ADVERTISEMENT

ಮೈಸೂರು | ನವೆಂಬರ್‌ನಲ್ಲೇ ಮೈ ಕೊರೆವ ಚಳಿ; ಮುಂಜಾನೆ ಇಬ್ಬನಿಯೂ ಹೆಚ್ಚಳ

ಜಿತೇಂದ್ರ ಆರ್
Published 19 ನವೆಂಬರ್ 2025, 4:00 IST
Last Updated 19 ನವೆಂಬರ್ 2025, 4:00 IST
ಚಳಿ ಚಳಿ....
ಚಳಿ ಚಳಿ....   

ಮೈಸೂರು: ಜಿಲ್ಲೆಯಾದ್ಯಂತ ನವೆಂಬರ್‌ನಲ್ಲೇ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂಜಾನೆ ಶೀತ ಗಾಳಿ ಜನರನ್ನು ಬಾಧಿಸುತ್ತಿದೆ.

ನವೆಂಬರ್ ಅಂತ್ಯದವರೆಗೂ ಹಿಂಗಾರು ಮಳೆ ಇದ್ದು, ನಂತರದ ಮೂರು ತಿಂಗಳು ಚಳಿ ಕ್ರಮೇಣ ಹೆಚ್ಚಳವಾಗುವುದು ವಾಡಿಕೆ. ಆದರೆ ಈ ವರ್ಷ ಈ ತಿಂಗಳ ಆರಂಭದಲ್ಲೇ ಚಳಿ ಕಾಲಿಟ್ಟಿದ್ದು, ಜೊತೆಗೆ ಮುಂಜಾನೆ ಇಬ್ಬನಿಯೂ ಹೆಚ್ಚುತ್ತಿದೆ. ಮಳೆ ಕ್ರಮೇಣ ಕಡಿಮೆ ಆಗಿದೆ.

ಸದ್ಯ ಮುಂಜಾನೆ ಹೊತ್ತು ಉಷ್ಣಾಂಶ 18–19 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬೆಳಿಗ್ಗೆ 8–9 ಗಂಟೆ ಕಳೆದರೂ ಚಳಿಯ ಅನುಭವ ಆಗುತ್ತಿದೆ. ನಂತರದಲ್ಲಿ ಕ್ರಮೇಣ ಮೈ ಸುಡುವ ಬಿಸಿಲು ಕಾಣಿಸಿಕೊಳ್ಳುತ್ತಿದೆ.

ADVERTISEMENT

ವಾಕಿಂಗ್‌ ಪ್ರಿಯರಿಗೆ ಕಷ್ಟ:

ಕೆಲವರಿಗೆ ಮುಂಜಾನೆ 5ರಿಂದ 5.30ಕ್ಕೆಲ್ಲ ಎದ್ದು ಹೊರಗೆ ವಿಹಾರಕ್ಕೆಂದು ಹೋಗುವುದು ಅಭ್ಯಾಸ. ಅದರಲ್ಲೂ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆ ಉಳ್ಳವರು ಮುಂಜಾನೆ ನಡಿಗೆಯನ್ನು ತಪ್ಪಿಸುವುದೇ ಇಲ್ಲ. ಇನ್ನೂ ಕೆಲವರು ಆದಷ್ಟು ಫಿಟ್‌ನೆಸ್‌ ಕಾಪಾಡಿಕೊಳ್ಳುವ ಸಲುವಾಗಿ ನಡಿಗೆ ಅಭ್ಯಾಸ ಹೊಂದಿದ್ದಾರೆ. ಇಂತಹವರು ಇದೀಗ ಬೆಚ್ಚನೆಯ ಉಡುಗೆಗಳ ಮೊರೆ ಹೋಗಲು ಆರಂಭಿಸಿದ್ದಾರೆ. ವಾಕಿಂಗ್‌ ಸಮಯವನ್ನೂ ಬದಲಿಸಿಕೊಳ್ಳುತ್ತಿದ್ದಾರೆ.

ಹಲವು ತೊಂದರೆ:

ಚಳಿಗಾಲದಲ್ಲಿ ಮಕ್ಕಳು, ವೃದ್ಧರಿಗೆ ಜ್ವರ, ಶೀತದಂತಹ ತೊಂದರೆಗಳು ಬಾಧಿಸುವುದು ಸಾಮಾನ್ಯ. 45 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲೂ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇಂತಹವರೂ ಕೆಲವು ಮುನ್ನೆಚ್ಚರಿಕೆ ಅನುಸರಿಸಬೇಕು ಎಂಬುದು ವೈದ್ಯರ ಸಲಹೆ.

‘ಇಬ್ಬನಿ ಬೀಳುವ ಸಮಯದಲ್ಲಿ ಆದಷ್ಟು ಹೊರಗೆ ಓಡಾಡುವುದನ್ನು ಕಡಿಮೆ ಮಾಡಿ. ಸೂರ್ಯೋದಯದ ಬಳಿಕ ವಾಕಿಂಗ್‌ ಆರಂಭಿಸಿ. ಅದಕ್ಕೂ ಮುನ್ನ ಹೊರಗೆ ಹೋಗಲೇ ಬೇಕಿದ್ದರೆ ತಪ್ಪದೇ ಬೆಚ್ಚನೆಯ ಉಡುಗೆಗಳನ್ನು ಧರಿಸಿ. ತಲೆಗೊಂದು ಟೊಪ್ಪಿಗೆಯೂ ಇರಲಿ’ ಎನ್ನುವುದು ವೈದ್ಯರ ಮಾತು.

