ADVERTISEMENT

ಮೈಸೂರು: ಸ್ತಬ್ಧಚಿತ್ರದಲ್ಲಿ ‘ಬಾಪು ಹೆಜ್ಜೆ ಗುರುತು’

ಪಾಲ್ಗೊಳ್ಳುವಂತೆ ಕೇಂದ್ರ ಸ್ವಾಮ್ಯದ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಪತ್ರ

ಎಂ.ಮಹೇಶ
Published 2 ಸೆಪ್ಟೆಂಬರ್ 2025, 6:45 IST
Last Updated 2 ಸೆಪ್ಟೆಂಬರ್ 2025, 6:45 IST
ಗಾಂಧೀಜಿ
ಗಾಂಧೀಜಿ   

ಮೈಸೂರು: ಮುಂಬರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ‘ಹೆಜ್ಜೆ ಗುರುತು’ಗಳನ್ನು ಬಿಂಬಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಬಾರಿಯ ಉತ್ಸವ 11 ದಿನಗಳವರೆಗೆ ಅಂದರೆ ಸೆ.22ರಿಂದ ಅ.2ರವರೆಗೆ ನಿಗದಿಯಾಗಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಗಾಂಧಿ ಜಯಂತಿಯ ದಿನವಾದ ಅ.2ರಂದು ನಡೆಯಲಿದೆ. ಆದ್ದರಿಂದ ಬಾಪುಗೆ ನಮಿಸುವ ಸ್ತಬ್ಧಚಿತ್ರಗಳಿಗೆ ಆದ್ಯತೆ ನೀಡಲು ಜಿಲ್ಲಾಡಳಿತ ಹಾಗೂ ಸ್ತಬ್ಧಚಿತ್ರ ಉಪಸಮಿತಿಯಿಂದ ಕ್ರಮ ವಹಿಸಲಾಗಿದೆ.

ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಅಥವಾ ತಂಗಿದ್ದ ಸ್ಥಳ, ಘಟನೆಗಳು, ಐತಿಹಾಸಿಕ ಯಾತ್ರೆ, ಸಭೆ–ಸಮಾರಂಭವನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುವಂತೆ ಜಿಲ್ಲಾಡಳಿತದಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಆಯಾ ಜಿಲ್ಲೆಯ ವಿಶೇಷ
ಗಳೊಂದಿಗೆ ರಾಷ್ಟ್ರಪಿತನನ್ನು ಕಟ್ಟಿಕೊಡುವ ಸನ್ನಿವೇಶವನ್ನು ಸೃಷ್ಟಿಸುವಂತೆ ಕೋರಲಾಗಿದೆ. ಈ ಮೂಲಕ, ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕೆಲಸ ಮಾಡಲು ತೀರ್ಮಾನಿಸಲಾಗಿದೆ.

ADVERTISEMENT

ಜಿಲ್ಲಾಧಿಕಾರಿಗಳಿಗೆ ಪತ್ರ: ‘ವಿನೂತನ, ಆಕರ್ಷಕ ಹಾಗೂ ಯಶಸ್ಸಿನ ಕಥೆಗಳನ್ನು ಹೇಳುವ ವಿನ್ಯಾಸ ಹೊಂದಿರುವ ಸ್ತಬ್ಧಚಿತ್ರಗಳನ್ನು ತಯಾರಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಮ್ಮ ಜಿಲ್ಲಾಧಿಕಾರಿಯವರು ಪತ್ರ ಬರೆದಿದ್ದಾರೆ. ಗಾಂಧೀಜಿಯವರನ್ನು ವಿಶೇಷವಾಗಿ ಸ್ಮರಿಸಲಾಗುವುದು. ಈ ಬಾರಿ ವಿಶೇಷವಾಗಿ, ಎಚ್‌ಎಎಲ್‌, ಎಚ್‌ಎಂಟಿ, ಏರ್‌ಫೋರ್ಸ್‌, ಮೈಸೂರು ಆಕಾಶವಾಣಿ 90 ವರ್ಷದ ಸಂಭ್ರಮ ಬಿಂಬಿಸುವುದು, ರಾಜೀವ್‌ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೆಎಂಎಫ್‌, ಸಿಎಸ್‌ಆರ್‌ಟಿಐ, ಆಯಿಷ್‌ ವಜ್ರ ಮಹೋತ್ಸವ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕೆಎಸ್‌ಆರ್‌ಟಿಸಿ ಮೊದಲಾದವುಗಳೂ ಪಾಲ್ಗೊಳ್ಳಲಿವೆ’ ಎಂದು ಸ್ತಬ್ಧಚಿತ್ರ ಉಪ ಸಮಿತಿಯ ಉಪ ವಿಶೇಷಾಧಿಕಾರಿ
ಯಾಗಿರುವ ಜಿಲ್ಲಾ ‍ಪಂಚಾಯಿತಿ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಪ್ರಭುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಧೀಜಿಯವರು ರಾಜ್ಯದಲ್ಲಿ ವಿವಿಧೆಡೆಗೆ ಭೇಟಿ ಕೊಟ್ಟಿದ್ದಾರೆ. ಅದನ್ನು ನೆನಪಿಗೆ ತಂದುಕೊಡುವಂತೆ ಸ್ತಬ್ಧಚಿತ್ರಗಳಿರಬೇಕು ಎಂದು ತಿಳಿಸಲಾಗಿದೆ. ಈ ಬಾರಿ ಜಿಲ್ಲೆಗಳ ಜೊತೆಗೆ ಇತರ 15 ಸರ್ಕಾರಿ ಸಂಸ್ಥೆಗಳ ಸ್ತಬ್ಧಚಿತ್ರಗಳು ರಾಜಮಾರ್ಗದಲ್ಲಿ ಸಾಗಲಿವೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬರಲಿವೆ. ಜಿಲ್ಲಾಧಿಕಾರಿಯವರು ವಿಶೇಷ ಕಾಳಜಿ ವಹಿಸಿ ಆ ಸಂಸ್ಥೆಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದಾರೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯದ್ದೂ ಪಾಲ್ಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಬಹುಮಾನಕ್ಕೆ ಜನರ ಅಂಕವೂ ಪರಿಗಣನೆ!:

‘ಈ ಬಾರಿಯೂ ಉತ್ತಮವಾದ ಸ್ತಬ್ಧಚಿತ್ರಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಲಾಗುವುದು. ಮೊತ್ತ ಜಾಸ್ತಿ ಮಾಡಲು ಯೋಜಿಸಲಾಗಿದೆ. ಜೊತೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರರ ಜೊತೆ ಸಾರ್ವಜನಿಕರೂ ಪಾಲ್ಗೊಳ್ಳುವಂತೆ ಮಾಡಲಾಗುವುದು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವವರು ನಿರ್ದಿಷ್ಟ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಅಂಕ ನೀಡುವಂತೆ ತಂತ್ರಾಂಶ ಸಿದ್ಧಪಡಿಸಲಾಗುವುದು. ಅವರು ನೀಡುವ ಪ್ರತಿಕ್ರಿಯೆಯನ್ನು ಪರಿಗಣಿಸಲಾಗುವುದು. ಇಷ್ಟವಾದ ಸ್ತಬ್ಧಚಿತ್ರಕ್ಕೆ ಅವರು ಅಂಕ ಕೊಡಬಹುದಾಗಿದೆ. ಈ ಬಗ್ಗೆ ಮುಂಚಿತವಾಗಿಯೇ ಸಾರ್ವಜನಿಕ ಪ್ರಕಟಣೆ ನೀಡಲಾಗುವುದು’ ಎಂದು ಪ್ರಭುಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.