ADVERTISEMENT

ಜಾತಿ ಗಣತಂತ್ರ ಆಗುತ್ತಿರುವ ಭಾರತ: ಕೋಟಿಗಾನಹಳ್ಳಿ ರಾಮಯ್ಯ ಕಳವಳ

ಮೋಹನ್ ಕುಮಾರ ಸಿ.
Published 19 ಜನವರಿ 2026, 4:21 IST
Last Updated 19 ಜನವರಿ 2026, 4:21 IST
ಮೈಸೂರಿನ ರಂಗಾಯಣದಲ್ಲಿ ಭಾನುವಾರ ಮುಕ್ತಾಯವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ವಿಚಾರಸಂಕಿರಣದ ಸಮಾರೋ‍ಪದಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಎಂ.ಡಿ.ಸುದರ್ಶನ, ಕೆ.ಆರ್.ನಂದಿನಿ, ಪ್ರೊ.ಜೆ.ಸೋಮಶೇಖರ್, ‌ಸತೀಶ್‌ ತಿಪಟೂರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ 
ಮೈಸೂರಿನ ರಂಗಾಯಣದಲ್ಲಿ ಭಾನುವಾರ ಮುಕ್ತಾಯವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ವಿಚಾರಸಂಕಿರಣದ ಸಮಾರೋ‍ಪದಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಎಂ.ಡಿ.ಸುದರ್ಶನ, ಕೆ.ಆರ್.ನಂದಿನಿ, ಪ್ರೊ.ಜೆ.ಸೋಮಶೇಖರ್, ‌ಸತೀಶ್‌ ತಿಪಟೂರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ    

ಮೈಸೂರು: ಸಂವಿಧಾನ ನಿರ್ಮಾತೃ ಮಾತ್ರವಾಗಿ ಅಲ್ಲದೇ ಆರ್ಥಿಕ, ಸಾಮಾಜಿಕ, ಅಭಿವೃದ್ಧಿ, ಮಹಿಳಾ ಚಳವಳಿ ಸೇರಿದಂತೆ ಬಹು ಆಯಾಮಗಳಲ್ಲಿ ಅಂಬೇಡ್ಕರ್‌ ಅವರನ್ನು ಭಾನುವಾರ ಇಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಗೋಷ್ಠಿಗಳಲ್ಲಿ ಹುಡುಕಾಟ ನಡೆಸಲಾಯಿತು.

ವಿಷಯ ಮಂಡನೆ ಮಾಡಿದವರೂ, ಕೇಳಿದವರು ‘ಅಂಬೇಡ್ಕರ್ ದರ್ಶನ’ದಲ್ಲಿ ಕಿಚ್ಚನ್ನು ಪಡೆದು ಬೆಳಕನ್ನು ಎದೆಗಿಳಿಸಿಕೊಂಡರು. ಪ್ರಶ್ನೆಗಳನ್ನು ಕೇಳಿದ ಪ್ರೇಕ್ಷಕರು ಚರ್ಚೆಯನ್ನು ವಿಸ್ತರಿಸಿದರು. 

ಸಮಾರೋಪದ ನುಡಿಯಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ, ‘ಭಾಷಣಗಳು ಬೀದಿ ಹೋರಾಟಗಳಾಗಬೇಕು. ನುಡಿಗಳು ನಡೆಗಳಾದಾಗ ಇಂಥ ವಿಚಾರ ಸಂಕಿರಣಗಳಿಗೆ ಅರ್ಥ ಬರುತ್ತದೆ’ ಎಂದು ಎಚ್ಚರಿಸಿದರು. 

ADVERTISEMENT

‘ಬೌದ್ಧಿಕರ ಹೋರಾಟವು ಭಾಷಣಗಳಿಗೆ ಸೀಮಿತವಾದರೆ ಚಿಂತಕರ ಸ್ವಹಿತಕ್ಕೆ ಮಾಡುವ ಚಳವಳಿ ಆಗುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಇನ್ನೂ ಏಕೆ ದೇಶಕ್ಕೆ ಸಾಧ್ಯವಾಗಿಲ್ಲ. ಪ್ರತಿ ಭಾರತೀಯನು ಜಾತಿಯನ್ನು ಸಾಮಾಜಿಕ ಮೌಲ್ಯವೆಂದೇ ಪರಿಗಣಿಸಿರುವಾಗ ಅವನಿಂದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

ಜಾತಿ ಗಣತಂತ್ರ:

