾಣಗೊಳ್ಳುತ್ತಿದೆ. ಇದೀಗ, ಅಂಬೇಡ್ಕರ್ ಸ್ಮಾರಕ ಮ್ಯೂಸಿಯಂ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಾಣಗೊಂಡರೆ ಆ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚುರುಕುಗೊಳ್ಳುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕಂದಾಯ ಇಲಾಖೆಯಿಂದ ಜಾಗ ಮಂಜೂರು ₹ 10 ಕೋಟಿ ಮೊತ್ತದ ಯೋಜನೆ ಅಂಬೇಡ್ಕರ್ ಜೀವನ–ಸಾಧನೆ ತಿಳಿಸುವ ಆಶಯ
ಆಶಯವೇನು?
ನಗರದ ದಿವಾನ್ಸ್ ರಸ್ತೆ ಬಳಿಯ ದೇವರಾಜ ಪೊಲೀಸ್ ಠಾಣೆ ಸಮೀಪದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ₹ 23.83 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಇದೀಗ ಅಂಬೇಡ್ಕರ್ ಸ್ಮಾರಕ ಮ್ಯೂಸಿಯಂ ಸ್ಥಾಪನೆಯ ಕನಸನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬಿತ್ತಲಾಗಿದೆ. ಅಲ್ಲಿ ಅಂಬೇಡ್ಕರ್ ಅವರ ಜೀವನ–ಸಾಧನೆ ತಿಳಿಸುವ ಕೆಲಸ ಮಾಡಲಾಗುವುದು. ಅವರ ಜೀವನವನ್ನು ಬಿಂಬಿಸುವ ಅಪರೂಪದ ಫೋಟೊಗಳು ಸನ್ನಿವೇಶಗಳನ್ನು ತಿಳಿಸುವ ಕಾರ್ಯವೂ ಅಲ್ಲಿ ನಡೆಯಬೇಕು ಸಂವಿಧಾನವೇ ಬೆಳಕು ಎಂಬುದನ್ನು ಪ್ರತಿಪಾದಿಸುವ ಕಾರ್ಯಕ್ರಮಗಳು ನಡೆಯಬೇಕು ಎಂಬ ಆಶಯವನ್ನು ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.