ADVERTISEMENT

Mysuru Dasara 2025 | ಯುವ ಸಂಭ್ರಮ: ಮಿಂಚಿದ ವಿಶೇಷ ಶಾಲಾ ಮಕ್ಕಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 1:57 IST
Last Updated 16 ಸೆಪ್ಟೆಂಬರ್ 2025, 1:57 IST
ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಯುವ ಸಂಭ್ರಮದ ಆರನೇ ದಿನವಾದ ಸೋಮವಾರ ವಿಶೇಷ ಶಾಲೆಯ ಮಕ್ಕಳ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವೇದಿಕೆಯಲ್ಲಿ ಮೊಳಗಿದ ಕನ್ನಡದ ಹಾಡುಗಳಿಗೆ ಮುಂಭಾಗದಲ್ಲಿದ್ದ ಯುವ ಸಮೂಹ ಹುಚ್ಚೆದ್ದು ಕುಣಿಯಿತು.

ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ ಕೃಷ್ಣ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ, ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ, ಪೌರಾಣಿಕ, ಭಾರತೀಯ ಯೋಧರ ಪಾತ್ರ, ಕೊಡವ ನೃತ್ಯ, ಕರ್ನಾಟಕ ಜಾನಪದವನ್ನು ವರ್ಣಿಸುವ 58 ತಂಡಗಳ ನೃತ್ಯ ‌ಪ್ರದರ್ಶನ ನಡೆಯಿತು. ವೇದಿಕೆಯ ಮೇಲೆ ಕಲಾವಿದರು ಪ್ರದರ್ಶನ ನೀಡುತ್ತಿದ್ದಂತೆ, ಮುಂಭಾಗದ ಸಭಿಕರ ನಡುವೆ ಇದ್ದ ಕೆಲವರೂ ಎದ್ದು ನಿಂತು ನೃತ್ಯ ಮಾಡಿ ಗಮನಸೆಳೆದರು.

ನಗರದ ಮೈತ್ರಿ ಚಾರಿಟಬಲ್‌ ಟ್ರಸ್ಟ್‌ನ ವಿಶೇಷ ಮಕ್ಕಳು ಕನ್ನಡ ವೈಭವದ ನೃತ್ಯರೂಪಕ ಪ್ರದರ್ಶಿಸಿದರು.

ADVERTISEMENT

‘ನಮ್ಮಮ್ಮ, ನಮ್ಮಮ್ಮ ಭೂಮಿ ತಾಯವ್ವ’, ‘ಕೇಳೆ ಚೆಲುವೆ’ ಹಾಡು ನೆರೆದಿದ್ದವರನ್ನೂ ರಂಜಿಸಿತು. ಪುಟಾಣಿ ಮಕ್ಕಳ ಹುಲಿ ಕುಣಿತ ಪ್ರೇಕ್ಷಕರ ಮನಗೆದ್ದಿತು. ಕರುಣಾಮಯಿ ಫೌಂಡೇಷನ್‌ನ ವಿಶೇಷ ಮಕ್ಕಳ ನವಶಕ್ತಿ ವೈಭವವು ಗಮನಸೆಳೆಯಿತು. ತಿ.ನರಸೀಪುರ ತಾಲ್ಲೂಕಿನ ವಿದ್ಯೋದಯ ಶಾಲಾ ವಿದ್ಯಾರ್ಥಿಗಳು ಪೌರಾಣಿಕ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ನೃತ್ಯದ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕೊಡುಗೆ ನೆನೆದರು.

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಬಾರಿಸು ಕನ್ನಡ ಡಿಂಡಿಮವ ಒ ಕರ್ನಾಟಕ ಹೃದಯ ಶಿವ’, ‘ಮರೆಯೋದುಂಟೆ ಮೈಸೂರು ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ’ ಗೀತೆಗಳ ತಾಳಕ್ಕೆ ಸರಿಯಾದ ಹೆಜ್ಜೆಗಳನ್ನಿಟ್ಟು ‘ಸೈ’ ಎನಿಸಿಕೊಂಡರು. ಸಿದ್ದಾರ್ಥನಗರದ ಜೆಎಸ್ಎಸ್‌ ಕಾಲೇಜಿನ ವಿದ್ಯಾರ್ಥಿಗಳ ನೃತ್ಯವು ಹೊಸ ಸಂಚಲನ ಮೂಡಿಸಿತು.

ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾರತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು 

ಬಣ್ಣಗಳ ಚಿತ್ತಾರ, ಎಲ್‌ಇಡಿ ಪರದೆಯಲ್ಲಿ ಮೂಡಿ ಬರುವ ವಿಸ್ಮಯಕಾರಿ ಚಿತ್ರಣಗಳ ನಡುವೆ ಕನ್ನಡದ ಗೀತೆಗೆ ಹೊಸ ಕಳೆ ಬಂತು.

ಧಾರಾವಾಹಿ ಕಲಾವಿದೆ ಚಂದನಾ ಕೃಷ್ಣಮೂರ್ತಿ ಅಭಿಮಾನಿಗಳ ಪ್ರೀತಿಗೆ ಶರಣಾದರು. ‘ಎಕ್ಕ’ ಸಿನೆಮಾದ ಟ್ರೆಂಡಿಂಗ್‌ ಹಾಡು ‘ಬ್ಯಾಂಗಲ್‌ ಬಂಗಾರಿ’ಗೆ ಹುಕ್‌ ಸ್ಟೆ‍ಪ್‌ ಹಾಕಿ ರಂಜಿಸಿದರು.

ಯುವ ಸಂಭ್ರಮದಲ್ಲಿ ಭಾಗವಹಿಸಿರುವ ಯುವ ಸಮೂಹ  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.