‘ಭಾರತವು ಸಾರ್ವಭೌಮ ಗಣರಾಜ್ಯದ ಬದಲು ಜಾತಿ ಗಣತಂತ್ರವಾಗುತ್ತಿದೆ. ಶೇ 60ರಷ್ಟು ಸಂಪತ್ತು 10 ಜನರಲ್ಲಿ ಸಂಗ್ರಹವಾಗಿದೆ. ಈ ಅಸಮಾನತೆಯ ಶ್ರೇಣೀಕರಣವು ಅಪಾರ ಬಂಡವಾಳ ಮತ್ತು ತಂತ್ರಜ್ಞಾನದ ಮೂಲಕ ಬ್ರಾಹ್ಮಣ ದಿಗ್ವಿಜಯಕ್ಕೆ ದಾರಿ ಮಾಡಿಕೊಟ್ಟಿದೆ’ ಎಂದು ರಾಮಯ್ಯ ದೂರಿದರು. 

‘ಬಾಬಾಸಾಹೇಬರ ಜೀವನದ ಐದು ಸ್ಥಳಗಳನ್ನು ಪಂಚತೀರ್ಥವೆಂದು ಹೇಳಿ ಯಾತ್ರೆ ಮಾಡಿಸುತ್ತಿದ್ದಾರೆ. ಸಾಮರಸ್ಯದ ಅಂಬೇಡ್ಕರ್‌ ಆಗಿ ಬಿಂಬಿಸಿ ಸಂವಿಧಾನ ವಿರೋಧಿಗಳು ಅವರನ್ನು ಅಪಹರಿಸುತ್ತಿದ್ದಾರೆ. ಇದು ದ್ರೋಹವಲ್ಲದೇ ಮತ್ತೇನು’ ಎಂದು ಪ್ರಶ್ನಿಸಿದರು. 

ಬಹುತ್ವದ ಭಾರತ ಉಳಿಸಬೇಕು:

‘ಬಾಬಾ ಸಾಹೇಬರ ಇಡೀ ಚಿಂತನೆಯಲ್ಲಿ ಜ್ಞಾನದ ಬಹುತ್ವವಿದೆ. ಸಂವಿಧಾನದಲ್ಲೂ ಬಹುತ್ವದ ಆಯಾಮವಿದೆ. ಭಾರತದ ಬಹುತ್ವ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಿದೆ’ ಎಂದು ವಿಮರ್ಶಕ ರಹಮತ್ ತರೀಕೆರೆ ಪ್ರತಿಪಾದಿಸಿದರು. 

ವನರಂಗದಲ್ಲಿ ತುಮಕೂರಿನ ಜಿಗುರು ಪ್ರದರ್ಶಕ ಕಲೆಗಳ ಕೇಂದ್ರದ ಕಲಾವಿದರು ‘ರುಮು ರುಮು ರುಮು’ ನಾಟಕ ‍ಪ್ರಸ್ತುತಪಡಿಸಿದರು. 

‘ಜನಪದ ಚಳವಳಿಗಳ ಪ್ರತಿರೋಧ ಮತ್ತು ಅಭಿವೃದ್ಧಿ’ ಕುರಿತು ನಿವೃತ್ತ ಮೇಜರ್ ಜನರ್ ಸುಧೀರ್ ಜಿ.ಒಂಭತ್ಕೆರೆ, ‘ಕಾರ್ಮಿಕರ ಸುಧಾರಣೆ’ ಕುರಿತು ಹೋರಾಟಗಾರ್ತಿ ಆರ್.ಪ್ರತಿಭಾ ವಿಷಯ ಮಂಡಿಸಿದರು.  

ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು‌ ವಿಸ್ತರಣಾ ಕೇಂದ್ರದ ನಿರ್ದೇಶಕ ಸಾಬೀರ್ ಅಹ್ಮದ್ ಮುಲ್ಲಾ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಉಪ ನಿರ್ದೇಶಕ ಎಂ.ಡಿ.ಸುದರ್ಶನ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಪ್ರೊ.ಜೆ.ಸೋಮಶೇಖರ, ವಿಚಾರಸಂಕಿರಣದ ಸಂಯೋಜಕಿ‌ ಕೆ.ಆರ್.ನಂದಿನಿ ಪಾಲ್ಗೊಂಡಿದ್ದರು.   

