ADVERTISEMENT

ಮೈಸೂರು | 27ರಂದು ಸಾರಂಗ ‘ಏರ್‌ ಶೋ’

ದಸರಾ: ಜಿಲ್ಲಾಡಳಿತದಿಂದ ಕಾರ್ಯಕ್ರಮ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:07 IST
Last Updated 5 ಸೆಪ್ಟೆಂಬರ್ 2025, 3:07 IST
<div class="paragraphs"><p>ಏರ್‌ ಶೋ</p></div>

ಏರ್‌ ಶೋ

   

ಎಕ್ಸ್‌ ಚಿತ್ರ–@BCCI

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ‘ವೈಮಾನಿಕ ಪ್ರದರ್ಶನ’ (ಏರ್‌ ಶೋ) ನಡೆಯಲಿದೆ.

ADVERTISEMENT

ಸೆ.27ರಂದು ಸಂಜೆ 5ಕ್ಕೆ ಪಂಜಿನ ಕವಾಯತು ಮೈದಾನದಲ್ಲಿ ‘ಸಾರಂಗ’ ಪ್ರದರ್ಶನ ಆಯೋಜಿಸಲಾಗಿದೆ. ಹೋದ ಬಾರಿ ನಡೆದಿರಲಿಲ್ಲ.

‘ವಿಜಯದಶಮಿ ದಿನದಂದೇ (ಅ.2) ಏರ್‌ಶೋ ನಡೆಯಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ತಿಳಿಸಿದ್ದರು. ಆದರೆ, ಜಿಲ್ಲಾಡಳಿತದಿಂದ ಗುರುವಾರ ಬಿಡುಗಡೆ ಮಾಡಿರುವ ಆಹ್ವಾನಪತ್ರಿಕೆಯ ಪ್ರಕಾರ ಸೆ.27ರಂದು ಪ್ರದರ್ಶನ ನಿಗದಿಯಾಗಿದೆ.

ಈ ಬಾರಿ 11 ದಿನಗಳವರೆಗೆ ‘ದಸರಾ’ ನಡೆಯುತ್ತಿರುವುದು ವಿಶೇಷ.

ಉತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಸೆ.22ರಂದು ಬೆಳಿಗ್ಗೆ 10.10ರಿಂದ 10.40ರೊಳಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಉದ್ಘಾಟನೆಗೊಳ್ಳಲಿದ್ದು, ಸಾಹಿತಿ ಬಾನು ಮುಷ್ತಾಕ್‌ ನೆರವೇರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಲ್ಗೊಳ್ಳುವರು. ಶಿಷ್ಟಾಚಾರದಂತೆ, ಇತರ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.

ಅಂದು ಸಂಜೆ 5ಕ್ಕೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು.

2ರಂದು ವಿಜಯದಶಮಿ ಮೆರವಣಿಗೆ: ಅ.2ರಂದು ಮಧ್ಯಾಹ್ನ 1ರಿಂದ 1.18ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ, ಸಂಜೆ 4.42ರಿಂದ 5.06ರವರೆಗೆ ವಿಜಯದಶಮಿ ಮೆರವಣಿಗೆಗೆ ಅರಮನೆ ಒಳಾವರಣದಲ್ಲಿ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲ್ಗೊಳ್ಳುವರು. ಸಂಸದರೂ ಆಗಿರುವ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಆಹ್ವಾನಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಮುಖ್ಯ ಅತಿಥಿಗಳಾಗಿರುವರು. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು.

ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಮೆರವಣಿಗೆ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವುದನ್ನು ಈ ವರ್ಷವೂ ಮುಂದುವರಿಸಲಾಗಿದೆ. ರಾಜವಂಶಸ್ಥರೇ ಸಂಸದರಾಗಿರುವುದರಿಂದ, ಸಂಸದರೂ ಪಾಲ್ಗೊಂಡಂತೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.