ADVERTISEMENT

Mysuru Dasara 2025: ಮರದ ಅಂಬಾರಿ ಹೊತ್ತ ‘ಅಭಿಮನ್ಯು’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:35 IST
Last Updated 16 ಸೆಪ್ಟೆಂಬರ್ 2025, 2:35 IST
ಮೈಸೂರಿನಲ್ಲಿ ಗಜಪಡೆಯ ಕ್ಯಾಪ್ಟನ್‌ ‘ಅಭಿಮನ್ಯು’ಗೆ ಸೋಮವಾರ ಮರದ ಅಂಬಾರಿ ತಾಲೀಮು ನಡೆಯಿತು. ಅವನ ಕುಮ್ಕಿ ಆನೆಗಳಾದ ಹೇಮಾವತಿ ಹಾಗೂ ಕಾವೇರಿ ಜೊತೆ ಹೆಜ್ಜೆ ಹಾಕಿದ ಗಜಪಡೆಯನ್ನು ನಾಗರಿಕರು ಕಣ್ತುಂಬಿಕೊಂಡರು  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರಿನಲ್ಲಿ ಗಜಪಡೆಯ ಕ್ಯಾಪ್ಟನ್‌ ‘ಅಭಿಮನ್ಯು’ಗೆ ಸೋಮವಾರ ಮರದ ಅಂಬಾರಿ ತಾಲೀಮು ನಡೆಯಿತು. ಅವನ ಕುಮ್ಕಿ ಆನೆಗಳಾದ ಹೇಮಾವತಿ ಹಾಗೂ ಕಾವೇರಿ ಜೊತೆ ಹೆಜ್ಜೆ ಹಾಕಿದ ಗಜಪಡೆಯನ್ನು ನಾಗರಿಕರು ಕಣ್ತುಂಬಿಕೊಂಡರು  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಮರದ ಅಂಬಾರಿ ಹೊತ್ತ ‘ಅಭಿಮನ್ಯು’ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಅವನನ್ನು ನೋಡಲು ಜಂಬೂಸವಾರಿ ಹಾದಿಯಲ್ಲಿ ಜಮಾಯಿಸಿದ್ದ ನೂರಾರು ಜನರು ಕೈಮುಗಿದರು. 

ಕುಮ್ಕಿ ಆನೆಗಳಾಗಿ ‘ಕಾವೇರಿ’, ಕಿರಿಯಳಾದ ‘ಹೇಮಾವತಿ’ ಜೊತೆಗೆ ‘ಕ್ಯಾಪ್ಟನ್‌’ ಸಾಗುತ್ತಿದ್ದರೆ, ಉಳಿದ 11 ಆನೆಗಳು ಅವರನ್ನು ಅನುಸರಿಸಿದವು. 280 ಕೆ.ಜಿ. ತೂಕದ ಮರದ ಅಂಬಾರಿ, ನಮ್ದಾ ಗಾದಿ, ಮರಳಿನ ಮೂಟೆಗಳೂ ಸೇರಿದಂತೆ 750 ಕೆ.ಜಿಯಷ್ಟು ಭಾರ ಹೊತ್ತ ‘ಅಭಿಮನ್ಯು’ ಮಾವುತ ವಸಂತನ ಆಜ್ಞೆಯನ್ನು ಪಾಲಿಸಿದನು. ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ 5 ಕಿ.ಮೀ ದೂರವನ್ನು 1 ಗಂಟೆ 30 ನಿಮಿಷದಲ್ಲಿ ಕ್ರಮಿಸಿದನು.

ಮುಂದೆ ಅಭಿಮನ್ಯು ನಡೆಯುತ್ತಿದ್ದರೆ, ಭವಿಷ್ಯದ ಅಂಬಾರಿ ಆನೆಗಳಲ್ಲಿ ಒಂದಾದ ‘ಮಹೇಂದ್ರ’, ‘ಸುಗ್ರೀವ’, ‘ಗೋಪಿ’, ‘ಭೀಮ’, ‘ಶ್ರೀಕಂಠ’, ‘ರೂಪ’, ‘ಧನಂಜಯ’, ‘ಲಕ್ಷ್ಮಿ’, ‘ಪ್ರಶಾಂತ’, ‘ಕಂಜನ್‌’ ಹಾಗೂ ‘ಏಕಲವ್ಯ’ ಹೆಜ್ಜೆ ಹಾಕಿದರು. ‘ಅರ್ಜುನ’ ಕೊನೆಯ ಆನೆಯಾಗಿ ಬರುತ್ತಿದ್ದ ಜಾಗದಲ್ಲಿ ‘ಏಕಲವ್ಯ’ ಇದ್ದನು. 