ಆಹಾರವೂ ಮುಖ್ಯ:

‘ಚಳಿಗಾಲದಲ್ಲಿ ನಾವು ಸೇವಿಸುವ ಆಹಾರವೂ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕರಿದ ಪದಾರ್ಥಗಳು, ಬೇಕರಿಯ ತಿಂಡಿ–ತಿನಿಸುಗಳನ್ನು ಆದಷ್ಟೂ ಕಡಿಮೆ ಮಾಡಬೇಕು. ಆಹಾರ ಬಿಸಿ ಆಗಿದ್ದಾಗಲೇ ಸೇವನೆ ಮಾಡಬೇಕು. ಆಗಾಗ್ಗೆ ಬಿಸಿನೀರು ಸೇವನೆ ಮಾಡಬೇಕು’ ಎನ್ನುತ್ತಾರೆ ವೈದ್ಯರು.

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆದಷ್ಟೂ ಅವರಿಗೆ ಬೆಚ್ಚನೆಯ ಉಡುಗೆಗಳನ್ನು ತೊಡಿಸಬೇಕು. ಬೆಚ್ಚಗಿನ ನೀರನ್ನೇ ಕುಡಿಸಬೇಕು. ಮುಂಜಾನೆ ಹೊರಗೆ ಬಿಡಬಾರದು. ಬಿಸಿಯಾದ, ಬೇಯಿಸಿದ ಆಹಾರವನ್ನೇ ಕೊಡಬೇಕು. ಹೊರಗಿನ ಆಹಾರಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಅವರ ಸಲಹೆ.

ಮಕ್ಕಳಲ್ಲಿ ಶೀತ, ಜ್ವರ ಕಾಣಿಸಿಕೊಂಡಲ್ಲಿ ಅವರಿಗೆ ಸೂಕ್ತ ಔಷಧ ಕೊಡಿಸಬೇಕು. ಇಂತಹ ಸಮಸ್ಯೆಗಳು ಇರುವ ಮಕ್ಕಳನ್ನು ಮನೆಯಲ್ಲೇ ಉಪಚರಿಸಬೇಕು. ಒಂದೆರಡು ದಿನ ಶಾಲೆಗೆ ಕಳುಹಿಸದೇ ಇರುವುದು ಇಳಿತು. ಇದರಿಂದ ಬೇಗ ಚೇತರಿಸಿಕೊಳ್ಳುವ ಜೊತೆಗೆ ಇತರೆ ಮಕ್ಕಳಿಗೂ ಸೋಂಕು ಹರಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ವೈದ್ಯರು.

ಚಳಿ ಹೆಚ್ಚಾದಂತೆ ಮಕ್ಕಳು–ಹಿರಿಯರಲ್ಲಿ ಒಂದಿಷ್ಟು ಆರೋಗ್ಯ ಸಮಸ್ಯೆ ಕಾಡಲಿದ್ದು ಎಚ್ಚರ ವಹಿಸಬೇಕು. ಹೊರಗಿನ ಆಹಾರ ಕಡಿಮೆ ಮಾಡಬೇಕು
ಡಾ. ಆರ್. ಯೋಗೀಶ್‌ ಹಿರಿಯ ವೈದ್ಯಾಧಿಕಾರಿ ಕೆ.ಆರ್. ಆಸ್ಪತ್ರೆ

ವಾಡಿಕೆಗಿಂತ ಕಡಿಮೆ ಮಳೆ

ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ಮಳೆಯ ಕೊರತೆಯಾಗಿದೆ. ತಿಂಗಳ ಮೊದಲೆರಡು ವಾರಗಳಲ್ಲಿ ಸರಾಸರಿ 45–50 ಮಿಲಿಮೀಟರ್‌ನಷ್ಟು ಮಳೆ ಬೀಳಬೇಕಿತ್ತು. ಆದರೆ ಈ ಅವಧಿಯಲ್ಲಿ ಮಳೆಯೇ ಆಗಿಲ್ಲ ಎನ್ನುತ್ತವೆ ಅಂಕಿ–ಅಂಶಗಳು. ಅಕ್ಟೋಬರ್‌ನಲ್ಲಿ ವಾಡಿಕೆಯ 145 ಮಿ.ಮೀ.ಗೆ ಪ್ರತಿಯಾಗಿ 183 ಮಿ.ಮೀ.ನಷ್ಟು ಮಳೆ ಸುರಿದಿದ್ದು ಶೇ 27ರಷ್ಟು ಹೆಚ್ಚುವರಿ ವರ್ಷಧಾರೆ ಆಗಿತ್ತು. ಆದರೆ ನವೆಂಬರ್‌ನಲ್ಲಿ ಮಳೆಯ ಕೊರತೆ ಕಾಡಿದ್ದು ಬಿಸಿಲಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಮುಂದಿನ ಒಂದು ವಾರ ಚಳಿಯ ಪ್ರಮಾಣ ಹೆಚ್ಚಲಿದೆ. ಜೊತೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯೂ ಆಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.