ತೆಲಂಗಾಣದ ಲಂಬಾಡಿ ನೃತ್ಯದ ಝಲಕ್
‘ಭಾರತದ ಆರ್ಥಿಕತೆಯ ಅಡಿಪಾಯ’
‘ಅಂಬೇಡ್ಕರ್ ಆರ್ಥಿಕ ಚಿಂತನೆಗಳು ಅನುಷ್ಠಾನ’ ಕುರಿತು ಮಾತನಾಡಿದ ಆರ್ಥಿಕ ತಜ್ಞ ಪ್ರೊ.ಕೆ.ಎಸ್‌.ಚಲಂ ‘ರೂಪಾಯಿ ಸಮಸ್ಯೆ ಕುರಿತ ಪ್ರಬಂಧವು ಆಧುನಿಕ ಭಾರತದ ಆರ್ಥಿಕತೆಯ ಅಡಿಪಾಯವನ್ನು ಹಾಕಿತು. ಗೋಲ್ಡ್‌ ಸ್ಟ್ಯಾಂಡರ್ಡ್ ಲೀಗಲ್‌ ಟೆಂಡರ್ ವಿದೇಶಿ ವಿನಿಮಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿತು. ರಿಸರ್ವ್‌ ಬ್ಯಾಂಕ್‌ ಸ್ಥಾಪನೆಗೂ ಕಾರಣವಾಯಿತು’ ಎಂದು ಸ್ಮರಿಸಿದರು.  ಕೋಮುವಾದದ ಪಾಠಶಾಲೆಗಳು: ‘ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಕೋಮುವಾದದ ಪಾಠಶಾಲೆಗಳಾಗುತ್ತಿವೆ. ಆ್ಯಂಟನಿಯೊ ಗ್ರಾಮ್ಶಿ ಹೇಳಿದ ಸಾಂಸ್ಕೃತಿಕ ಯಜಮಾನೀಕರಣ ಪ್ರತಿಪಾದಿಸುವ ಕೇಂದ್ರಗಳಾಗುತ್ತಿವೆ’ ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು. ‘ತಳ ಸಮುದಾಯಗಳ ಸಾಂಸ್ಕೃತಿಕ ಪ್ರತಿರೋಧ’ ಕುರಿತು ಮಾತನಾಡಿದರು. ಪ್ರೊ.ಟಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. 
‘ವಸಾಹತೀಕರಣ ಜೀವಂತ’ 
‘ಅಂಬೇಡ್ಕರ್‌ ಮತ್ತು ಆಧ್ಯಾತ್ಮಿಕ ವಿಮೋಚನೆ’ ಕುರಿತು ಬೈಲುಕುಪ್ಪೆಯ ಮಾತನಾಡಿದ ಅವರು ‘ಶಿಕ್ಷಣ ಸಂಘಟನೆ ಹೋರಾಟ ಎಂಬ ಅಂಬೇಡ್ಕರ್ ತತ್ವಗಳು ಆಧ್ಯಾತ್ಮದ ಕ್ರಾಂತಿದೀಪಗಳಾಗಿವೆ’ ಎಂದರು.  ವಿಮರ್ಶಕ ನಟರಾಜ ಬೂದಾಳು ಮಾತನಾಡಿ ‘ದೇಶದ ಎಲ್ಲೆಲ್ಲೂ ಕಾಲೊನಿಗಳಿವೆ. ಕೇವಲ ದಲಿತರ ಕಾಲೊನಿಗಳಲ್ಲ. ತುಳಿಯವವರು ತುಳಿಸಿಕೊಳ್ಳುವವರ ಕಾಲೊನಿಗಳಿವೆ. ದಕ್ಷಿಣ ಭಾರತವು ಉತ್ತರ ವೈದಿಕ ಭಾರತಕ್ಕೆ ಕಾಲೊನಿಯಾಗಿದೆ. ವಸಾಹತೀಕರಣ ಇನ್ನೂ ಜೀವಂತವಾಗಿದೆ’ ಎಂದರು. 

‘ಮತ್ತೊಂದು ಸ್ವಾತಂತ್ರ್ಯ ಹೋರಾಟ ಆಗಬೇಕಿದೆ’ 