ADVERTISEMENT

ಸಾಂಪ್ರದಾಯಿಕ ಪೂಜೆ:

ಸಂಜೆ 4ಕ್ಕೆ ಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯದಲ್ಲಿ ‘ಅಭಿಮನ್ಯು’ ಬೆನ್ನಿಗೆ ಗಾದಿ ಮತ್ತು ನಮ್ದಾ ಬಿಗಿದು, ಅರಮನೆಯ ಮರದ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಸಂಜೆ 4.50ಕ್ಕೆ ಅಂಬಾರಿ ಹಾಗೂ ಆನೆಗಳಿಗೆ ಸಾಂಪ್ರದಾಯಿಕವಾಗಿ ಡಿಸಿಎಫ್‌ ಐ.ಬಿ.ಪ್ರಭುಗೌಡ ಪೂಜೆ ಸಲ್ಲಿಸಿ ಬೂದುಗುಂಬಳ ಒಡೆದರು. ಅರಮನೆ ಅರ್ಚಕ ಪ್ರಹ್ಲಾದ ರಾವ್‌ ‘ಗಣಪತಿ’ ಹಾಗೂ ‘ದುರ್ಗಾ’ ಸ್ತೋತ್ರವನ್ನು ಹೇಳಿದರು.

ಆನೆಗಳ ಹಣೆಗಳಿಗೆ ಗಂಧ, ಅರಿಸಿನ ಹಚ್ಚಲಾಯಿತು. ಗರಿಕೆ, ಬೆಲ್ಲ, ಕಬ್ಬು, ಪಂಚ ಕಜ್ಜಾಯ, ಎಲೆ, ಅಡಿಕೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಪಂಚಫಲ, ಕಬ್ಬು– ಬೆಲ್ಲವನ್ನು ತಿನ್ನಿಸಲಾಯಿತು.‌ 5 ರಿಂದ 5.20ರವರೆಗೆ ಅಂಬಾರಿ ಕಟ್ಟುವ ಕಾರ್ಯ ನಡೆಯಿತು. ನಂತರ ಅಶ್ವರೋಹಿ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. 

ಭೀಮ ಕೂಗು:

ಕೋಟೆ ಆಂಜನೇಯ ಸ್ವಾಮಿ ದೇಗುಲ, ನಗರ ಬಸ್‌ ನಿಲ್ದಾಣ, ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್‌ ರಸ್ತೆಯುದ್ದಕ್ಕೂ ಜನರು ಜಮಾಯಿಸಿದ್ದರು. ‘ಭೀಮ’ ಆನೆಯನ್ನು ನೋಡುತ್ತಿದ್ದಂತೆ ಕೂಗಿದರು. ಅವನೂ ಸೊಂಡಿಲೆತ್ತಿ ಸಂತಸ ಉಕ್ಕಿಸಿದನು. 

ಮೈಸೂರಿನಲ್ಲಿ ಗಜಪಡೆಯ ಕ್ಯಾಪ್ಟನ್‌ ‘ಅಭಿಮನ್ಯು’ಗೆ ಸೋಮವಾರ ಮರದ ಅಂಬಾರಿ ತಾಲೀಮು ನಡೆಯಿತು. ಅವನ ಕುಮ್ಕಿ ಆನೆಗಳಾದ ಹೇಮಾವತಿ ಹಾಗೂ ಕಾವೇರಿ ಜೊತೆ ಹೆಜ್ಜೆ ಹಾಕಿದ ಗಜಪಡೆಯನ್ನು ನಾಗರಿಕರು ಕಣ್ತುಂಬಿಕೊಂಡರು  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

Highlights - ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಅಭಿಮನ್ಯು ಅನುಸರಿಸಿದ ಆನೆಗಳು ಕೈಮುಗಿದ ನಾಗರಿಕರಲ್ಲಿ ಧನ್ಯತಾ ಭಾವ 

Cut-off box - ‘5 ಆನೆಗಳಿಗೆ ತಾಲೀಮು’  ‘3ನೇ ಹಂತದ ಭಾರ ಹೊರುವ ತಾಲೀಮಿನಲ್ಲಿ ಮರದ ಅಂಬಾರಿ ಕಟ್ಟಲಾಗಿದೆ. ಅದನ್ನು ‘ಅಭಿಮನ್ಯು’ನಿಂದಲೇ ಆರಂಭಿಸಲಾಗಿದೆ. ಅವನೊಂದಿಗೆ 5 ಆನೆಗಳಿಗೆ ಈ ತಾಲೀಮು ನೀಡಲಾಗುತ್ತದೆ’ ಎಂದು ಡಿಸಿಎಫ್‌ ಐ.ಬಿ.ಪ್ರಭುಗೌಡ ಹೇಳಿದರು.  ‘ಬನ್ನಿಮಂಟಪದವರೆಗೆ ನಡೆಯುವ ತಾಲೀಮಾಗಿದ್ದು ಹೊಸ ಆನೆಗಳು ಅನುಭವಿ ಆನೆಗಳೊಂದಿಗೆ ಹೊಂದಿಕೊಂಡಿವೆ. ಎಲ್ಲವೂ ಆರೋಗ್ಯದಿಂದ ಇದ್ದು ತಾಲೀಮಿನಲ್ಲಿ ಭಾಗವಹಿಸುತ್ತಿವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.