ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 64ನೇ ‘ಪಾರಂಪರಿಕ ಸಂಗೀತೋತ್ಸವ’ದಲ್ಲಿ ಶುಕ್ರವಾರ
ಮೈಸೂರು: ಸಹೋದರ– ಸಹೋದರಿಯರ ನಾದಸ್ವರ– ವಯಲಿನ್ ‘ನಾದಾನುಸಂಧಾನ’ದ ಲಹರಿಗೆ ಸಹೃದಯರು ತಲೆದೂಗಿದರು. ಒಂದೇ ರಾಗದ ಭಿನ್ನ ಪ್ರಯೋಗ, ತಮ್ಮದೇ ಸಂಗೀತ ಸಂಯೋಜನೆಯ ಏರಿಳಿತದ ಮಾಧುರ್ಯಕ್ಕೆ ಮನಸೋತರು.
ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಶುಕ್ರವಾರ, ವಿದ್ವಾನ್ ನೆಮ್ಮಾರ ಕಣ್ಣನ್– ಆನಂದ ಬ್ರಹ್ಮ ಸಹೋದರರ ನಾದಸ್ವರ, ಅಕ್ಕರೈ ಶುಭಲಕ್ಷ್ಮಿ– ಸ್ವರ್ಣಲತಾ ಸಹೋದರಿಯರ ವಯಲಿನ್ ಜುಗಲ್‌ಬಂದಿಯು ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
ನೆಮ್ಮಾರ ಸಹೋದರರ ‘ನಾದಸ್ವರ’ದ ಅಲೆಗಳಿಗೆ ಅಕ್ಕರೈ ಸಹೋದರಿಯರು ವಯಲಿನ್‌ನಲ್ಲಿ ಅನುಸಂಧಾನ ನಡೆಸಿದರು. ಕೊಡು–ಕೊಳ್ಳುವ ಸ್ವರ ವರ್ಗಾವಣೆಯ ಆಟವು ಕೇಳುಗರಿಗೆ ಹಬ್ಬವನ್ನು ಉಂಟು ಮಾಡಿತು. ಅವರ ಪ್ರಯೋಗಗಳ ಹುಡುಕಾಟಕ್ಕೆ ವಿದ್ವಾನ್ ಚಂದ್ರಶೇಖರ ಶರ್ಮಾ ‘ಘಟಂ’ ಹಾಗೂ ವಿದ್ವಾನ್ ಜಯಚಂದ್ರರಾವ್ ‘ಮೃದಂಗ’ದಲ್ಲಿ ಸಾಥ್ ನೀಡಿದರು. ಆರೂ ಮಂದಿಯ ವಾದ್ಯ–ತಾಳದ ಮೋಡಿಯು ಭಾವಗಳ ಗಂಗೋತ್ರಿಯಲ್ಲಿ ಮೀಯಿಸಿತು.
ನೆಮ್ಮಾರ ಕಣ್ಣನ್ ಅವರು ‘ಗಂಭೀರನಾಟ’ ರಾಗದಲ್ಲಿ ಸಂಯೋಜಿಸಿದ ಸಂಕೀರ್ಣಜಾತಿ ತ್ರಿಪುಟ ತಾಳದ ಮಲ್ಲಾರಿಯನ್ನು ನುಡಿಸಿದರು. ನಂತರ ಮುತ್ತುಸ್ವಾಮಿ ದೀಕ್ಷಿತರ ‘ಗೌಳ’ ರಾಗದ ‘ಶ್ರೀಮಹಾಗಣಪತಿ ರವತುಮಾಮ್’ ಕೃತಿ ನುಡಿಸಿದರು. ಅಕ್ಕರೈ ಸ್ವರ್ಣಲತಾ ಅವರು ಸಂಯೋಜಿಸಿದ ‘ನನ್ನುಬ್ರೊವು ಕಾಮಾಕ್ಷಿ’ ಕೃತಿಯನ್ನು ಶುಭಲಕ್ಷ್ಮಿ ಹಾಡಿದರು.
ನಂತರ ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ‘ಆರಭಿ’ ರಾಗದ ‘ಸಾದಿಂಚನೆ’ ಅನ್ನು ನುಡಿಸಿದರು. ‘ತೋಡಿ’ ರಾಗದಲ್ಲಿ ರಾಗತಾನಪಲ್ಲವಿ ಪ್ರಸ್ತುತ ಪಡಿಸಿದ ಅವರು ಮನೋಧರ್ಮದಲ್ಲಿ ರಾಗವನ್ನು ವಿಸ್ತರಿಸಿದರು. ಸುದೀರ್ಘ ರಾಗಾಲಾಪನೆಯಲ್ಲಿ ಸಹೃದಯರು ವಿಹರಿಸಿದರು. ‘ನಳಿನಕಾಂತಿ’, ‘ಮಧುವಂತಿ’, ‘ಚಾರುಕೇಶಿ’ ರಾಗಗಳಲ್ಲಿ ಕಛೇರಿಯನ್ನು ವಿಸ್ತರಿಸಿದರು.
‘ತನಿ’ ಆವರ್ತನಕ್ಕೆ ವಾದ್ಯಕಾರರು ಅವಕಾಶ ನೀಡಿದರು. ಮೃದಂಗ, ಘಟಂ ಲಯವು ಮೋಡಿ ಮಾಡಿತು. ಹೃದಯ ಧಿಮಿತವನ್ನು ಹೆಚ್ಚಿಸಿತು. ‘ಮಾಂಡ್’ ರಾಗದಲ್ಲಿ ಲಾಲ್ಗುಡಿ ಜಯರಾಮನ್ ಅವರ ತಿಲ್ಲಾನವನ್ನು ನುಡಿಸುವ ಮೂಲಕ ಕಛೇರಿಗೆ ತೆರೆಬಿತ್ತು.
‘ಘಟಂ’ನಲ್ಲಿ ಚಂದ್ರಶೇಖರ ಶರ್ಮಾ ‘ಮೃದಂಗ’ದಲ್ಲಿ ಜಯಚಂದ್ರರಾವ್ ಸಾಥ್ ವಾದ್ಯಗಳ ಜುಗಲ್‌ಬಂದಿ ಝಲಕ್
ಅಕ್ಕರೈ ‘ದ್ವಂದ್ವ ಗಾಯನ’
ಇಂದು ಉತ್ಸವದ 4ನೇ ದಿನವಾದ ಆ.30ರ ಶನಿವಾರ ಸಂಜೆ 6.45ಕ್ಕೆ ಅಕ್ಕರೈ ಸಹೋದರಿಯರಾದ ಶುಭಲಕ್ಷ್ಮಿ– ಸ್ವರ್ಣ ಲತಾ ಅವರ ‘ದ್ವಂದ್ವ ಗಾಯನ’ವಿದೆ. ಇದಕ್ಕೂ ಮೊದಲು 5.30ಕ್ಕೆ ಚಂದ್ರಶೇಖರ ಆಚಾರ್ ಅವರಿಂದ ‘ರಂಗಗೀತೆ’ಗಳ ಪ್ರಸ್ತುತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.