ADVERTISEMENT

ದಸರಾ 2025: ಜಂಬೂಸವಾರಿ ಬಳಿ ಈ ಸಾರಿ 11,600 ಆಸನ ಕಡಿತ! ಕಾರಣ ಏನು?

ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಘಟನೆ ಪರಿಣಾಮ * ಎಸ್‌ಒಪಿ ಕಟ್ಟುನಿಟ್ಟಿನ ಜಾರಿಗೆ ಕ್ರಮ

ಎಂ.ಮಹೇಶ
Published 18 ಆಗಸ್ಟ್ 2025, 0:02 IST
Last Updated 18 ಆಗಸ್ಟ್ 2025, 0:02 IST
ದಸರಾ ಜಂಬೂಸವಾರಿ ಸಂಗ್ರಹ ಚಿತ್ರ
ದಸರಾ ಜಂಬೂಸವಾರಿ ಸಂಗ್ರಹ ಚಿತ್ರ   

ಮೈಸೂರು: ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ಅವಘಡದ ಪರಿಣಾಮ ಈ ಬಾರಿ ಮೈಸೂರು ದಸರಾ ಮಹೋತ್ಸವದ ಮೇಲೂ ಬೀರಿದೆ. ಜಂಬೂಸವಾರಿ ದಿನ ಅರಮನೆ ಆವರಣದಲ್ಲಿ 11,600 ಆಸನಗಳು ಕಡಿತಗೊಳ್ಳಲಿವೆ.

2023ರಲ್ಲಿ 38 ಸಾವಿರ ಆಸನಗಳು, ಕಳೆದ ವರ್ಷ ದಾಖಲೆಯ 59,600ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಕಾಲ್ತುಳಿತ ಅವಘಡದ ಬಳಿಕ ಪೊಲೀಸ್ ಇಲಾಖೆ ರೂಪಿಸಿರುವ ‘ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ’ವನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಲು ಈ ಬಾರಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಸನಗಳ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ.

ಈ ಬಾರಿ ಆಸನಗಳ ಸಂಖ್ಯೆ ಕಡಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆ ತೀರ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಚರ್ಚೆಯಾಗಿದ್ದು, 48 ಸಾವಿರ ಆಸನ ವ್ಯವಸ್ಥೆ ಮಾಡಲು, ಅಷ್ಟೇ ಪ್ರಮಾಣದಲ್ಲಿ ಪಾಸ್, ಟಿಕೆಟ್, ಕಾರ್ಡ್‌ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ‘‍ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಇದರಿಂದಾಗಿ, ವಿವಿಐಪಿ, ವಿಐಪಿಗಳಿಗೆ ಕೂಡ 1 ಸಾವಿರ ಆಸನ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಪ್ರತಿ ವಿಭಾಗದಲ್ಲೂ (ಎನ್‌ಕ್ಲೋಸರ್‌) ತಲಾ ಸರಾಸರಿ 500ರಿಂದ ಸಾವಿರ ಆಸನಗಳು ಕಡಿಮೆಯಾಗಲಿವೆ.

ಮಾರ್ಗ ಬದಲಾವಣೆಯಾಗಿತ್ತು

ಕಳೆದ ವರ್ಷ ಅರಮನೆ ಆವರಣದೊಳಗೆ ಆನೆಗಳು ಬರುವ ಮಾರ್ಗ ಬದಲಾಯಿಸಲಾಗಿತ್ತು. ಅಂಬಾರಿ ಆನೆ, ಸ್ತಬ್ಧಚಿತ್ರಗಳು, ಜನಪದ ಕಲಾತಂಡಗಳು ಅರಮನೆ ಮುಂದಿನಿಂದ ಹೊರಡುವ ಬದಲಿಗೆ, ಅಂಬಾರಿ ಕಟ್ಟುವ ಸ್ಥಳದಿಂದ ‘ಅಭಿಮನ್ಯು’ ಸೇರಿದಂತೆ ಎಲ್ಲ ಆನೆಗಳು ನೇರ ಅರಮನೆ ಆವರಣದ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಬಲಕ್ಕೆ ತಿರುಗಿ, ನಂತರ ಗಾಯತ್ರಿ ದೇಗುಲದ ಬಳಿ ಬಲಕ್ಕೆ ತಿರುಗಿ ಅರಮನೆ ಎದುರು ಬರುವ ವ್ಯವಸ್ಥೆ ಇತ್ತು. 

ಈ ಮಾರ್ಗದಲ್ಲಿ ಸಾರ್ವಜನಿಕರಿಗಾಗಿ 11 ಸಾವಿರಕ್ಕೂ ಹೆಚ್ಚಿನ ಆಸನ ಹಾಕಲಾಗಿತ್ತು. ಈ ಮಾರ್ಗ ಉಳಿಸಿಕೊಳ್ಳಬೇಕೇ, ಬೇಡವೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ಈ ಬಾರಿ ಸೆ.22ರಿಂದ ಅ.2ರವರೆಗೆ ಮೈಸೂರು ದಸರಾ ನಡೆಯಲಿದೆ. ಅ.2ರ ವಿಜಯದಶಮಿ ದಿನ ಜಂಬೂಸವಾರಿ ಮೆರವಣಿಗೆ ಇರುತ್ತದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದೆ.

ದಸರಾ ಲೋಗೊ

ಮೈಸೂರು ಅರಮನೆ ಆವರಣದಲ್ಲಿ ಜನಸಂದಣಿ ನಿಯಂತ್ರಿಸುವುದು ಸುಗಮವಾಗಿ ಮೆರವಣಿಗೆ ವೀಕ್ಷಿಸುವಂತೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ

-ಡಾ.ಎಚ್‌.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.