ADVERTISEMENT

ಮೈಸೂರು ದಸರಾ | ಗಜಪಡೆಗೆ ಜವಾಬ್ದಾರಿ ಹಂಚಿಕೆ: ಅಭಿಮನ್ಯುಗೆ ಕಾವೇರಿ, ರೂಪಾ ಸಾಥ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:36 IST
Last Updated 30 ಸೆಪ್ಟೆಂಬರ್ 2025, 6:36 IST
ಅರಮನೆಯಲ್ಲಿ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ, ರೂಪಾಳಿಂದ ಅಧಿಕಾರಿಗಳು ಗೌರವ ವಂದನೆ ಸ್ವೀಕರಿಸಿದರು (ಎಡಚಿತ್ರ). ಜಂಬೂಸವಾರಿ ಮೆರವಣಿಗೆ ತಾಲೀಮು ನಡೆಯುವಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಫಿರಂಗಿಗಳಿಂದ ಸಿಡಿಸಿದ ‘ಕುಶಾಲತೋಪು’            
ಅರಮನೆಯಲ್ಲಿ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ, ರೂಪಾಳಿಂದ ಅಧಿಕಾರಿಗಳು ಗೌರವ ವಂದನೆ ಸ್ವೀಕರಿಸಿದರು (ಎಡಚಿತ್ರ). ಜಂಬೂಸವಾರಿ ಮೆರವಣಿಗೆ ತಾಲೀಮು ನಡೆಯುವಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಫಿರಂಗಿಗಳಿಂದ ಸಿಡಿಸಿದ ‘ಕುಶಾಲತೋಪು’               

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಯ ದಿನದಂದು (ಅ.2) ಅಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ‘ಅಭಿಮನ್ಯು’ ಸತತ 6ನೇ ಬಾರಿಗೆ ಹೊರಲಿದ್ದು, ಅವನಿಗೆ ಕುಮ್ಕಿ ಆನೆಗಳಾಗಿ ‘ರೂಪಾ’ ಹಾಗೂ ‘ಕಾವೇರಿ’ ಸಾಥ್ ನೀಡಲಿದ್ದಾರೆ. 

ಅರಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಮಾವುತರು, ಕಾವಾಡಿಗರು, ಚಿರತೆ ಕಾರ್ಯಪಡೆ ಸಿಬ್ಬಂದಿಗೆ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆನೆಗಳ ಜವಾಬ್ದಾರಿ ಹಂಚಿಕೆಯನ್ನು ಮಾಡಿದರು. 

ನಿಶಾನೆ ಆನೆಯಾಗಿ ‘ಧನಂಜಯ’, ನೌಪತ್ ಆನೆಯಾಗಿ ‘ಗೋಪಿ’ ಆಯ್ಕೆಯಾಗಿದ್ದು, ಸಾಲಾನೆಗಳ ಮೂರು ತಂಡವನ್ನು ರಚಿಸಲಾಗಿದೆ. ಮೊದಲ ತಂಡವನ್ನು ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತಿದ್ದ ‘ಮಹೇಂದ್ರ’ ಮುನ್ನಡೆಸಲಿದ್ದು, ಅವನೊಂದಿಗೆ ಇದೇ ಮೊದಲ ಬಾರಿ ಬಂದಿರುವ ಹಾಗೂ ಪಟ್ಟದಾನೆಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ದೈತ್ಯ ‘ಶ್ರೀಕಂಠ’ ಹಾಗೂ ‘ಲಕ್ಷ್ಮಿ’ ಇರಲಿದ್ದಾರೆ. 

ADVERTISEMENT

ಸಾಲಾನೆಗಳ ಎರಡನೇ ತಂಡದಲ್ಲಿ ‘ಭೀಮ’, ‘ಕಂಜನ್’ ಹಾಗೂ ‘ಏಕಲವ್ಯ’ ಇರಲಿದ್ದು, 3ನೇ ತಂಡದಲ್ಲಿ ‘ಪ್ರಶಾಂತ’, ‘ಸುಗ್ರೀವ’ ಹಾಗೂ ‘ಹೇಮಾವತಿ’ ಹೆಜ್ಜೆ ಹಾಕಲಿದ್ದಾರೆ. ಇದೇ ಮೊದಲ ಬಾರಿ ಎಲ್ಲ 14 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಈ ಹಿಂದೆ ಒಂದೆರಡು ಆನೆಗಳಿಗೆ ವಿಶ್ರಾಂತಿ ನೀಡುವುದು ವಾಡಿಕೆಯಾಗಿತ್ತು. 

ಪರಿಶೀಲನೆ:

‘ಮಾವುತರು ಹಾಗೂ ಕಾವಾಡಿಗಳಿಗೆ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಅವರಿಗೆ ಸಮನಾದ ವೇತನ ನೀಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು’ ಎಂದು ಈಶ್ವರ ಖಂಡ್ರೆ ಹೇಳಿದರು. 

‘ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಯಶಸ್ವಿಯಾಗಿ ನೆರವೇರಲು ಮಾವುತರು ಹಾಗೂ ಕಾವಾಡಿಗರ ಪಾತ್ರ ದೊಡ್ಡದು. ಆನೆಗಳ ನಿರ್ವಹಣೆ, ಪಾಲನೆ, ಪೋಷಣೆಯಲ್ಲಿ ಸದಾ ನಿರತರಾಗಿರುವ ಅವರ ಬೇಡಿಕೆ ಈಡೇರಿಸಲು ಶ್ರಮಿಸುವೆ. ಅವರಿಗೆ ₹ 8 ಸಾವಿರ ಮೌಲ್ಯದ ಕಿಟ್‌ ಅನ್ನು ವಿತರಿಸಲು ಬಂದಿರುವೆ’ ಎಂದರು. 