‘ಸಂವಿಧಾನ: ಆಶಯ ಮತ್ತು ಬಿಕ್ಕಟ್ಟುಗಳು’ ಕುರಿತು ಮಾತನಾಡಿದ ಚಿಂತಕ ಎ.ನಾರಾಯಣ ‘ಸಂವಿಧಾನ ವಿರೋಧಿ ಪಟ್ಟಭದ್ರ ಶಕ್ತಿಗಳು ಅಂಬೇಡ್ಕರ್ ಭಾರತವನ್ನು ಅಧಿಕಾರದಿಂದ ಹಿಡಿದಿಟ್ಟುಕೊಂಡಿವೆ. ಸಂವಿಧಾನರ ರಕ್ಷಣೆಗೆ ಮತ್ತೊಂದು ಸ್ವಾತಂತ್ರ್ಯ ಹೋರಾಟ ಆಗಬೇಕಿದೆ’ ಎಂದರು.  ಲೇಖಕಿ ಎಸ್‌.ಜಿ.ಜಯಲಕ್ಷ್ಮಿ ‘ಮಹಿಳಾ ಚಳವಳಿ’ ಕುರಿತು ಮಾತನಾಡಿ ‘ದೇಶದ ದಶಕದ ಹಿಂದೆ 2 ಲಕ್ಷದಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2023ರ ವೇಳಗೆ 4.5ಲಕ್ಷದಷ್ಟು ಹೆಚ್ಚಾಗಿವೆ. ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗುತ್ತಿಲ್ಲ’ ಎಂದರು. ಪ್ರೊ.ಎಂ.ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. 

ಬಿರಿಯಾನಿ ಸವಿ 
ವಿಚಾರ ಸಂಕಿರಣದಲ್ಲಿ ಮಧ್ಯಾಹ್ನ ಪಾಲ್ಗೊಂಡಿದ್ದವರಿಗೆ ಬಿರಿಯಾನಿ ಊಟ ನೀಡಲಾಗಿತ್ತು. ‘ಅಂಬೇಡ್ಕರ್ ವಿಚಾರ ಸಂಕಿರಣ ಏರ್ಪಡಿಸಿ ಬಹುಜನರ ಆಹಾರ ಸಂಸ್ಕೃತಿಯೇ ಇಲ್ಲವಾದರೆ ಹೇಗೆ?’ ಎಂದು ಶನಿವಾರ ಚಿಂತಕರು ಪ್ರಶ್ನಿಸಿದ್ದರು. ನಿರ್ದೇಶಕ ಸತೀಶ್‌ ತಿಪಟೂರು ಬಿರಿಯಾನಿ ನೀಡುವುದಾಗಿ ಹೇಳಿದ್ದರು.  ಭಾನುವಾರ ಮಧ್ಯಾಹ್ನ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದವರಿಗೆ ಚಿಕನ್‌ ಬಿರಿಯಾನಿ ಕಬಾಬ್‌ ಮೊಟ್ಟೆ ಸೌತೆಕಾಯಿ ಮೊಸರು ಬಜ್ಜಿ ಊಟ ಬಡಿಸಲಾಯಿತು. 
ಕಲಾಮಂದಿರದಲ್ಲಿ ಗಿನ್ನಿಮಾಹಿ ಅವರ ಗಾಯನ ತನ್ಮಯ 

ಗಿನ್ನಿಮಾಹಿ ಗಾಯನ ಮೋಡಿ 

ಪಂಜಾಬ್‌ ಗಾಯಕಿ ಗಿನ್ನಿಮಾಹಿ ಮತ್ತು ತಂಡದವರು ಅಂಬೇಡ್ಕರ್ ಗೀತೆಗಳನ್ನು ಕಲಾಮಂದಿರದಲ್ಲಿ ಹಾಡಿದರು. ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಜನಪದ ಉತ್ಸವದಲ್ಲಿ ಎಚ್‌.ಡಿ.ಕೋಟೆಯ ಮಂಜು ಮತ್ತು ತಂಡದವರ ಬೆಟ್ಟಕುರುಬರ ಸಾಂಪ್ರಾಯಿಕ ನೃತ್ಯ ಗದುಗಿನ ವೀರಣ್ಣ ಅಂಗಡಿ ಮತ್ತು ತಂಡದವರ ‘ಲಾವಣಿ’ ಪದ ಗಮನ ಸೆಳೆಯಿತು.  ಶ್ರೀರಂಗದಲ್ಲಿ ಗಾಂಧಿ ಜಯಂತಿ (ಕನ್ನಡ) ಭಾರತದ ಪ್ರಜೆಗಳಾದ ನಾವು (ಕನ್ನಡ) ಹೇಮಾವತಿ (ಕ) ಚಿತ್ರಗಳೊಂದಿಗೆ ಚಲನಚಿತ್ರೋತ್ಸವಕ್ಕೆ ತೆರೆಬಿದ್ದರೆ ಭೂಮಿಗೀತದಲ್ಲಿ ಮುಂಬೈನ ಯಲ್ಗಾರ್ ಸಾಂಸ್ಕೃತಿಕ್‌ ಮಂಚ್‌ ತಂಡದವರು ‘ಕವನ್‌ ಆನ್ ಅಂಬೇಡ್ಕರೈಟ್‌ ಒಪೆರಾ’ ನಾಟಕ ಅಭಿನಯಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.