2022ರಲ್ಲಿ ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟಿಸಿದ ಕ್ಷಣ ಪ್ರಜಾವಾಣಿ ಸಂಗ್ರಹ ಚಿತ್ರ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆಯ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಆಯ್ಕೆಯಾಗಿದ್ದು, ಮಹಿಳೆಯೊಬ್ಬರಿಗೆ ಈ ಅವಕಾಶ ದೊರೆತಿದೆ.
ಈ ವರ್ಷ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಾಡಹಬ್ಬ ನಡೆಯಲಿದ್ದು, ಎರಡು ವರ್ಷದ ಬಳಿಕ ಮಹಿಳೆಯೊಬ್ಬರು ಈ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
2022ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದರು. ದೇಶದ ಪ್ರಥಮ ಪ್ರಜೆಯಾದ ಅವರು ಬುಡಕಟ್ಟು ಮಹಿಳೆಯೂ ಆಗಿದ್ದ ಕಾರಣಕ್ಕೆ ಅವರ ಆಯ್ಕೆ ಗಮನ ಸೆಳೆದಿತ್ತು. 2018ರಲ್ಲಿ ಸಾಹಿತಿ ಸುಧಾ ಮೂರ್ತಿಗೆ ಈ ಅವಕಾಶ ದೊರೆತಿತ್ತು. ಈ ಹಿಂದೆ 1999ರಲ್ಲಿ ಗಂಗೂಬಾಯಿ ಹಾನಗಲ್ ಹಾಗೂ 2001ರಲ್ಲಿ ನಟಿ ಬಿ. ಸರೋಜಾದೇವಿ ಅವರಿಗೂ ಉದ್ಘಾಟನೆಯ ಅವಕಾಶ ಸಿಕ್ಕಿದೆ.
ಸಾಹಿತಿಗಳಿಗೆ ಮಣೆ:
1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪನವಾದಾಗ ‘ದಸರೆ ಆಚರಿಸುವುದು ಬೇಡ’ ಎಂಬ ಕೂಗು ಕೇಳಿ ಬಂದಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ವರನಟ ರಾಜಕುಮಾರ್ ಅವರನ್ನೇ ಉದ್ಘಾಟಕರಾಗಿ ಆಹ್ವಾನಿಸಿ ವಿರೋಧವನ್ನು ತಣ್ಣಗಾಗಿಸಿದ್ದರು. ಅಂದಿನಿಂದ ದಸರೆ ಉದ್ಘಾಟನೆಗೆ ಅತಿಥಿಗಳನ್ನು ಆಹ್ವಾನಿಸುವ ಪರಿಪಾಠ ಬೆಳೆದಿದೆ.
ದಸರಾ ಉದ್ಘಾಟಕರಲ್ಲಿ ಸಾಹಿತಿಗಳದ್ದೇ ಸಿಂಹಪಾಲು. ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾರ್ನಾಡ್, ಚನ್ನವೀರ ಕಣವಿ, ಕೆ.ಎಸ್. ನಿಸಾರ್ ಅಹಮ್ಮದ್, ಎಸ್.ಎಲ್. ಭೈರಪ್ಪ ಹಾಗೂ ಕಳೆದ ವರ್ಷ ಹಂ.ಪ. ನಾಗರಾಜಯ್ಯ ಉದ್ಘಾಟಕರಾಗಿ ಪಾಲ್ಗೊಂಡಿದ್ದರು.
ಹೋರಾಟಗಾರರು, ಗಾಂಧಿವಾದಿ, ರಾಜಕಾರಣಿಗಳು, ಪ್ರಗತಿಪರರು, ರೈತರು, ಮಠಾಧೀಶರೂ ಉತ್ಸವವನ್ನು ಉದ್ಘಾಟಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್. ಜೋಯಿಸ್, ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್, ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ, ಗಾಂಧಿವಾದಿ ಜಿ. ನಾರಾಯಣ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಶ್ರೀಶ್ರೀ ರವಿಶಂಕರ ಗುರೂಜಿ ಈ ಪಟ್ಟಿಯಲ್ಲಿದ್ದಾರೆ. ಅಂಬರೀಷ್, ಹಂಸಲೇಖರಂತಹ ಸಿನಿಮಾ ಕ್ಷೇತ್ರದ ಮಂದಿಗೂ ಅವಕಾಶ ಸಿಕ್ಕಿದೆ.
2015ರಲ್ಲಿ ರೈತ, ಎಚ್.ಡಿ.ಕೋಟೆ ತಾಲ್ಲೂಕು ಮಲಾರ ಕಾಲೊನಿಯ ಪುಟ್ಟಯ್ಯ ಉದ್ಘಾಟಿಸಿದ್ದರು. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸರ್ಕಾರ ಈ ನಿರ್ಣಯ ಕೈಗೊಂಡಿತ್ತು.
2021ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, 2020ರಲ್ಲಿ ಕೊರೊನಾ ಮುಂಚೂಣಿ ಯೋಧರಿಗೆ ಗೌರವ ಸಲ್ಲಿಸಲು ಜಯದೇವ ಹೃದ್ರೋಗ ಸಂಸ್ಥೆಯ ಅಂದಿನ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಉದ್ಘಾಟನೆಯ ಗೌರವ ನೀಡಿದ್ದರು.
ಮೈಸೂರು ಅರಸರಿಂದ ದಸರಾ ಆಚರಣೆ ನಿಂತ ಬಳಿಕ ಸರ್ಕಾರವೇ ‘ನಾಡಹಬ್ಬ’ದ ಹೆಸರಿನಲ್ಲಿ ದಸರಾ ಮಹೋತ್ಸವ ಆಚರಿಸುತ್ತ ಬಂದಿದೆ. ನವರಾತ್ರಿಯ ಮೊದಲ ದಿನ ಉದ್ಘಾಟನೆ ಮೂಲಕ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. ದಸರೆಯ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ‘ಜಂಬೂ ಸವಾರಿ’ಯನ್ನು ಮುಖ್ಯಮಂತ್ರಿ ಹಾಗೂ ‘ಪಂಜಿನ ಕವಾಯತು’ ಅನ್ನು ರಾಜ್ಯಪಾಲರು ಉದ್ಘಾಟಿಸುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.