ADVERTISEMENT

ಸಚಿವ ಸೋಮಶೇಖರ್‌ಗೆ ಕಪ್ಪು ಬಾವುಟ ತೋರಿಸಲು ಮೈಸೂರು ಕಾಂಗ್ರೆಸ್‌ ಶಾಸಕರ ನಿರ್ಧಾರ

ಶಿಷ್ಟಾಚಾರ ಉಲ್ಲಂಘಿಸಿ ಅವಮಾನ: ಕಾಂಗ್ರೆಸ್‌ ಶಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 8:41 IST
Last Updated 22 ಜನವರಿ 2022, 8:41 IST
ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ
ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ   

ಮೈಸೂರು: ‘ಜಲಮಂಡಳಿ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿ ಅವಮಾನ ಎಸಗಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ದರೆ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕಪ್ಪು ಬಾವುಟ ತೋರಿಸಿ ಅಸಹಕಾರ ಚಳವಳಿ ನಡೆಸಲಾಗುವುದು’ಎಂದು ಕಾಂಗ್ರೆಸ್‌ ಶಾಸಕರು ತಿಳಿಸಿದರು.

‘ಇದೇನು ಸಚಿವರ ಮನೆಯ ಗೃಹ ಪ್ರವೇಶವೇ, ಮದುವೆ ಕಾರ್ಯಕ್ರಮವೇ? ಅಥವಾ ಬಿಜೆಪಿ ಕಾರ್ಯಕ್ರಮವೇ‌’ ಎಂದು ಶನಿವಾರ ಇಲ್ಲಿ ತುರ್ತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್‌.ಪಿ.ಮಂಜುನಾಥ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಕುಮಾರ್‌.ಸಿ ಪ್ರಶ್ನಿಸಿದರು.

‘ಇದು ಶಾಸಕರಿಗೆ ಮಾತ್ರವಲ್ಲ; ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ಈ ವಿಚಾರವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಅಲ್ಲದೇ, ಅಗೌರವ ತೋರಿರುವ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಮೈಸೂರು ನಗರದಲ್ಲಿ ಜ.21ರಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಲಯಮಟ್ಟದ ಜಲಭವನ ಕಚೇರಿಯನ್ನು ಸೋಮಶೇಖರ್‌ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಉದ್ಘಾಟಿಸಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರನ್ನು ಕರೆದಿದ್ದಾರೆ. ನಿವೃತ್ತಿ ಎಂಜಿನಿಯರ್‌ ಹೆಸರೂ ಇದೆ. ಆದರೆ, ಆಹ್ವಾನ ಪತ್ರಿಕೆ ಹಾಗೂ ಉದ್ಘಾಟನಾ ಫಲಕದಲ್ಲಿ ಉದ್ದೇಶಪೂರ್ವಕವಾಗಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರಗಳ ಶಾಸಕರ ಹೆಸರು ಹಾಕಿಲ್ಲ. ಈ ಭವನಕ್ಕೆ ಹಣ ಬಿಡುಗಡೆ ಮಾಡಿ ಶಂಕುಸ್ಥಾಪನೆ ನೆರವೇರಿಸಿದ್ದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ, ಶಂಕುಸ್ಥಾಪನೆ ಕಲ್ಲನ್ನೇ ಮರೆಮಾಚಲಾಗಿದೆ. ಅವರ ಹೆಸರನ್ನೂ ಹಾಕಿಲ್ಲ’ ಎಂದು ಎಚ್‌.ಪಿ.ಮಂಜುನಾಥ್‌ ಹರಿಹಾಯ್ದರು.

‘ಕೂಡಲೇ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಚಿವ ಸೋಮಶೇಖರ್‌ ಅವರು ಮೈಸೂರಿಗೆ ಬಂದಾಗಲೆಲ್ಲಾ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಲಾಗುವುದು. ಅವರು ಕರೆಯುವ ಸಭೆಗಳಿಗೂ ಹಾಜರಾಗುವುದಿಲ್ಲ’ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.