‘ಬಳ್ಳೆಯಲ್ಲಿ ಅರ್ಜುನ ಆನೆಯ ಸ್ಮಾರಕ ಉದ್ಘಾಟಿಸಲಾಗಿದ್ದು, ಅವನು ಹುತಾತ್ಮನಾದ ಹಾಸನದ ಎಸಳೂರಿನಲ್ಲೂ ಸ್ಮಾರಕದ ಉದ್ಘಾಟನೆಯನ್ನು ತಿಂಗಳಲ್ಲೇ ನೆರವೇರಿಸಲಾಗುವುದು’ ಎಂದು ತಿಳಿಸಿದರು. 

‘ಮಾನವ– ವನ್ಯಜೀವಿ ಸಂಘರ್ಷ ತಡೆಯಲ್ಲಿ ರಾಜ್ಯದ ಅರಣ್ಯ ಇಲಾಖೆಯು ದೇಶದಲ್ಲೇ ಹೆಸರಾಗಿದೆ. ಇಲ್ಲಿನ 218 ಮಾವುತರು– ಕಾವಾಡಿಗರು ನುರಿತವರು. ಕಾಡಾನೆ ಹಾಗೂ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಮ್ಮ ಗಜಪಡೆ ಶ್ರಮ ದೊಡ್ಡದು. ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯದ ಸಚಿವರೂ ಆನೆಗಳ ನೆರವು ಬಯಸಿ ಬರುತ್ತಿದ್ದಾರೆ’ ಎಂದು ಹೇಳಿದರು.

ಇದೇ ವೇಳೆ ಚಿರತೆ ಕಾರ್ಯಪಡೆಯ ಹೊಸ ವಾಹನಗಳಿಗೆ ಹಸಿರು ನಿಶಾನೆ ತೋರಿದರು.  

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ರಾಜನ್‌, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರವಿಶಂಕರ್, ಡಿಸಿಎಫ್‌ಗಳಾದ ಪರಮೇಶ್, ಐ.ಬಿ.ಪ್ರಭುಗೌಡ, ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಶಂಕರೇಗೌಡ ಪಾಲ್ಗೊಂಡಿದ್ದರು.  

ಜಂಬೂಸವಾರಿ ಮೆರವಣಿಗೆ ತಾಲೀಮು ನಡೆಯುವಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಫಿರಂಗಿಗಳಿಂದ ಸಿಡಿಸಿದ ‘ಕುಶಾಲತೋಪು’ 

‘ನಿಯಮ ಉಲ್ಲಂಘನೆ: ಕಠಿಣ ಕ್ರಮ’ 

‘ಆನೆಗಳ ಜೊತೆ ಸೆಲ್ಫಿ ತೆಗೆದುಕೊಂಡ ಯುವತಿ ವಿರುದ್ಧ ಕ್ರಮ ವಹಿಸಲಾಗಿದೆ. ಮಾರ್ಗಸೂಚಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಎಚ್ಚರಿಸಿದರು.  ‘‍ಪೊಲೀಸರಿದ್ದರೂ ವಿಶೇಷ ಕಮಾಂಡೊ ಪಡೆಯನ್ನೂ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಪ್ರಭಾವ ಬಳಸಿ ಆನೆಗಳ ಬಳಿ ಬರುವಂತಿಲ್ಲ. ಆನೆಗಳ ಹಿತ ರಕ್ಷಣೆ ಇಲಾಖೆಗೆ ಮುಖ್ಯ. ನಿಯಮಗಳು ಎಲ್ಲರಿಗೂ ಅನ್ವಯ’ ಎಂದರು.  

ಮೆರವಣಿಗೆ ತಾಲೀಮು; ಗಜಪಡೆ ಸಿದ್ಧ

ಅರಮನೆಯಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆ 8ಕ್ಕೆ ಅಭಿಮನ್ಯು ರೂಪಾ ಕಾವೇರಿ ಸೇರಿದಂತೆ ಗಜಪಡೆಯ ಎಲ್ಲ ಆನೆಗಳು ಅಶ್ವಪಡೆ ಹಾಗೂ ಪೊಲೀಸ್‌ ಬ್ಯಾಂಡ್‌ ತುಕಡಿಗಳು ಪಥ ಸಂಚಲನದ ತಾಲೀಮು ನಡೆಸಿದವು.  ರಾಷ್ಟ್ರಗೀತೆ ಮೊಳಗಿದಾಗ ಫಿರಂಗಿದಳವು ಕುಶಾಲತೋಪು ಸಿಡಿಸಿತು. ಸಿಸಿಎಫ್‌ ಮನೋಜ್ ರಾಜನ್‌ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಡಿಸಿಪಿಗಳಾದ ಕೆ.ಎಸ್‌.ಸುಂದರ್ ರಾಜ್‌ ಬಿಂದುಮಣಿ ಡಿಸಿಎಫ್‌ ಐ.ಬಿ.ಪ್ರಭುಗೌಡ ಗೌರವ ವಂದನೆ ಸ್ವೀಕರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.